ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ವೈದ್ಯನಿಗೆ ₹39 ಲಕ್ಷ ವಂಚನೆ

Published 20 ಫೆಬ್ರುವರಿ 2024, 4:50 IST
Last Updated 20 ಫೆಬ್ರುವರಿ 2024, 4:50 IST
ಅಕ್ಷರ ಗಾತ್ರ

ತುಮಕೂರು: ವೈದ್ಯರು, ವಕೀಲರು, ಎಂಜಿನಿಯರುಗಳು ಸೈಬರ್‌ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್‌ ಕೆಲಸ, ಟ್ರೇಡಿಂಗ್‌ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಸೆಗೆ ಬಿದ್ದು ಸೈಬರ್‌ ಜಾಲಕ್ಕೆ ಸಿಲುಕುತ್ತಿದ್ದಾರೆ.

ಜಯನಗರದ ನಿವಾಸಿ, ವೈದ್ಯ ಚಂದ್ರಶೇಖರ್‌ ಅವರು ಫೇಸ್‌ಬುಕ್‌ನಲ್ಲಿ ‘ಆನ್‌ಲೈನ್‌ ಟ್ರೇಡಿಂಗ್‌ ಮೂಲಕ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಜಾಹೀರಾತು ನೋಡಿ ₹39.31 ಲಕ್ಷ ಕಳೆದುಕೊಂಡಿದ್ದಾರೆ.

ಮೊದಲಿಗೆ ಡಿ. 13ರಂದು ‘ಜೈನ್‌ ಇನ್‌ವೆಸ್ಟ್‌ಮೆಂಟ್‌ ಅಕಾಡೆಮಿ’ ಎಂಬ ಟ್ರೇಡಿಂಗ್‌ ಕಂಪನಿಯಲ್ಲಿ ಟ್ರೇಡಿಂಗ್‌ ಮಾಡಿ ಶೇ 300ರಷ್ಟು ಲಾಭಗಳಿಸಬಹುದು ಎಂದು ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತಿನ ಲಿಂಕ್‌ ಕ್ಲಿಕ್‌ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ. ನಂತರ ವಾಟ್ಸ್‌ ಆ್ಯಪ್‌ ಮೂಲಕ ‘ಜೆಟಿಎಫ್‌ಎಸ್‌ಇ’ ಎಂಬ ಆ್ಯಪ್‌ ಲಿಂಕ್‌ ಕಳುಹಿಸಿ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ₹23.70 ಲಕ್ಷ ಹಣವನ್ನು ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದ್ದಾರೆ.

ಜ. 2ರಂದು ಇದೇ ರೀತಿಯಾಗಿ ‘ವಿಂಟೊನ್‌ ಸ್ಟಾಕ್‌’ ಎಂಬ ಟ್ರೇಡಿಂಗ್‌ ಕಂಪನಿಯ ಜಾಹೀರಾತು ನೋಡಿ ‘ಎಆರ್‌ಐಎಚ್‌ ಪ್ಲಸ್‌’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಸದರಿ ಆ್ಯಪ್‌ನಲ್ಲಿ ತಿಳಿಸಿದ ವಿವಿಧ ಖಾತೆಗಳಿಗೆ ಫೆ. 14ರ ವರೆಗೆ ಒಟ್ಟು ₹23.80 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ.

ಜ. 16ರಂದು ‘ಎಸ್‌156 ಇನ್ವೆಸ್ಟ್‌ ಅಲೈಯನ್ಸ್‌’ ಎಂಬ ಟ್ರೇಡಿಂಗ್‌ ಕಂಪನಿಯಲ್ಲಿ ಆನ್‌ಲೈನ್‌ ಟ್ರೇಡಿಂಗ್‌ ಮೂಲಕ ಹಣ ಗಳಿಸಬಹುದು ಎಂಬ ಜಾಹೀರಾತಿನಲ್ಲಿದ್ದ ಲಿಂಕ್‌ ಕ್ಲಿಕ್‌ ಮಾಡಿ ನೋಂದಾಯಿಸಿ ಕೊಂಡಿದ್ದಾರೆ. ನಂತರ ‘ಪ್ರೈವೇಟ್ ಪ್ಲೇಸ್‌ಮೆಂಟ್ ವಿಐಪಿ.ಕಾಂ’ ಎಂಬ ಲಿಂಕ್‌ ಮೂಲಕ ಸೈಬರ್‌ ವಂಚಕರು ತಿಳಿಸಿದ ವಿವಿಧ ಖಾತೆಗಳಿಗೆ ₹7.50 ಲಕ್ಷ ಹಣ ಹಾಕಿದ್ದಾರೆ.

ಚಂದ್ರಶೇಖರ್‌ 3 ಆನ್‌ಲೈನ್‌ ಟ್ರೇಡಿಂಗ್‌ ಕಂಪನಿಗಳಲ್ಲಿ ಒಟ್ಟು ₹55 ಲಕ್ಷ ಹೂಡಿಕೆ ಮಾಡಿದ್ದು, ಅದರಲ್ಲಿ ₹15,68,500 ಮಾತ್ರ ವಾಪಸ್‌ ಹಾಕಿದ್ದಾರೆ. ಆನ್‌ಲೈನ್‌ ಟ್ರೇಡಿಂಗ್‌ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ, ಮೋಸ ಮಾಡಿದವರನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸುವಂತೆ ಕೋರಿ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

₹1.23 ಲಕ್ಷ ಕಳೆದುಕೊಂಡ ಎಂಜಿನಿಯರ್‌

ಯುಟ್ಯೂಬ್‌ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡಿದರೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ನಗರದ ಗೋಕುಲ ಬಡಾವಣೆ ನಿವಾಸಿ ಎಂಜಿನಿಯರ್‌ ಆಗಿರುವ ಆರ್‌.ಪೊಹಜೆಂಟಿ ಶಂಕರ್‌ ಎಂಬುವರಿಗೆ ₹1.23 ಲಕ್ಷ ವಂಚಿಸಲಾಗಿದೆ. ಫೆ. 14ರಂದು ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಿ ಎಂದು ವಾಟ್ಸ್ಆ್ಯಪ್‌ ಮೂಲಕ ಮೆಸೇಜ್‌ ಮಾಡಿದ್ದಾರೆ. ಸಬ್‌ಸ್ಕ್ರೈಬ್‌ ಮಾಡಿ ಸ್ಕ್ರೀನ್‌ಶಾರ್ಟ್‌ ಕಳುಹಿಸಿದ ನಂತರ ಶಂಕರ್‌ ಅವರ ಬ್ಯಾಂಕ್‌ ಖಾತೆಯ ವಿವರ ಪಡೆದು ₹300 ವರ್ಗಾವಣೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ ಒಳ್ಳೆಯ ಲಾಭ ಗಳಿಸಬಹುದು ಎಂದೂ ತಿಳಿಸಿದ್ದಾರೆ. ನಂತರ ₹2 ಸಾವಿರ ಹಣವನ್ನು ಸೈಬರ್‌ ಕಳ್ಳರು ತಿಳಿಸಿದ ಯುಪಿಐ ಐ.ಡಿಗೆ ವರ್ಗಾವಣೆ ಮಾಡಿದ್ದು ಶಂಕರ್‌ ಖಾತೆಗೆ ₹2800 ವಾಪಸ್‌ ಹಾಕಿದ್ದಾರೆ. ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ₹123600 ಹಣ ಪಡೆದು ಮೋಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT