ಬುಧವಾರ, ಆಗಸ್ಟ್ 17, 2022
23 °C

ಇಂಧನ ಬೆಲೆ ಏರಿಕೆ: ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ನಗರದ ಬುಕ್ಕಾಪಟ್ಟಣ ವೃತ್ತದಲ್ಲಿನ ಪೆಟ್ರೊಲ್‌ ಬಂಕ್ ಬಳಿ ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಇಂಧನ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು.

ದೇಶದ ಜನರಿಗೆ ಅಚ್ಚೇ ದಿನದ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ‌ ನೇತೃತ್ವದ ಬಿಜೆಪಿ ಸರ್ಕಾರ ಅತಿ ಹೆಚ್ಚು ಸೆಸ್ ವಿಧಿಸುವ ಮೂಲಕ ಲೀಟರ್ ಪೆಟ್ರೊಲ್ ₹100 ದಾಟುವಂತಾಗಿದೆ. ಡೀಸೆಲ್ ಲೀಟರ್‌ಗೆ ₹100 ಸಮೀಪಿಸಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸಾಮಾನ್ಯ ಜನರ ಹಣವನ್ನು ಕೇಂದ್ರ ಸರ್ಕಾರ ಪಿಕ್ ಪಾಕೆಟ್ ಮಾಡುವ ಮೂಲಕ ದೋಚುತ್ತಿದೆ. ಪೆಟ್ರೊಲ್, ಡೀಸೆಲ್ ಬೆಲೆ ಹೆಚ್ಚಾಗಿದ್ದು ಇದನ್ನು ವಿರೋಧಿಸಿ ಕಾಂಗ್ರೆಸ್ ಶನಿವಾರ ತಾಲ್ಲೂಕು ಮಟ್ಟದಲ್ಲಿ, ಭಾನುವಾರ ಹೋಬಳಿ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದರು.

ಕಾಂಗ್ರೆಸ್ ಮುಖಂಡ ಟಿ‌.ಬಿ‌.ಜಯಚಂದ್ರ ಮಾತನಾಡಿ, ಕೋವಿಡ್‌ನಿಂದಾಗಿ ಜನರು ತತ್ತರಿಸಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಡೀಸೆಲ್, ಪೆಟ್ರೊಲ್, ಅಡುಗೆ ಅನಿಲ, ಗೊಬ್ಬರ, ವಿದ್ಯುತ್ ದರ ಹೆಚ್ಚಿಸಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ‌ ಹೆಚ್ಚುವಂತಾಗಿದೆ. ಅಚ್ಚೇ ದಿನ್ ಹೆಸರಲ್ಲಿ ಅಧಿಕಾರಕ್ಕೆ ಬಂದ ಇವರು ಅಚ್ಚೇ ದಿನ ಎಂದರೆ ಏನು ಎನ್ನುವುದನ್ನು ಸಾಮಾನ್ಯ ಜನರಿಗೆ ತೋರಿಸಿದ್ದಾರೆ ಎಂದರು.

‘ದೇಶದ ಜಿಡಿಪಿ ದರ ಮೈನಸ್ 7.30ಕ್ಕೆ ತಲುಪಿದೆ 65 ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿ ಈ ಮಟ್ಟಕ್ಕೆ ಕುಸಿದಿರಲಿಲ್ಲ. ಜನರ ನೋವಿಗೆ ಸ್ವಂದಿಸದ ಇಂತಹ ಸರ್ಕಾರದಿಂದ ಯಾರಿಗೂ ಲಾಭವಿಲ್ಲ. ಬೆಲೆ ನಿಯಂತ್ರಿಸಲು ಸಾಧ್ಯವಾಗದಿದ್ದರೆ ಬಿಜೆಪಿ ಅಧಿಕಾರ ಬಿಟ್ಟು ಕೆಳಗೆ ಇಳಿಯಬೇಕು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾಖಾನ್, ಮುಖಂಡರಾದ ಬಿ.ಎನ್.ಚಂದ್ರಪ್ಪ, ಸಂಜಯ್ ಜಯಚಂದ್ರ, ಕಲ್ಕೆರೆ ರವಿಕುಮಾರ್, ಗುಳಿಗೇನಹಳ್ಳಿ ನಾಗರಾಜು, ಎಂ.ಆರ್.ಶಶಿಧರ್ ಗೌಡ, ಡಿ.ಸಿ.ಆಶೋಕ್, ದಯಾನಂದಗೌಡ, ಲಕ್ಕನಹಳ್ಳಿ ಕುಮಾರ್, ಬಾಲೇನಹಳ್ಳಿ ಪ್ರಕಾಶ್, ಜಿ.ಎಸ್.ರವಿ, ಮಾಗೋಡು ಶ್ರಿರಂಗಪ್ಪ, ರೇಖಾ ರಾಘವೇಂದ್ರ, ದೇವರಾಜು, ತಿಪ್ಪೇಶ್, ಹಾರೋಗೆರೆ ಮಹೇಶ್, ಎಚ್.ಎಲ್.ರಂಗನಾಥ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.