ಗೋಡೆ ಕೊರೆದು ಬ್ಯಾಂಕ್ ದರೋಡೆ ಯತ್ನ

7
ಸಮಯಪ್ರಜ್ಞೆ ಮೆರೆದ ಗ್ರಾಮಸ್ಥರು; ಚಿಕ್ಕಕೆರೆ ಹಿನ್ನೀರಿನ ಪ್ರದೇಶದ ಮೂಲಕ ಪರಾರಿಯಾದ ದರೋಡೆಕೋರರು

ಗೋಡೆ ಕೊರೆದು ಬ್ಯಾಂಕ್ ದರೋಡೆ ಯತ್ನ

Published:
Updated:
Deccan Herald

ಕುಣಿಗಲ್: ಗ್ರಾಮಸ್ಥರ ಸಮಯಪ್ರಜ್ಞೆಯಿಂದಾಗಿ ಬ್ಯಾಂಕ್ ದರೋಡೆ ಸಿನಿಮಿಯ ರೀತಿಯಲ್ಲಿ ವಿಫಲವಾದ ಘಟನೆ ತಾಲ್ಲೂಕಿನ ಗವಿಮಠ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.

ಕುಣಿಗಲ್ – ಮದ್ದೂರು ರಸ್ತೆಯ ಚಿಕ್ಕಕೆರೆ ಗವಿಮಠ ಸಮೀಪದಲ್ಲಿರುವ ವಿಜಯಬ್ಯಾಂಕ್ ಶಾಖೆಗೆ ಮಧ್ಯರಾತ್ರಿ 8ರಿಂದ 10 ಮಂದಿಯ ಗುಂಪು ಕಟ್ಟಡದ ಗೋಡೆ ಕೊರೆದು ದರೋಡೆಗೆ ಯತ್ನಿಸಿದೆ.

ಗೋಡೆ ಕೊರೆಯುವ ಶಬ್ದ ಕೇಳಿದ ಬ್ಯಾಂಕ್ ಸಮೀಪದ ಮನೆಯ ಲೋಹಿತಾಶ್ವ ಅನುಮಾನಗೊಂಡು ಹೊರಗೆ ಬಂದು ನೋಡಿದರು. ಬಳಿಕ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ವೆಂಕಟೇಶ್ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಗ್ರಾಮಸ್ಥರು ಗುಂಪುಗೂಡಿ ಬ್ಯಾಂಕ್‌ ಬಳಿಗೆ ಬಂದರು. ಆಗ ದರೋಡೆಕೋರರ ಗುಂಪು ಕಲ್ಲುಗಳನ್ನು ತೂರಿ ಗ್ರಾಮಸ್ಥರನ್ನು ಹಿಮ್ಮೆಟ್ಟಿಸಲು ಯತ್ನಿಸಿತು. ಆಗ, ಗ್ರಾಮಸ್ಥರು ಸಹ ಕಲ್ಲುಗಳನ್ನು ತೂರಿದರು.

ಸುದ್ದಿತಿಳಿದ ಕುಣಿಗಲ್ ಪಿಎಸ್ಐ ಪುಟ್ಟೇಗೌಡ, ಪುಟ್ಟಸ್ವಾಮಿ ಸಿಬ್ಬಂದಿಯೊಂದಿಗೆ ಬರುವ ವೇಳೆಗಾಗಲೇ ದರೋಡೆಕೋರರು ಚಿಕ್ಕಕೆರೆ ಹಿನ್ನೀರಿನ ಪ್ರದೇಶದ ಮೂಲಕ ಪರಾರಿಯಾಗಿದ್ದರು.

ಸಿ.ಸಿ.ಟಿ.ವಿ ನಾಶ: ‘ದರೋಡೆಕೋರರು ಮೊದಲಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದಾರೆ. ನಂತರ ಭದ್ರತಾ ಕೊಠಡಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಗೋಡೆ ನಾಶಗೊಳಿಸುವ ಯತ್ನದಲ್ಲಿ ತೊಡಗಿದ್ದರು. ಕಂಪ್ಯೂಟರ್ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾಗಳ ಡಿವಿಆರ್‌ಗಳನ್ನು ಚಿಕ್ಕಕೆರೆ ಅಂಗಳದಲ್ಲಿ ನಾಶಪಡಿಸಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ವ್ಯವಸ್ಥಿತ ಸಂಚು: ‘ದರೋಡೆಕೋರರು ವ್ಯವಸ್ಥಿತ ಸಂಚು ರೂಪಿಸಿದ್ದರು. ಕೆಲವರು ಬ್ಯಾಂಕ್ ಸುತ್ತ ಕಾವಲಿದ್ದರು. ಮತ್ತೆ ಕೆಲವರು ಬ್ಯಾಂಕ್ ಹಿಂಭಾಗದ ಗೋಡೆ ಕೊರೆದು ಒಳ ನುಗ್ಗಿದ್ದರು. ಮತ್ತೆ ಕೆಲವರು ಬ್ಯಾಂಕ್ ಮೇಲ್ಭಾಗದಲ್ಲಿ ಕಾಯುತ್ತಿದ್ದರು’ ಎಂದು ಪ್ರತ್ಯಕ್ಷದರ್ಶಿ ಲೋಹಿತಾಶ್ವ ತಿಳಿಸಿದರು.

ಕುಣಿಗಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಪರಿಶೀಲನೆ ನಡೆಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !