ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್ | ನಿರ್ವಹಣೆ ಲೋಪ: ಉದ್ಯಾನ ಅಧ್ವಾನ

ಕುಣಿಗಲ್‌ನಲ್ಲಿವೆ ನಾಲ್ಕು ಪಾರ್ಕ್‌: ಕಾಳಜಿ ವಹಿಸದ ಜನಪ್ರತಿನಿಧಿಗಳು, ಅಧಿಕಾರಿಗಳು
Published 19 ಫೆಬ್ರುವರಿ 2024, 6:24 IST
Last Updated 19 ಫೆಬ್ರುವರಿ 2024, 6:24 IST
ಅಕ್ಷರ ಗಾತ್ರ

ಕುಣಿಗಲ್: ಪುರಸಭೆ ವ್ಯಾಪ್ತಿಯ ಉದ್ಯಾನಗಳು ನಿರ್ವಹಣೆ ಇಲ್ಲದೆ ಸೊರಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಳಜಿ ವಹಿಸದ ಕಾರಣ ಉದ್ಯಾನಗಳು ಅಧ್ವಾನದ ಕೇಂದ್ರಗಳಾಗಿವೆ.

ಪುರಸಭೆ ವ್ಯಾಪ್ತಿಯಲ್ಲಿ ದಾಖಲೆಗಳ ಪ್ರಕಾರ ನಾಲ್ಕು ಪ್ರಮುಖ ಉದ್ಯಾನಗಳಿದ್ದು, ಎಂಟು ಚಿಕ್ಕ ಉದ್ಯಾನಗಳಿವೆ. ಎಲ್ಲವೂ ನಿರ್ಲಕ್ಷ್ಯಕ್ಕೊಳಗಾಗಿದ್ದು, ಹೀಗೆಯೇ ಮುಂದುವರೆದರೆ ಉದ್ಯಾನಗಳ ಅಸ್ಥಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

ತುಮಕೂರು ರಸ್ತೆಯ ಬಾಳೇಗೌಡ ಉದ್ಯಾನ ಪ್ರಪ್ರಥಮ ಉದ್ಯಾನವಾಗಿದ್ದು, ಸ್ವಾತಂತ್ರ ಪೂರ್ವದಲ್ಲಿ ಪ್ರಜಾಪ್ರತಿನಿಧಿಯಾಗಿದ್ದ ಬಾಳೇಗೌಡರು ದಾನವಾಗಿ ನೀಡಿದ ಜಾಗವಾಗಿದೆ. ಅಲ್ಲಿನ ಕಾರಂಜಿ ಬಾವಿ, ಗುಂಬಝ್ ಸಹ ಮನರಂಜನೆ ತಾಣವಾಗಿತ್ತು. ಸಂಜೆಯಾದರೆ ಅಲ್ಲಿ ಬಿತ್ತರವಾಗುತ್ತಿದ್ದ ರೇಡಿಯೊ ಕಾರ್ಯಕ್ರಮ, ವಾರ್ತೆಗಳನ್ನು ಕೇಳಲು ಜನರು ಗುಂಪು ಸೇರುತ್ತಿದ್ದರು. ಪ್ರದೇಶ ಸಮಾಚಾರ, ವಾರ್ತೆ ಮತ್ತು ಚಿತ್ರಗೀತೆಗಳನ್ನು ಕೇಳಿ ಮನೆಗಳಿಗೆ ಹಿಂತಿರುಗುತ್ತಿದ್ದನ್ನು ಹಿರಿಯ ನಾಗರಿಕರ ಇಂದಿಗೂ ನೆನೆಯುತ್ತಾರೆ.

ಟಿವಿ ಬಂದಾಗ ಉದ್ಯಾನದಲ್ಲಿ ಕೊಠಡಿ ನಿರ್ಮಿಸಿ ಸಾರ್ವಜನಿಕರಿಗೆ ವೀಕ್ಷಣೆಗೆ ಅನವು ಮಾಡಿಕೊಟ್ಟಿದ್ದು ಸಹ ನೆನಪಿನಲ್ಲಿದೆ ಎಂದು ಮೆಲುಕು ಹಾಕುತ್ತಾರೆ ಹಿರಿಯರಾದ ರೇವಣ್ಣ.

ಎಚ್. ನಿಂಗಪ್ಪ ಅವರು ಶಾಸಕರಾಗಿದ್ದಾಗ ಉದ್ಯಾನವನ್ನು ಮತ್ತಷ್ಟೂ ಅಭಿವೃದ್ಧಿ ಪಡಿಸಲಾಗಿತ್ತು. ಆಲಂಕಾರಿಕ ಗಿಡಗಳನ್ನು ನೆಡಲಾಗಿದ್ದು, ಮಕ್ಕಳ ಆಕರ್ಷಕ ಆಟಿಕೆಗಳನ್ನು ಅಳವಡಿಸಲಾಗಿತ್ತು. ಕ್ರಮೇಣ ಎಲ್ಲವೂ ಶಿಥಿಲವಾಗಿದ್ದು, ಕಾರಂಜಿ ಬಾವಿ ಕಸ ಸಂಗ್ರಹ ತೊಟ್ಟಿಯಾಗಿದೆ. ಗಿಡ ಮರಗಳಿಗೆ ಸಕಾಲದಲ್ಲಿ ನೀರು ನೀಡದ ಕಾರಣ ಒಣಗಿ ಮುರಿದು ಬೀಳುತ್ತಿವೆ.

ಕುವೆಂಪು ನಗರದ ಅಂಧರ ಶಾಲೆ ಪಕ್ಕ ಮತ್ತು ಹಿಪ್ಪೆತೋಪ್ಪಿನ ಬಳಿಯ ಕುವೆಂಪು ಜನ್ಮ ಶತಾಬ್ಧಿ ವೈ.ಕೆ.ಆರ್ ಉದ್ಯಾನವನ್ನು ವೈ.ಕೆ.ರಾಮಯ್ಯ ನಿರ್ಮಿಸಿದ್ದು, ಪ್ರಾರಂಭದಲ್ಲಿ ಚೆನ್ನಾಗಿದ್ದರೂ ನಂತರ ದಿನಗಳಲ್ಲಿ ನಿರ್ವಹಣೆ ಇಲ್ಲದೆ, ಗಿಡಮರಗಳು ಒಣಗಿ ಕಳಾಹೀನಾವಾಗಿವೆ. ಅಲ್ಲಿನ ಆಲಂಕಾರಿಕ ದೀಪಗಳು ಅವಶೇಷವಾಗಿ ಉಳಿದಿವೆ.

ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಹೌಸಿಂಗ್ ಬೋರ್ಡ್‌ನಿಂದ ಮನೆ ನಿರ್ಮಾಣ ಸಮಯದಲ್ಲಿ ಉದ್ಯಾನ ನಿರ್ಮಿಸಿದ್ದು, ನಿರ್ವಹಣೆ ಲೋಪದಿಂದ ಉದ್ಯಾನದ ಜಾಗದಲ್ಲಿ ದೇವಾಲಯ ನಿರ್ಮಿಸಲು ಹೋದ ಸಮಯದಲ್ಲಿ ವಿವಾದವಾಗಿತ್ತು. ಎರಡು ದೇವಾಲಯಗಳು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿದೆ. ಅಂಗನವಾಡಿ ಕೇಂದ್ರ, ಕುಡಿಯುವ ನೀರಿನ ಘಟಕ ನಿರ್ಮಾಣವಾಗಿ ಉದ್ಯಾನದ ಅವಶೇಷವೂ ಇಲ್ಲದಂತಾಗಿದೆ.

ಹಿಪ್ಪೆತೋಪಿನ ಬಳಿಯ ಕುವೆಂಪು ಶತಾಬ್ದಿ ವೈಕೆಆರ್‌ ಉದ್ಯಾನಕ್ಕೆ ಬೀಗ ಹಾಕಲಾಗಿದೆ
ಹಿಪ್ಪೆತೋಪಿನ ಬಳಿಯ ಕುವೆಂಪು ಶತಾಬ್ದಿ ವೈಕೆಆರ್‌ ಉದ್ಯಾನಕ್ಕೆ ಬೀಗ ಹಾಕಲಾಗಿದೆ

ಪುರಸಭೆಯ ಮೂರು ಉದ್ಯಾನಗಳ ನಿರ್ವಹಣೆಗೆ ವರ್ಷಕ್ಕೆ ₹10 ಲಕ್ಷವನ್ನು ಪುರಸಭೆ ಭರಿಸುತ್ತಿದ್ದು, ನಿರ್ವಹಣೆ ಮಾತ್ರ ಶೂನ್ಯವಾಗಿದೆ. ಮೂರರಲ್ಲೂ ನೀರಿನ ಲಭ್ಯತೆ ಇದ್ದರೂ, ಬಳಕೆ ಮಾಡಲು ವಿಫಲವಾದ ಕಾರಣ ಉದ್ಯಾನದ ಮರ, ಗಿಡಗಳು ಒಣಗಲು ಕಾರಣವಾಗಿದೆ.

ಉದ್ಯಾನಕ್ಕೆ ಮೀಸಲಿಟ್ಟ ಜಮೀನು ಕಾಣೆ: ಪುರಸಭೆ ಭೂ ಪರಿವರ್ತನೆ ಸಮಯದಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟ ಜಮೀನು ಕಾಣೆಯಾಗಿರುವ ಪ್ರಸಂಗಗಳೂ ನಡೆದಿದೆ. 1982ರಲ್ಲಿ ಎಂಟು ಎಕರೆ ಜಮೀನಿನಲ್ಲಿ ‘ಡಿ’ ಗ್ರೂಪ್ ಬಡಾವಣೆ ನಿರ್ಮಾಣದ ಸಮಯದಲ್ಲಿ 180- 240 ಅಡಿ ನಿವೇಶನವನ್ನು ಉದ್ಯಾನಕ್ಕಾಗಿ ಮೀಸಲಿಟ್ಟಿದ್ದು, ಈ ಜಾಗ ಕಣ್ಮರೆಯಾಗಿದೆ. 19ನೇ ವಾರ್ಡ್‌ನಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟ 100-180 ನಿವೇಶನ ಮಾರಾಟವಾಗಿರುವ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. 20ನೇ ವಾರ್ಡ್‌ನಲ್ಲೂ ಉದ್ಯಾನಕ್ಕೆ ಮೀಸಲಿಟ್ಟ ಜಾಗ ಕಣ್ಮರೆಯಾಗಿದೆ.

ಕುವೆಂಪು ನಗರದ ಅಂಧರ ಶಾಲೆ ಪಕ್ಕದ ಉದ್ಯಾನದ ಸ್ಥಿತಿ
ಕುವೆಂಪು ನಗರದ ಅಂಧರ ಶಾಲೆ ಪಕ್ಕದ ಉದ್ಯಾನದ ಸ್ಥಿತಿ

ಭೂಪರಿವರ್ತನೆ ಸಮಯದಲ್ಲಿ ಹತ್ತು ಲೇಔಟ್‌ಗಳಲ್ಲಿ ಉದ್ಯಾನ ಜಾಗ ಮೀಸಲಿಟ್ಟಿದ್ದರೂ ಪುರಸಭೆಯವರು ವಶಕ್ಕೆ ಪಡೆದು ದಾಖಲೆ ಮಾಡುವುದರಲ್ಲಿ ನಿರ್ಲಕ್ಷ್ಯ ತೋರಿರುವ ಕಾರಣ ಪರಭಾರೆಯಾಗುವ ಸಾಧ್ಯತೆಗಳಿದ್ದು, ಅಧಿಕಾರಿಗಳು ಎಚ್ಚರವಹಿಸಬೇಕಿದೆ ಎಂದು ನಾಗರಿಕರು ಮನವಿ ಮಾಡಿದ್ದಾರೆ.

ವೈ.ಎಚ್.ರವಿಚಂದ್ರ
ವೈ.ಎಚ್.ರವಿಚಂದ್ರ
ನಿರ್ವಹಣೆ ವೆಚ್ಚ ದುರುಪಯೋಗ
ಉದ್ಯಾನಗಳ ನಿರ್ವಹಣೆಯಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಪುರಸಭೆ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಅಧಿಕಾರವಹಿಸಿಕೊಂಡು 11 ತಿಂಗಳಾದರೂ, ಪುರಸಭೆ ವ್ಯವಸ್ಥೆ ಬಗ್ಗೆ ಗಮನಹರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಕೆಳ ಹಂತದ ಅಧಿಕಾರಿಗಳು ನಿರ್ವಹಣೆ ವೆಚ್ಚವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಗಮನಹರಿಸಿ ವ್ಯವಸ್ಥೆ ಸರಿಪಡಿಸಬೇಕಿದೆ. ಉದ್ಯಾನಗಳ ನಿರ್ವಹಣೆಯ ಲೋಪಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮತೆಗೆದುಕೊಳ್ಳಬೇಕು.– ವೈ.ಎಚ್.ರವಿಚಂದ್ರ, ಸಂಚಾಲಕ ಕುಣಿಗಲ್ ಅಭಿವೃದ್ಧಿ ಫೋರಂ
ಮಾರುತಿ
ಮಾರುತಿ
ನಿರ್ವಹಣೆಗೆ ಬೇಕು ವ್ಯವಸ್ಥಿತ ಸಮಿತಿ
ಪರಿಸರ ಕಾಳಜಿ ಇಲ್ಲದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣದ ಉದ್ಯಾನಗಳು ಅಧ್ವಾನ ಕೇಂದ್ರಗಳಾಗಿವೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಉದ್ಯಾನಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ, ಸುಧಾರಿಸಬೇಕಿದೆ. ಈ ಹಿಂದೆ ಕೆಲ ಕಾರ್ಖಾನೆಯವರು ಉದ್ಯಾನ ನಿರ್ವಹಣೆಗೆ ಮುಂದೆ ಬಂದಿದ್ದರೂ ಅಧಿಕಾರಿಗಳು ಅನುಮತಿ ನೀಡಿಲ್ಲ. ಉದ್ಯಾನ ನಿರ್ವಹಣೆಗೆ ವ್ಯವಸ್ಥಿತ ಸಮಿತಿ ರಚಿಸಬೇಕು. –ಮಾರುತಿ, ಟೌನ್ ಸಹಕಾರ ಸಂಘದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT