ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಯಾರು: ಮಳೆ ಕೊರತೆ ನಡುವೆ ವಿದ್ಯುತ್‌ ಕಣ್ಣಾಮುಚ್ಚಾಲೆ

ಎಲ್ಲ ರೈತರ ಬಾಯಲ್ಲೂ ಒಂದೇ ಮಾತು ‘ಮಳೆ ಯಾವಾಗ ಬರುತ್ತೇ?’
Published 13 ಆಗಸ್ಟ್ 2023, 6:31 IST
Last Updated 13 ಆಗಸ್ಟ್ 2023, 6:31 IST
ಅಕ್ಷರ ಗಾತ್ರ

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯ ಎಲ್ಲ ರೈತರ ಬಾಯಲ್ಲೂ ಕೇಳಿ ಬರುವ ಮಾತೊಂದೆ ‘ಮಳೆ ಯಾವಾಗ ಬರುತ್ತೇ?’ ಹಿಂಗಾರು ಬೆಳೆ ರಾಗಿ ಬಿತ್ತನೆ ಮಾಡಿದ ಹಾಗೂ ಮಾಡದಿರುವ ರೈತರಲ್ಲಿ ಮುಂದೇನು ಎಂಬ ಅತಂಕದ ನಡುವೆಯೂ ತಾಲ್ಲೂಕು ವ್ಯಾಪ್ತಿಯಲ್ಲಿ ಶೇ 40ರಷ್ಟು ಬಿತ್ತನೆಯಾಗಿದೆ.

ಮಳೆ ಕೊರತೆಯಿಂದಾಗಿ ಈ ಬಾರಿ ಪೂರ್ವ ಮುಂಗಾರು ಬಿತ್ತನೆಯ ಹೆಸರು, ಅಲಸಂದೆ ಸ್ವಲ್ಪಮಟ್ಟಿಗೆ ಕೈ ಹಿಡಿಯಲಿಲ್ಲ. ಆದರೆ ಹಿಂಗಾರು ಬಿತ್ತನೆ ವೇಳೆಗೆ ಮಳೆ ಬಂದು ಬಿತ್ತನೆ ಸುಲಲಿತವಾಗಿ ನಡೆಯುವುದು ಎಂಬ ಕನಸಿಗೆ ಮಳೆ ತಣ್ಣೀರೆರಚಿದೆ. ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ಮಳೆಗಳು ಕೆಲ ಕಡೆ ಮಾತ್ರ ಸೋನೆ ಸಿಂಚನವಾಗಿ ರೈತರಲ್ಲಿ ಹಿಂಗಾರು ಕೈ ಹಿಡಿಯುವ ಆಶಾಭಾವ ತೋರಿತ್ತು. ಆದರೆ ನಂತರದ ದಿನಗಳಲ್ಲಿ ಆಗಸ್ಟ್‌ ತಿಂಗಳ ಮಧ್ಯ ಭಾಗಕ್ಕೆ ಬಂದರೂ ಬಿತ್ತನೆಗೆ ಪೂರಕ ಮಳೆ ಆಗುತ್ತಿಲ್ಲ.

ರೋಹಿಣಿ ಮಳೆ ನಂತರ ಮೃಗಶಿರಾ, ಆರಿದ್ರಾ, ಪುಷ್ಯ, ಪುನರ್ವಸು ಮಳೆಗಳು ಸಂಪೂರ್ಣವಾಗಿ ಕೈ ಕೊಟ್ಟಿವೆ. ಬಿತ್ತನೆ ಆರಂಭದ ಜುಲೈ ಮೊದಲ ವಾರದಿಂದ ಆಗಸ್ಟ್ ಮೊದಲ ವಾರದ ತನಕ ಸಂಪೂರ್ಣ ಹದ ಮಳೆ ಬಂದಿಲ್ಲ. ಈಗಾಗಲೇ ಆಶ್ಲೇಷಾ ಮಳೆ ಮುಗಿಯುತ್ತಾ ಬಂದಿದ್ದು, ಬಿತ್ತನೆ ಸಮಯ ಮುಗಿದು ಹೋಗುವ ಅತಂಕ ಎದುರಾಗಿದೆ.

ತಾಲ್ಲೂಕು ವ್ಯಾಪ್ತಿಯ ಕೆಲಕಡೆ ಮಾತ್ರ ಸೋನೆ ಮಳೆಯಾಗಿದೆ. ಉಳಿದಂತೆ ಮೋಡ ಮುಸುಕಿದ ವಾತಾವರಣವಷ್ಟೇ ಕಂಡು ಬಂದಿದೆ. ಆಗಾಗ ಗಾಳಿಯಲ್ಲಿ ತೇಲಿ ಬರುತ್ತಿದ್ದ ಸೋನೆಗೆ ಹದವಾಗದೆ ಹೊಲಕ್ಕೆ ಹೋಗಿ ನಿರಾಸೆಯಿಂದ ಮರಳುತ್ತಿದ್ದಾರೆ. ಕೆಲ ಕಡೆ ಬಿತ್ತನೆಗೆ ಪೂರಕ ಸಮಯ ಮುಗಿಯುತ್ತದೆ ಎಂದು ಬಿತ್ತನೆ ಮಾಡಿದ ರೈತರು ಹೊಲದಲ್ಲಿ ಪೈರು ಒಣಗುತ್ತಿರುವುದನ್ನು ನೋಡಿ ಆಕಾಶದತ್ತ ಮುಖ ಮಾಡಿದ್ದಾರೆ. ಬಿತ್ತನೆ ಮಾಡಿ ಸೋನೆ ಮಳೆಗೆ ಹುಟ್ಟಿರುವ ಪೈರು ಮಳೆಯಿಲ್ಲದೆ ಒಣಗುತ್ತಿದೆ.

ಒಂದು ತಿಂಗಳಿನಿಂದ ಮೋಡ ಮುಸುಕಿದ ವಾತಾವರಣ ಕೊನೆಗೊಂಡಿದೆ. ಕಳೆದರೆಡು ದಿನಗಳಿಂದ ಬಿಸಿಲಿನ ಉಷ್ಣತೆ ತೀವ್ರವಾಗಿದ್ದು ಪೈರುಗಳು ನೆಲದಲ್ಲಿಯೇ ಕಮರಿ ಹೋಗುತ್ತಿವೆ. ತೆಂಗು, ಅಡಿಕೆ ಸೇರಿದಂತೆ ಇತರ ಬೆಳೆಗಳಿಗೂ ಮಳೆ ಬಾರದಿರುವುದು ಸಂಕಷ್ಟ ತಂದೊಡ್ಡಿದೆ. ಮುಂಗಾರಿನ ವೇಳೆ ಒಮ್ಮೆ ತೋಟ, ಕಟ್ಟೆಗಳು ತುಂಬಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ ಮುಂಗಾರು ಮತ್ತು ಹಿಂಗಾರಿನ ಮಳೆಗಳು ರೈತರನ್ನು ಕೈಹಿಡಿಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ ಎಂದು ಗುರುವಾಪುರ ಗ್ರಾಮದ ಬಿ.ಎಲ್.ರೇಣುಕಪ್ರಸಾದ್‌ ಅತಂಕ ವ್ಯಕ್ತಪಡಿಸುತ್ತಾರೆ. ಮಳೆ ಬಾರದೆ ಹೋದರೆ ತೆಂಗು, ಅಡಿಕೆ ಸಹ ಒಣಗುವ ಸಾಧ್ಯತೆ ಹೆಚ್ಚಾಗಿದೆ.‌

ವಿದ್ಯುತ್‌ ಕಣ್ಣಾಮುಚ್ಚಾಲೆ: ಮಳೆ ಕೈಕೊಟ್ಟು ಅತಂಕದಲ್ಲಿರುವ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ನೀಡಿದ್ದರೆ ಸ್ವಲ್ಪ ಪ್ರಯೋಜನವಾಗುತ್ತಿತ್ತು. ಆದರೆ ವಿದ್ಯುತ್‌ ಉತ್ಪಾದನೆಯಲ್ಲಿ ಆಗಿರುವ ಏರುಪೇರಿನಿಂದ ಲೋಡ್‌ ಶೆಡ್ಡಿಂಗ್‌ ಆರಂಭವಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 8 ಗಂಟೆ ನೀಡುತ್ತಿದ್ದವರು ಈಗ 5 ಗಂಟೆ ಮಾತ್ರ ನೀಡುತ್ತಿದ್ದಾರೆ. ಅದಕ್ಕೂ ರೈತರು ಕಾದು ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ವಿದ್ಯುತ್‌ ನೀಡಿದರೆ ರೈತರು ಬಿತ್ತನೆ ಮಾಡಿರುವ ಹೊಲ ಹಾಗೂ ನಾಟಿ ಮಾಡಿರುವ ರಾಗಿ ಪೈರಿಗೆ ಸ್ವಲ್ಪ ನೀರು ನೀಡಿ ಜೀವ ಉಳಿಸಬಹುದು ಎನ್ನುತ್ತಾರೆ ಶರತ್‌.

ಬಿತ್ತನೆ ಸಮಯ ಮೀರಿಲ್ಲ

ರಾಗಿ ಬಿತ್ತನೆಗೆ ಇನ್ನೂ ಸಮಯ ಮೀರಿಲ್ಲ. ಈಗ ಮಳೆ ಬಂದರೂ ಮಳೆ ಬಿತ್ತನೆ ಮಾಡಬಹುದು. ದೀರ್ಘಾವಧಿ ಸಮಯದ ಬೀಜಗಳ ಬಿತ್ತನೆ ಬದಲೂ ಅಲ್ಪಾವಧಿ ಬೀಜಗಳ ಬಿತ್ತನೆ ಮಾಡಬಹುದು. ತಾಲ್ಲೂಕಿನಲ್ಲಿ 25 ಸಾವಿರ ಹೆಕ್ಟೇರ್‌ ರಾಗಿ ಬಿತ್ತನೆಯ ಗುರಿ ನಡುವೆ ಸುಮಾರು 14250 ಹೆಕ್ಟೇರ್‌ ಬಿತ್ತನೆಯಾಗಿದೆ. ಡಿ.ಆರ್.ಹನುಮಂತರಾಜು ಸಹಾಯಕ ಕೃಷಿ ನಿರ್ದೇಶಕ ಚಿಕ್ಕನಾಯಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT