ಬುಧವಾರ, ಜನವರಿ 29, 2020
30 °C
ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ಧಿಯಲ್ಲಿ ರಾಜವಂಶಸ್ಥ ಸಿದ್ಧಲಿಂಗರಾಜೇ ಅರಸ್ ಬೇಸರ

ಮೈಸೂರು ಮಹಾರಾಜರ ಮರೆತ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜನೋಪಯೋಗಿ ಸಾವಿರಾರು ಅಭಿವೃದ್ಧಿ ಕೆಲಸ ಮಾಡಿದ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಭಾರತರತ್ನ ನೀಡಬೇಕು ಎಂದು ರಾಜವಂಶಸ್ಥರೂ ಆಗಿರುವ ಮಳವಳ್ಳಿಯ ಮಂಟೇಸ್ವಾಮಿ ಮಠದ ಅಧ್ಯಕ್ಷ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್ ಅವರು ಒತ್ತಾಯಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ಧಿ ಮತ್ತು ‘25ನೇ ದೊರೆ ಜಯಚಾಮರಾಜೇಂದ್ರ ಒಡೆಯರ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯದ ಬಹುತೇಕ ಭಾಗಗಳ ಅಭಿವೃದ್ಧಿಗೆ ಕೊಡುಗೆ ನೀಡಿದ ಮೈಸೂರು ಮಹಾರಾಜರನ್ನು ರಾಜ್ಯ ಸರ್ಕಾರಗಳು ಸ್ಮರಿಸುತ್ತಿಲ್ಲ. ಮಹಾರಾಜರ ಜಯಂತಿಗಳನ್ನು ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ಆಚರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮೊದಲ ಮಹಾಯುದ್ಧದಲ್ಲಿ ಮೈಸೂರು ಸಂಸ್ಥಾನವು ಬೆಂಬಲಿಸಿದ್ದ ಮಿತ್ರಕೂಟಕ್ಕೆ ಜಯ ದೊರೆಯಿತು. ಆ ವೇಳೆಯಲ್ಲಿ ಚಾಮರಾಜೇಂದ್ರ ಹುಟ್ಟಿದರು. ಹಾಗಾಗಿ ಅವರ ಹೆಸರಿನ ಆರಂಭದಲ್ಲಿ ‘ಜಯ’ ಸೇರಿಸಲಾಯಿತು ಎಂದರು.

ಭಿಕ್ಷುಕರಿಗೆ, ಕೈದಿಗಳಿಗೆ ಪುನರ್ವಸತಿ ವ್ಯವಸ್ಥೆ ಮಾಡಿದರು. ದೇವಸ್ಥಾನಗಳಿಗೆ ಎಲ್ಲರಿಗೂ ಪ್ರವೇಶ ಕಲ್ಪಿಸಿದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶ ಕಟ್ಟಲು ವಿವಿಧ ಸಂಸ್ಥಾನಗಳ ರಾಜರನ್ನು ಭೇಟಿ ಆಗಬೇಕಾಗಿತ್ತು. ಆಗ ಒಡೆಯರ್ ಸ್ವಂತ ವಿಮಾನವನ್ನು ಪಟೇಲರ ಪ್ರಯಾಣಕ್ಕಾಗಿ ನೀಡಿದ್ದರು ಎಂದು
ನೆನಪಿಸಿಕೊಂಡರು.

97 ಕೃತಿಗಳನ್ನು ರಚಿಸಿದ್ದ ಅವರಲ್ಲಿ ಸಂಗೀತದ ಅಭಿರುಚಿ ಇತ್ತು. ಪಿಯಾನೊ ಕಲಿತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಡಬೇಕು ಎಂಬ ಹಂಬಲ ಹೊಂದಿದ್ದರು. ಕಾರ್ಯ ಒತ್ತಡದಲ್ಲಿ ಅದು ಸಾಧ್ಯವಾಗದಿದ್ದಾಗ, ಲಂಡನ್‌ನ ಚಿಕ್ಕ ಮನೆಯಲ್ಲಿದ್ದ ರಷ್ಯಾದ ಸಂಗೀತಗಾರ ನಿಕೊಲಯ್ ಮೆಟ್ನರ್ ಅವರನ್ನು ಕರೆತಂದು ವೇದಿಕೆ ಕಲ್ಪಿಸಿದ್ದರು. ಲಕ್ಷಾಂತರ ಜನ ಮೆಚ್ಚುವ ಸಂಗೀತಗಾರನನ್ನಾಗಿ ಮಾಡಿದರು ಎಂದು ತಿಳಿಸಿದರು.

‘ಒಡೆಯರ್‌ ಅವರಿಗೆ ಟೆನ್ನಿಸ್, ಗಾಲ್ಫ್‌ನಲ್ಲಿ ಆಸಕ್ತಿ ಇತ್ತು. ನಮ್ಮ ರಾಜ್ಯದ ಇ.ಎ.ಎಸ್.ಪ್ರಸನ್ನ ಅವರಿಗೆ ಪ್ರೋತ್ಸಾಹ ನೀಡಿ ಭಾರತದ ಕ್ರಿಕೆಟ್ ತಂಡ ಪ್ರತಿನಿಧಿಸುವಂತೆ ಮಾಡಿದರು. ಟೆನ್ನಿಸ್‌ ಪಟು ರಾಮನಾಥನ್ ಕೃಷ್ಣನ್ ಅವರು ವಿಂಬಲ್ಡನ್ ತಲುಪಲು ಅಗತ್ಯ ಬೆಂಬಲ ನೀಡಿದರು’ ಎಂದು ಸ್ಮರಿಸಿದರು.

ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕಾಡು ಪ್ರಾಣಿಗಳನ್ನು ಬೇಟೆ ಆಡಬೇಕು ಎಂದು ಬಂದೂಕು ಬಿಟ್ಟು ಕ್ಯಾಮೆರಾ ಕೈಗೆತ್ತಿಕೊಂಡರು. ಅದರಲ್ಲಿ ವನ್ಯಜೀವಿಗಳ ಚಂದದ ಚಿತ್ರಗಳನ್ನು ಕ್ಲಿಕ್ಕಿಸಿದರು. ಇಂಡಿಯನ್ ವೈಲ್ಡ್ ಲೈಫ್ ಬೋರ್ಡ್‌ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಎಂದು ನೆನಪಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಅಳಿಯ ಆರ್.ರಾಜಚಂದ್ರ ಮಾತನಾಡಿ, 1942ರಲ್ಲಿ ಒಡೆಯರ್ ತುಮಕೂರಿಗೆ ಮೊದಲ ಬಾರಿ ಬಂದಿದ್ದರು. ಆಗ ಅವರ ಜನ್ಮದಿನವಿತ್ತು. ಆ ದಿನವೇ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಜನರ ಕಷ್ಟ ಸುಖ ವಿಚಾರಿಸಿದ್ದರು. 1949, 1951ರಲ್ಲಿ ಜಿಲ್ಲೆಗೆ ಭೇಟಿ ನೀಡಿದಾಗ ಶಾಲಾ ಕಟ್ಟಡ, ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಮಧುಗಿರಿಯ ಜಯಮಂಗಲಿ ನದಿಗೆ ಕಟ್ಟಿದ್ದ ಸೇತುವೆ ಉದ್ಘಾಟಿಸಿ, ಬೆಳ್ಳಾರ ಚಿನ್ನದ ಗಣಿಗೆ ವಿದ್ಯುತ್, ನೀರು ಪೂರೈಸುವ ಯೋಜನೆಗಳಿಗೆ ಚಾಲನೆ ನೀಡಿದ್ದರು ಎಂದು ತಿಳಿಸಿದರು.

ಸಂತಸದ ಮೆರವಣಿಗೆಯ ದುಃಖದ ಅಂತ್ಯ

ತುಮಕೂರಿಗೆ ಒಡೆಯರ್ ಬಂದಾಗ ಜಿಲ್ಲಾ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಅವರಿಗೆ ಮೆರವಣಿಗೆ ಮಾಡಲಾಗಿತ್ತು. ಅದಕ್ಕಿಗ ಜೆ.ಸಿ.ರಸ್ತೆ (ಜಯಚಾಮರಾಜೇಂದ್ರ ಒಡೆಯರ್‌ ರಸ್ತೆ) ಎಂದು ನಾಮಕರಣ ಮಾಡಲಾಗಿದೆ. ಆ ಮೆರವಣಿಗೆ ಮಂಡಿಪೇಟೆ ಮೂಲಕ ಚರ್ಚ್ ರಸ್ತೆ ತಲುಪುವ ವೇಳೆಗೆ ಗಾಂಧಿ ಹತ್ಯೆಯ ಸುದ್ದಿ ಒಡೆಯರ್ ಕಿವಿಗೆ ಬಿದ್ದಿತಂತೆ. ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಿ ಒಡೆಯರ್ ಹೊರಟರಂತೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅವರು ಪ್ರಸಂಗವೊಂದನ್ನು ಸ್ಮರಿಸಿದರು.

ಈಗ ಸಿದ್ಧಗಂಗಾ ಆಸ್ಪತ್ರೆ ಇರುವ ಜಾಗವನ್ನೂ ಮಹಾರಾಜರು ಸಿದ್ಧಗಂಗಾ ಪ್ರೌಢಶಾಲೆಗಾಗಿ ದಾನ ನೀಡಿದ್ದರು ಎಂದು ತಿಳಿಸಿದರು.

ಸಂಗೀತ ಪ್ರಿಯರಾದ ಒಡೆಯರ್ ಕಾಲದಲ್ಲಿ ಮೆಮೊರಿ ಜಿ.ಬಿ.ಗಳಲ್ಲಿ ಸಂಗ್ರಹ ಮಾಡುವ ತಂತ್ರಜ್ಞಾನ ಇರಲಿಲ್ಲ. ಆದರೂ 20 ಸಾವಿರ ರೆಕಾರ್ಡ್‌ಗಳು(ಧ್ವನಿ ಮುದ್ರಿಕೆ) ಅವರ ಸಂಗ್ರಹದಲ್ಲಿ ಇದ್ದವು.

- ವೈ.ಎಸ್.ಸಿದ್ದೇಗೌಡ, ಕುಲಪತಿ, ತುಮಕೂರು ವಿಶ್ವವಿದ್ಯಾನಿಲಯ

ಪುಸ್ತಕದ ಕುರಿತು

ಪುಸ್ತಕ: 25ನೇ ದೊರೆ ಜಯಚಾಮರಾಜೇಂದ್ರ ಒಡೆಯರ್‌

ಬೆಲೆ: ₹50

ಪುಟ: 120

ಪ್ರಕಾಶನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ಪ್ರತಿಕ್ರಿಯಿಸಿ (+)