ಮಂಗಳವಾರ, ಆಗಸ್ಟ್ 16, 2022
20 °C

ಸರದಿಯಲ್ಲಿ ಮದ್ಯದ ಖಾಲಿ ಬಾಟಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ನಗರದ ಎಪಿಎಂಸಿಯಲ್ಲಿ ಸೋಮವಾರ ರಾಗಿ ಖರೀದಿ ನೋಂದಣಿ ಪ್ರಕ್ರಿಯೆಯು ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದ್ದು, ರೈತರಿಗೆ ಟೋಕನ್ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿಯ ಆದೇಶದನ್ವಯ ಹೆಸರು ನೋಂದಣಿ ಮಾಡಿಸಲು ರೈತರು ಭಾನುವಾರ ರಾತ್ರಿಯೇ ಬಂದು ತಂಗಿದ್ದರು. ಬೆಳಿಗ್ಗೆ 9.30ಕ್ಕೆ ಖರೀದಿ ಕೇಂದ್ರದ ಬಳಿಗೆ ಬಂದ ಅಧಿಕಾರಿಗಳು ನೋಂದಣಿಗೆ ಮುಂದಾದಾಗ ಸರ್ವರ್ ಸಮಸ್ಯೆ ಎದುರಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ದಾಖಲೆಗಳನ್ನು ಪಡೆದು ಕೂಡಲೇ ನೋಂದಣಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಮುಂದಾದರು.

ಮಧ್ಯಾಹ್ನದವರೆಗೆ ಕಾಲಹರಣ ಮಾಡಿದ ಅಧಿಕಾರಿಗಳು ರೈತರ ಆಕ್ರೋಶವನ್ನು ಸಹಿಸಿಕೊಳ್ಳಲಾಗದೆ ಸರದಿ ಸಾಲಿನಲ್ಲಿ ನಿಂತಿದ್ದವರಿಗೆ ದಿನಾಂಕ ನಮೂದಿಸಿ ಟೋಕನ್ ವಿತರಿಸಿದರು. 800ಕ್ಕೂ ರೈತರಿಗೆ ಟೋಕನ್ ನೀಡಲಾಗಿದೆ.

ನೋಂದಣಿಗಾಗಿ ದಾಖಲೆ ಸಮೇತ ತಡರಾತ್ರಿಯೇ ಬಂದಿದ್ದ ರೈತರು ಸರದಿ ಸಾಲಿಗಾಗಿ ಕಲ್ಲು, ಚಪ್ಪಲಿ, ಬ್ಯಾಗ್, ಜೊತೆಗೆ ಮದ್ಯದ ಖಾಲಿ ಬಾಟಲಿಗಳನ್ನು ಇಟ್ಟುಕೊಂಡು ಕಾದು ಕುಳಿತಿದ್ದರು. 

‘ಭಾನುವಾರ ರಾತ್ರಿ ಊಟ ಮುಗಿಸಿಕೊಂಡು ಬಂದು ಸರದಿ ಸಾಲಿಗೆ ಕಲ್ಲು ಜೋಡಿಸಿ ಸಂಖ್ಯೆ ಬರೆದಿದ್ದೆವು. ರಾತ್ರಿಯೇ ನೂರಕ್ಕೂ ಹೆಚ್ಚು ಮಂದಿ ನಮ್ಮಂತೆಯೇ ಬಂದು ತಂಗಿದ್ದರು. ಇದೀಗ ಸಮಸ್ಯೆಯಾಗಿದೆ ಎಂದು ಟೋಕನ್ ನೀಡುತ್ತಿದ್ದಾರೆ. ನಮ್ಮ ಸಮಯ, ಶ್ರಮ ಎಲ್ಲವೂ ವ್ಯರ್ಥವಾಗಿದೆ’ ಎಂದು ಕಲ್ಕೆರೆ ಗ್ರಾಮದ ರೈತ ರಂಗಸ್ವಾಮಿ ಅಸಹಾಯಕತೆ ತೋಡಿಕೊಂಡರು.‌

‘ತಾಂತ್ರಿಕ ಸಮಸ್ಯೆಯಿಂದ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಟೋಕನ್ ವಿತರಣೆ ಮಾಡಲಾಗಿದೆ. ಶೀಘ್ರವೇ, ಆನ್‍ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಲಾ ಗುವುದು’ ಎಂದು ತಹಶೀಲ್ದಾರ್ ಆರ್.ಜೆ. ಚಂದ್ರಶೇಖರ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು