ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಪಾತ್ ವ್ಯಾಪಾರ: ಪುನರ್ ವಸತಿಗೆ ಆಗ್ರಹ

Last Updated 23 ಸೆಪ್ಟೆಂಬರ್ 2021, 3:36 IST
ಅಕ್ಷರ ಗಾತ್ರ

ತುಮಕೂರು: ಬೀದಿ ಬದಿ ವ್ಯಾಪಾರಿಗಳಿಗೆ ಪುನರ್ ವಸತಿ ಕಲ್ಪಿಸಿ, ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಚಿಂತಕ, ಹೋರಾಟಗಾರ ಸಿ.ಯತಿರಾಜು ಆಗ್ರಹಿಸಿದರು.

ನಗರದ ಜನ ಚಳವಳಿ ಕೇಂದ್ರದಲ್ಲಿ ಬುಧವಾರ ಸಿಐಟಿಯು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಘದ 21ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ತುಮಕೂರು ನಗರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಬೀದಿ ಬದಿ ವ್ಯಾಪಾರಿಗಳು ಕೈಗೆಟಕುವ ದರದಲ್ಲಿ ರುಚಿಯಾದ ಆಹಾರ, ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಬಡ ಜನರ ಮಿತ್ರರಾಗಿದ್ದಾರೆ. ವ್ಯಾಪಾರಿಗಳ ದತ್ತಾಂಶವನ್ನು ಸಮಗ್ರವಾಗಿ ಸಂಗ್ರಹಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು
ಆಗ್ರಹಿಸಿದರು.

ಬಡ ಜನರ ಪರವಾದ ಕಾನೂನು ಜಾರಿಯಲ್ಲಿ ಆಸಕ್ತಿ ತೋರದ ಮನಸ್ಥಿತಿ ವ್ಯಾಪಕವಾಗುತ್ತಿದೆ. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗಬೇಕು ಎಂದು ಸಲಹೆ ಮಾಡಿದರು.

ಬೀದಿ ಬದಿಯ ಎಲ್ಲಾ ವ್ಯಾಪಾರಿಗಳನ್ನು ಗುರುತಿಸಬೇಕು. ಕಡ್ಡಾಯವಾಗಿ ಮಹಾನಗರ ಪಾಲಿಕೆಯಿಂದ ಗುರುತಿನ ಕಾರ್ಡ್ ಕೊಡಿಸಬೇಕು. ನಗರದಲ್ಲಿ ಸುಮಾರು 8ರಿಂದ 9 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದು, ಪುನರ್ ವಸತಿಗೆ ಕನಿಷ್ಠ 50 ವೆಂಡಿಂಗ್ ಜೋನ್‌ಗಳನ್ನು ರೂಪಿಸಬೇಕು. ಮನೆ, ನಿವೇಶನ ಇಲ್ಲದವರನ್ನು ಗುರುತಿಸಿ ವಸತಿ ಸೌಲಭ್ಯ ನೀಡಬೇಕು, ಕನಿಷ್ಠ ₹1 ಲಕ್ಷವನ್ನು ಬಡ್ಡಿ ರಹಿತ ಸಾಲ ಕೊಡಬೇಕು ಎಂದು ಒತ್ತಾಯಿಸಿದರು.

‘ಹಾಲಿ ವ್ಯಾಪಾರ ಮಾಡುತ್ತಿರುವವ್ಯಾಪಾರಿಗಳಿಗೆ ಸೂಕ್ತ ಪುನರ್ ವಸತಿ ಕಲ್ಪಿಸದೆ ಒಕ್ಕಲೆಬ್ಬಿಸಬಾರದು. ಎಂ.ಜಿ.ರಸ್ತೆಯ ಬೀದಿ ಬದಿ ವ್ಯಾಪಾರಿಗಳಿಗೆ ಅದೇ ಜಾಗದಲ್ಲಿ ವ್ಯವಸ್ಥೆ ಮಾಡಬೇಕು. ಸ್ಮಾರ್ಟ್ ಸಿಟಿಯಲ್ಲಿ ನಿರ್ಮಾಣವಾಗುತ್ತಿರುವ ವೆಂಡಿಂಗ್ ಜೋನ್‌ಗಳಲ್ಲಿ ನಿಜವಾದ ವ್ಯಾಪಾರಿಗಳಿಗೆ ಮಳಿಗೆ ನೀಡಬೇಕು’ ಎಂದು ಒತ್ತಾಯಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಬಿದಿ ಬದಿ ವ್ಯಾಪಾರಿಗಳ ಸಂಘದ ಮುಖಂಡ ವಸೀಂ ಅಕ್ರಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎನ್.ಕೆ.ಸುಬ್ರಮಣ್ಯ, ಟಿ.ಎಸ್.ರಾಜಶೇಖರ್, ಶ್ರೀಧರ್, ಫುಡ್ ಕೋಟ್ ಪ್ರಕಾಶ್, ಶಿರಾ ಗೇಟ್‌ನ ಅಲ್ಲಬಕಾಶ್, ಶೆಟ್ಟಿಹಳ್ಳಿ ಪ್ರದೇಶದ ಮುಖಂಡರಾದ ತುಳಸಿ, ಅಶೋಕ ರಸ್ತೆಯ ಸಾಬ್ ಜಾನ್, ಜಿ.ಜಗದೀಶ್, ಸುಜಾತ, ಎಂ.ಜಿ.ರಸ್ತೆಯ ಪರವಾಗಿ ತಬೇಜ್ ಪಾಷ, ಗಿರಿ, ಶೇಕ್‍ಪಜ್ಮಾನ್ ಮಾತನಾಡಿದರು. ಮುತ್ತುರಾಜ್ ಸ್ವಾಗತಿಸಿ, ಎಚ್.ಕೆ.ರವಿಕುಮಾರ್ ವಂದಿಸಿದರು.

ಪದಾಧಿಕಾರಿಗಳು: ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಟಿ.ಎಸ್.ರಾಜಶೇಖರ್, ಉಪಾಧ್ಯಕ್ಷರಾಗಿ ಎಚ್.ಕೆ.ರವಿಕುಮಾರ್, ಜಿ.ಜಗದೀಶ್, ಶ್ರೀಧರ್, ಪ್ರಧಾನ ಕಾರ್ಯದರ್ಶಿಯಾಗಿ ವಸೀಂ ಅಕ್ರಂ, ಕಾರ್ಯದರ್ಶಿಯಾಗಿ ಪ್ರಕಾಶ್, ಅಲ್ಲಾ ಬಕಾಶ್, ಸೈಯದ್ ಅಸಿಪ್, ಸಂಘಟನಾ ಕಾರ್ಯದರ್ಶಿಯಾಗಿ ತುಳಸಿ, ಲಕ್ಷ್ಮಮ್ಮ, ಅಂಬಿಕಾ, ಸುಜಾತ,ಖಚಾಂಜಿಯಾಗಿ ಎನ್.ಮುತ್ತುರಾಜ್ ಆಯ್ಕೆ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT