ಸೋಮವಾರ, ಮೇ 10, 2021
22 °C
ವಾಡಿಕೆಯಂತೆ ಪೂರ್ವ ಮುಂಗಾರು ಮಳೆ: ಫಲವತ್ತತೆ ಹೆಚ್ಚಿಸುವ ಯತ್ನ

ಮಾಗಿ ಉಳುಮೆಗೆ ಮುಂದಾದ ರೈತರು

ಎಚ್.ಬಿ. ಸುಪ್ರತೀಕ್ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ವಾಡಿಕೆಯಂತೆ ವರ್ಷದ ಪ್ರಾರಂಭದಲ್ಲಿಯೇ ಪೂರ್ವ ಮುಂಗಾರು ಮಳೆಯಾಗಿದ್ದು, ತಾಲ್ಲೂಕಿನಾದ್ಯಂತ ರೈತರು ಮಾಗಿ ಉಳುಮೆಗೆ ಮುಂದಾಗಿದ್ದಾರೆ.

ವರ್ಷಾರಂಭದಲ್ಲೇ ಸುರಿದ ಅಶ್ವಿನಿ ಮಳೆಗೆ ಇಳೆ ತಂಪಾಗಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಲು ಸೂಕ್ತವಾಗಿದೆ.

ಮಾಗಿ ಉಳುಮೆ: ಹಿಂಗಾರು ಬೆಳೆ ಕಟಾವಾಗಿ, ಭೂಮಿಯಲ್ಲಿ ತೇವಾಂಶವಿದ್ದಾಗ ಮುಂಗಾರು ಮಳೆ ಬಿದ್ದ ತಕ್ಷಣ ಉಳುಮೆ ಮಾಡುವ ಪ್ರಕ್ರಿಯೆಗೆ ಮಾಗಿ ಉಳುಮೆ ಎನ್ನುತ್ತಾರೆ. ಮಾಗಿ ಉಳುಮೆಯಿಂದ ಹಲವು ಪ್ರಯೋಜನಗಳಿದ್ದು, ಮಳೆ ನೀರು ಸ್ಥಳದಲ್ಲೇ ಇಂಗಿ ಹೆಚ್ಚು ಕಾಲ ತೇವಾಂಶ ಉಳಿದು ಮುಂದಿನ ಬೇಸಾಯ ಕೈಗೊಳ್ಳಲು ಹಾಗೂ ಅಂತರ್ಜಲ ಮಟ್ಟ ವೃದ್ಧಿಸಲು ಸಾಧ್ಯವಾಗುತ್ತದೆ. ಭೂಮಿಯಲ್ಲಿರುವ ಕಳೆ ಬೀಜ, ಕೋಶಾವಸ್ಥೆಯಲ್ಲಿರುವ ಕೀಟ, ರೋಗಕಾರಕ ಶೀಲಿಂಧ್ರಗಳನ್ನು ಹೊರ ಹಾಕಿದಾಗ ಗಾಳಿ, ಬಿಸಿಲು, ಹಕ್ಕಿಗಳಿಂದ ನಾಶವಾಗುತ್ತವೆ. ಭೂಮಿಯ ಮೇಲೆ ಬಿದ್ದಿರುವ ಎಲೆ, ಕಸ-ಕಡ್ಡಿ, ಕೂಳೆ ಭೂಮಿಯೊಳಗೆ ಸೇರಿ ಕೊಳೆತು ಮಣ್ಣಿನ ಸಾವಯವ ಇಂಗಾಲ ಹೆಚ್ಚಿ ಫಲವತ್ತತೆ ವೃದ್ಧಿಯಾಗುತ್ತದೆ.

ರೈತರು ಮಾಗಿ ಉಳುಮೆ ಪೂರ್ವದಲ್ಲಿ ಸಾವಯವಗೊಬ್ಬರ ಅಥವಾ ಕೊಟ್ಟಿಗೆಗೊಬ್ಬರ ಇದ್ದಲ್ಲಿ ಜಮೀನಿಗೆ ಹಾಕಿ ನಂತರ ಉಳುಮೆ ಮಾಡುವುದರಿಂದ ಮಣ್ಣಿನಲ್ಲಿ ಚೆನ್ನಾಗಿ ಬೆರೆತು ಬೆಳೆಗಳಿಗೆ ಹೆಚ್ಚಿನ ಪೋಷಕಾಂಶಗಳು ಸುಲಭವಾಗಿ ಲಭಿಸುತ್ತವೆ.

ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ಸುಮಾರು 7ರಿಂದ 8 ಸಾವಿರ ಹೆಕ್ಟೆರ್‌ನಷ್ಟು ಉಳುಮೆ ಮಾಡಿದರೆ, ಮುಂಗಾರು ಮಳೆಗೆ ಸುಮಾರು 25 ಸಾವಿರ ಹೆಕ್ಟರ್‌ನಷ್ಟು ಭೂಮಿಯನ್ನು ರೈತರು ಉಳುಮೆ ಮಾಡುತ್ತಾರೆ.

ವಾಡಿಕೆಯಂತೆ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಉದ್ದು ಹಾಗೂ ಎಳ್ಳು ಬಿತ್ತನೆಗೆ ಪೂರ್ವ ತಯಾರಿಯಾಗಿ ಮಾಗಿ ಉಳುಮೆ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಉತ್ತಮ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.