ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಈ ಊರು, ನಾಳೆ ಮತ್ತೊಂದೂರು ಸರಿಯೇ: ವಿ.ಸೋಮಣ್ಣಗೆ ಜಿ.ಪರಮೇಶ್ವರ ಪ್ರಶ್ನೆ

Published 12 ಏಪ್ರಿಲ್ 2024, 5:14 IST
Last Updated 12 ಏಪ್ರಿಲ್ 2024, 5:14 IST
ಅಕ್ಷರ ಗಾತ್ರ

ತುಮಕೂರು: ‘ಇಂದು ಈ ಊರು, ನಾಳೆ ಮತ್ತೊಂದು ಊರು. ಇದು ನಿಮಗೆ ಸರಿ ಕಾಣುತ್ತದೆಯೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಪ್ರಶ್ನಿಸಿದರು.

ನಗರದ ಹನುಮಂತಪುರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಿಗಳ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು.

‘ವಿಧಾನಸಭೆಯಲ್ಲಿ ಸೋಮಣ್ಣ ನನ್ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದರು. ಬೆಳಗಾಗುವುದರಲ್ಲಿ ಪಕ್ಷ ಬದಲಾಯಿಸಿದರು. ಕೇಳಿದ್ದಕ್ಕೆ ಜಿ.ಎಸ್.ಬಸವರಾಜು ಕರೆದುಕೊಂಡು ಹೋದರು ಎಂದರು. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿ ಅವರನ್ನು ಸೋಲಿಸುತ್ತೇನೆಂದು ವರುಣ, ಚಾಮರಾಜನಗರಕ್ಕೆ ಹೋಗಿ ತಾನೇ ಸೋತು ಬಂದಿದ್ದಾರೆ. ಮನುಷ್ಯನಿಗೆ ಶಾಂತಿ, ಸಮಾಧಾನ ಇರಬೇಕು’ ಎಂದು ಹೇಳಿದರು.

ಸಂಸದ ಜಿ.ಎಸ್.ಬಸವರಾಜು ಸಂಸತ್‌ನಲ್ಲಿ ಯಾವ ವಿಚಾರ ಪ್ರಸ್ತಾಪಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಐದು ವರ್ಷ ಬಾಯಿ ಬಿಡಲಿಲ್ಲ. ಆದರೆ ಮುದ್ದಹನುಮೇಗೌಡ ಎಚ್‌ಎಎಲ್, ಮಹಾದಾಯಿ ಯೋಜನೆ, ಕೊಬ್ಬರಿ ಬೆಳೆಗಾರರ ಸಮಸ್ಯೆ, ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಬೇಕು ಎಂಬ ಒತ್ತಾಯ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದರು.

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ದಿನಕ್ಕೊಂದು ರೀತಿ ಬಣ್ಣ ಬದಲಾಯಿಸುತ್ತಿದ್ದಾರೆ. ನನ್ನ ಉಸಿರು ಇರುವವರೆಗೂ ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಬಿಡುವುದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಎಚ್.ಡಿ.ದೇವೇಗೌಡ ಹೇಳಿದರು. ಈಗ ಮೋದಿಗಿಂತ ದೊಡ್ಡ ವ್ಯಕ್ತಿ ಪ್ರಪಂಚದಲ್ಲಿ ಯಾರೂ ಇಲ್ಲ ಎಂದು ಹೊಗಳುತ್ತಿದ್ದಾರೆ. ಯಾವ ರೀತಿ ಬಣ್ಣ ಬದಲಿಸುತ್ತಾರೆ ನೋಡಿ ಎಂದು ಕುಟುಕಿದರು.

ಎಚ್.ಡಿ.ದೇವೇಗೌಡ ಅವರು 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದಾಗ ನಾನೇ ಮೊದಲು ಒಪ್ಪಿಗೆ ಸೂಚಿಸಿದೆ. ನನಗೆ ಬುದ್ಧಿ ಬಂದಾಗಿನಿಂದ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ವೋಟು ಹಾಕಿರಲಿಲ್ಲ. ಕಳೆದ ಬಾರಿ ಜೆಡಿಎಸ್‌ಗೆ ಮತ ನೀಡಿದೆ. ಆದರೆ ಅವರು ಏನು ಮಾಡಿದರು ಎಂದು ಪ್ರಶ್ನಿಸಿದರು.

ಹಿಂದುಳಿದಿರುವ ತಿಗಳ ಸಮುದಾಯ ಶೋಷಣೆಗೆ ಒಳಗಾಗಿದೆ. ಈ ಸಮುದಾಯದ ಅಭಿವೃದ್ಧಿಗೆ ಬಿಜೆಪಿಯವರು ಏನು ಮಾಡಿಲ್ಲ. ಶೋಷಿತರ ಧ್ವನಿಯಾಗಿ ಇರುವವರ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಆದೇಶದ ಮೂಲಕ ಮೀಸಲಾತಿ ನೀಡಿದ್ದರೆ ಬಿಜೆಪಿಯವರು ಇಷ್ಟು ಹೊತ್ತಿಗೆ ವಾಪಸ್ ಪಡೆಯುತ್ತಿದ್ದರು. ಸಂವಿಧಾನದ ಮೂಲಕ ನೀಡಿರುವುದರಿಂದ ಅದು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡಿರುವುದು ಸರಿಯಾದ ಕ್ರಮವಲ್ಲ. ಇದು ಬಲಿಷ್ಠ ಸಮುದಾಯಗಳಿಗೆ ಅನುಕೂಲವಾಗಿದೆ. ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಶೇ 50ರಷ್ಟು ಇರುವ ಮೀಸಲಾತಿ ಮಿತಿಯನ್ನು ತೆಗೆದು ಹಾಕಿ, ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯ, ಸಮಾನತೆಗೆ ವಿರುದ್ಧವಾಗಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ವಿರೋಧಿಸುತ್ತಿದ್ದೇವೆಯೇ ಹೊರತು ಬೇರೆ ಕಾರಣಗಳಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ‘ನಾನು ಸಂಸದನಾಗಿದ್ದ ಸಮಯದಲ್ಲಿ ತಿಗಳ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದೇನೆ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮತ್ತೊಮ್ಮೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, ತಿಗಳ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಹನುಮದಾಸ, ಸಮುದಾಯದ ಮುಖಂಡರಾದ ನಾಗರಾಜು, ನರಸಿಂಹಮೂರ್ತಿ, ಸಿದ್ದೇಶ್, ಅರ್ಜುನ್, ಶಿವಣ್ಣ, ರೇವಣ್ಣಸಿದಯ್ಯ, ತರಕಾರಿ ಕೃಷ್ಣಪ್ಪ, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ್ ಹಾಲಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ, ಎನ್.ಗೋವಿಂದರಾಜ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT