ಭಾನುವಾರ, ಏಪ್ರಿಲ್ 18, 2021
33 °C

ಮಧುಗಿರಿ: ಜಾತ್ರೆಗೆ ‘ಹಳ್ಳಿಕಾರ್’ ಹಸುಗಳ ರಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ಇಲ್ಲಿನ ಇತಿಹಾಸ ಪ್ರಸಿದ್ಧ ದಂಡಿನ‌ ಮಾರಮ್ಮ ದೇವಿಯ ಜಾತ್ರೆಗೆ ಸೇರಿದ್ದ ಸಾವಿರಾರು ಹಳ್ಳಿಕಾರ್ ತಳಿಯ ಹಸುಗಳು ಎಲ್ಲರ ಗಮನ ಸೆಳೆಯಿತು.

ಜಾತ್ರೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಜಾನುವಾರು ಬಂದಿದ್ದವು. ಬಹುತೇಕ ರೈತರು ತಮ್ಮ ಜಾನುವಾರುಗಳಿಗೆ ಹೂವಿನಹಾರ, ಕೆಂಪು ಟೇಪು, ಕಪ್ಪು ಟೇಪು ಹಾಗೂ ವಿವಿಧ ಬಣ್ಣದ ಹಗ್ಗಗಳಿಂದ ಶೃಂಗರಿಸಿ ಜಾತ್ರೆಗೆ ಕರೆತಂದರು.

ಉತ್ತಮ ಬೆಲೆ ಬಾಳುವ ಜಾನುವಾರುಗಳಿಗೆ ನೆರಳಿಗಾಗಿ ಹಾಗೂ ಆಕರ್ಷಣೆಗಾಗಿ ದೊಡ್ಡ ದೊಡ್ಡ ಪೆಂಡಾಲ್ ಹಾಕಲಾಗಿತ್ತು. ಜಾತ್ರೆ ಸಂದರ್ಭಗಳಲ್ಲಿ ರಾಸುಗಳಿಗೆ ಹುರುಳಿ, ಬೆಲ್ಲ, ಮೊಟ್ಟೆ, ಮೊಸರು, ಮಜ್ಜಿಗೆ ಸೇರಿದಂತೆ ಗುಣಮಟ್ಟದ ಆಹಾರಗಳನ್ನು ನೀಡುತ್ತಿದ್ದ ದೃಷ್ಯಗಳು ಕಂಡುಬಂದವು.

ಜಾತ್ರೆಗೆ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು, ಅನಂನಪುರ, ಹಿಂದೂಪುರ, ಮಡಕಶಿರಾ, ನೆಲಮಂಗಲ, ಗುಬ್ಬಿ, ಶಿರಾಸೇರಿದಂತೆ ಅನೇಕ ಊರುಗಳಿಂದ ರೈತರು, ದಲ್ಲಾಳಿಗಳು ಜಾತ್ರೆಗೆ ಬಂದಿದ್ದರು.

ಜಾತ್ರೆಯಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಿದ್ದರು. ಪಶು ಇಲಾಖೆಯಿಂದ ಆಸ್ಪತ್ರೆ ತೆರೆದು ಔಷಧಗಳನ್ನು ಉಚಿತವಾಗಿ ವಿತರಿಸುತ್ತಿದ್ದರು.

ದಂಡಿನ ಮಾರಮ್ಮ ದೇವಿಯ ಜಾನುವಾರುಗಳ ಜಾತ್ರೆ 15 ದಿನ ನಡೆಯುತ್ತಿತ್ತು, ಸಾವಿರಾರು ರಾಸುಗಳು ಹಾಗೂ ರೈತರು ಬರುತ್ತಿದ್ದವು. ಆದರೆ ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವುದರಿಂದ ಜಾನುವಾರಗಳ ಸಂಖ್ಯೆಯೂ ಕಡಿಮೆಯಾಗಿ, ಕೆಲ ದಿನಗಳಿಗೆ ಮಾತ್ರ ಜಾತ್ರೆಗಳು ಸೀಮಿತವಾಗುತ್ತಿದೆ ಎಂದು ರೈತರು ಹೇಳುತ್ತಾರೆ.

ಮಧುಗಿರಿ ದಂಡಿನ ಮಾರಮ್ಮ ದೇವಿ ಜಾನುವಾರುಗಳ ಜಾತ್ರೆಗೆ ಸಾವಿರಾರು ರೈತರು ತಮ್ಮ ಜಾನುವಾರುಗಳ ಸಮೇತ ಬಂದು, ವಾಸ್ತವ್ಯ ಹೂಡುತ್ತಾರೆ. ಜಾತ್ರೆಬಯಲಿನಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ರೈತರು ಶೌಚಕ್ಕಾಗಿ ಬಯಲು ಹಾಗೂ ಕೆರೆಯನ್ನು ಆಶ್ರಯಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೇವಾಲಯದ ಆವರಣದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಶೌಚಾಲಯಕ್ಕೆ ಯಾವಾಗಲೂ ಬೀಗ ಹಾಕಿರುವುದರಿಂದ ಬಳಕೆಯಾಗುತ್ತಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.