ಗುರುವಾರ , ಅಕ್ಟೋಬರ್ 21, 2021
29 °C
ಸಮುದಾಯ ಭವನಗಳಿಗೆ ಸಿಂಹ ಪಾಲು

ಶಾಸಕರ ನಿಧ ಬಳಕೆ: ಅನುದಾನ ಬಳಕೆಯಲ್ಲಿ ಜಿ.ಬಿ.ಜ್ಯೋತಿಗಣೇಶ್ ಮುಂದು

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಾಸಕರ ಕ್ಷೇತ್ರದ ಪ್ರದೇಶಾಭಿವೃದ್ಧಿ ನಿಧಿಯ ಬಳಕೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮುಂದಿದ್ದಾರೆ. ಬಂದ ಅನುದಾನವನ್ನು ಆಯಾ ವರ್ಷವೇ ಬಹುತೇಕ ಬಳಕೆ ಮಾಡಿ
ಕೊಂಡಿದ್ದಾರೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯು ಸರಿಯಾಗಿ ಬಳಕೆಯಾಗಿಲ್ಲ. ಕೊಟ್ಟ ಹಣವನ್ನು ಶಾಸಕರು ಉಳಿಸಿಕೊಂಡು, ಕೆಲಸ ಮಾಡದೆ ಮತ್ತೆ ಹಣ ಕೊಡಿ ಎಂದು ಕೇಳುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಶಾಸಕರಿಗೆ ಪತ್ರ ಬರೆದು ನೀಡಿರುವ ಅನುದಾನವನ್ನು ಮೊದಲು ಬಳಕೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಲಹೆ ಮಾಡಿದ್ದರು. ಹಾಗಾಗಿ ಶಾಸಕರ ಅನುದಾನ ಬಳಕೆ ವಿಚಾರ ಈಗ ಮುನ್ನೆಲೆಗೆ ಬಂದಿದೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಾಗಿ ಪ್ರತಿ ವರ್ಷ ₹2 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ನಗರದ ಶಾಸಕರು, ಬಂದಿದ್ದ ಎಲ್ಲಾ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದಾರೆ. 2018–19ನೇ ಸಾಲಿನಲ್ಲಿ ₹2 ಕೋಟಿ ಪೂರ್ಣವಾಗಿ ಬಳಕೆಯಾಗಿದ್ದರೆ, 2019–20ರಲ್ಲಿ ₹1.99 ಕೋಟಿ ವೆಚ್ಚವಾಗಿದೆ. ಕೋವಿಡ್ ಕಾರಣಕ್ಕೆ 2020–21ನೇ ಸಾಲಿಗೆ ಸರ್ಕಾರ ನೀಡುವ ಅನುದಾನವನ್ನು ಕಡಿತಮಾಡಿದ್ದು, ₹1 ಕೋಟಿಯಷ್ಟೇ ಬಿಡುಗಡೆ ಮಾಡಿತ್ತು. ಅಷ್ಟೂ ಹಣವನ್ನು ವಿವಿಧ ಕೆಲಸಗಳಿಗೆ ನೀಡಿದ್ದಾರೆ.

ಸಮುದಾಯ ಭವನಗಳಿಗೆ ಸಿಂಹ ಪಾಲು: ಜಾತಿ, ಧರ್ಮ, ಸಮುದಾಯಗಳ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಶಾಸಕರಾಗಿ ಆಯ್ಕೆಯಾದ ಮೊದಲ ವರ್ಷದಲ್ಲಿ ಬಿಡುಗಡೆಯಾಗಿದ್ದ ಒಟ್ಟು ಅನುದಾನದಲ್ಲಿ ಅರ್ಧದಷ್ಟು ಹಣವನ್ನು ಈ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದಾರೆ. ಜಾತಿ ಹೆಸರಿನಲ್ಲಿರುವ ಸಂಘಗಳ ಸಮುದಾಯ ಭವನಗಳಿಗೆ ಹೆಚ್ಚಿನ ಹಣ ಕೊಡಲಾಗಿದೆ.

2019ರಲ್ಲೂ ಅದೇ ಪರಿಸ್ಥಿತಿ ಮುಂದುವರಿದಿದ್ದರೂ ಶಾಲೆ, ಕಾಲೇಜುಗಳ ಕೊಠಡಿಗಳು, ಶೌಚಾಲಯ, ಶಾಲಾ ಆವರಣ ಗೋಡೆ ನಿರ್ಮಾಣ, ದುರಸ್ತಿ, ಹಾಸ್ಟೆಲ್ ಕಟ್ಟಡ ನಿರ್ಮಾಣ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೂ ಒತ್ತು ನೀಡಲಾಗಿದೆ. ಸರ್ಕಾರಿ ಶಾಲೆಗಳಿಗಿಂತ ಖಾಸಗಿ, ಜಾತಿ, ಸಮುದಾಯ ಆಧಾರಿತ ಶಾಲೆಗಳು, ಶಿಕ್ಷಣ ಸಂಸ್ಥೆಗಳಿಗೆ ನೆರವು ಸಿಕ್ಕಿದೆ. ಈ ಅವಧಿಯಲ್ಲಿ ಒಟ್ಟು 50 ಕಾಮಗಾರಿಗಳಿಗೆ ಹಣ ಒದಗಿಸಿದ್ದು, ಅದರಲ್ಲಿ ಶೈಕ್ಷಣಿಕ ಚಟುವಟಿಕೆ ಆಧಾರಿತ 16 ಕಾಮಗಾರಿಗಳಿಗೆ ಹಣ ಕೊಡಲಾಗಿದೆ. ಅಷ್ಟೇ ಪ್ರಮಾಣದಲ್ಲಿ ಸಮುದಾಯ ಭವನಗಳಿಗೂ ಅವಕಾಶ ಮಾಡಿಕೊಡಲಾಗಿದೆ.

ಹಣ ಪಡೆದುಕೊಳ್ಳುವಲ್ಲಿ ದೇವಸ್ಥಾನಗಳು ಮೂರನೇ ಸ್ಥಾನದಲ್ಲಿ ನಿಲ್ಲುತ್ತವೆ. ದೇಗುಲಗಳ ಅಭಿವೃದ್ಧಿ ಚಟುವಟಿಕೆಗಳು, ಹೊಸದಾಗಿ ದೇಗುಲಗಳ ನಿರ್ಮಾಣ, ದೇವಸ್ಥಾನದ ಮುಂದುವರಿದ ಕಾಮಗಾರಿ, ದೇಗುಲಕ್ಕೆ ಹೊಂದಿಕೊಂಡಿರುವ ಸಮುದಾಯ ಭವನ ನಿರ್ಮಿಸುವ ಚಟುವಟಿಕೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ನೀರಿನ ಎರಡು ಘಟಕಗಳಿಗೆ, ಬೆರಳೆಣಿಕೆಯಷ್ಟು ಸಂಖ್ಯೆಯ ಆಸ್ಪತ್ರೆ, ಪಾರ್ಕ್, ರಸ್ತೆ ಅಭಿವೃದ್ಧಿಗೆ ಹಣ
ಕೊಡಲಾಗಿದೆ.

2020ರಲ್ಲಿ ಬಂದ ₹1 ಕೋಟಿಯಲ್ಲಿ ಬಹುತೇಕ ಹಣವನ್ನು ಸಮುದಾಯ ಭವನಗಳಿಗೆ ಹಂಚಲಾಗಿದೆ. ಡಿ.ಎಂ.ಪಾಳ್ಯದ ರೇವಣ ಸಿದ್ದೇಶ್ವರ ಗುರುಮಠದಲ್ಲಿ ಸಮುದಾಯ ಭವನಕ್ಕೆ ₹3 ಲಕ್ಷ, ರಾಮಕೃಷ್ಣ ನಗರದ ಗಂಗಾ ಮತಸ್ಥ ಸಂಘದ ಸಮುದಾಯ ಭವನಕ್ಕೆ ₹2 ಲಕ್ಷ, ಸಿದ್ಧಗಂಗಾ ಬಡಾವಣೆಯಲ್ಲಿ ಮಡಿವಾಳ ಸಂಘದ ಸಮುದಾಯ ಭವನಕ್ಕೆ ₹4 ಲಕ್ಷ, ಎಸ್‌ಎಲ್‌ಎನ್ ನಗರದಲ್ಲಿ ಅಂಬೇಡ್ಕರ್ ಭವನಕ್ಕೆ ₹5 ಲಕ್ಷ, ರಾಮಕೃಷ್ಣ ನಗರದ ಉಪ್ಪಾರ ಯುವಕರ ಸಂಘದ ಸಮುದಾಯ ಭವನಕ್ಕೆ ₹4 ಲಕ್ಷ, ಕ್ಸಾತ್ಸಂದ್ರ ಮೇದರ ಸಮುದಾಯ ಭವನಕ್ಕೆ ₹2 ಲಕ್ಷ, ಮೆಳೆಕೋಟೆ ಪರ್ವತ ಮಲ್ಲೇಶ್ವರಸ್ವಾಮಿ ಸಮುದಾಯ ಭವನಕ್ಕೆ ₹3 ಲಕ್ಷ– ಹೀಗೆ ಹಣ ನೀಡುವ ಮೂಲಕ ವಿವಿಧ ಸಮುದಾಯಗಳ ಜನರನ್ನು ಸಮಾಧಾನಪಡಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಅರ್ಧ ವರ್ಷ ಮುಗಿದಿದ್ದು, ಇನ್ನೂ ಅನುದಾನ ಹಂಚಿಕೆಯಾಗಬೇಕಿದೆ. ಉಳಿದ ಅವಧಿಯಲ್ಲಿ ಬರುವ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಶಾಸಕರು ಹೇಳುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು