ಗುರುವಾರ , ನವೆಂಬರ್ 21, 2019
20 °C
ನೋಡುಗರ ಗಮನ ಸೆಳೆದ ಕಲಾತಂಡಗಳು, ಕಣ್ಮನ ತಣಿಸಿದ ಬಾಣ ಬಿರುಸುಗಳ ಪ್ರದರ್ಶನ

ವೈಭಯುತ ಮೆರವಣಿಗೆ: ಗಣೇಶ ವಿಸರ್ಜನೆ

Published:
Updated:
Prajavani

ತುಮಕೂರು: ನಗರದಲ್ಲಿ ನಾಗ ಸೇವಾ ದತ್ತಿ ಸಂಸ್ಥೆ ಹಾಗೂ ಹಿಂದೂ ಮಹಾಗಣಪತಿ ಸೇವಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವ ಹಾಗೂ ಶೋಭಾಯಾತ್ರೆ ಶನಿವಾರ ಅತ್ಯಂತ ವೈಭವಯುತವಾಗಿ ನಡೆಯಿತು.

ಮೆರವಣಿಗೆಯುದ್ದಕ್ಕೂ ವಿಶೇಷ ಪುಣೇರಿ ಡೋಲ್, ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆವಾದ್ಯ, ಅತ್ಯಾಧುನಿಕ ಡಿ.ಜೆ. ಸೆಟ್, ವಿದ್ಯುತ್ ದೀಪಾಲಂಕಾರ ಹಾಗೂ ಕಣ್ಮನ ತಣಿಸುವ ಬಾಣ-ಬಿರುಸುಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.

ನಗರದ ಬಿಜಿಎಸ್ ವೃತ್ತದಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿ ಮೂರ್ತಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಿ ವಿವಿಧ ಪುಷ್ಪಗಳಿಂದ ಸಿಂಗಾರಗೊಂಡಿದ್ದ ಅಲಂಕೃತ ವಾಹನದಲ್ಲಿ ಕೂರಿಸಲಾಗಿತ್ತು.

ನಂತರ ಬಿ.ಎಚ್.ರಸ್ತೆಯಲ್ಲಿರುವ ಗಣಪತಿ ದೇವಾಲಯದ ಬಳಿ ವಿಸರ್ಜನಾ ಮೆರವಣಿಗೆ ಹಾಗೂ ಬೃಹತ್ ಶೋಭಯಾತ್ರೆಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.

ಹಿರೇಮಠಾಧ್ಯಕ್ಷರಾದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರ ಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿದ್ದರು.

ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಸಿಡಿಮದ್ದಿನ ಪ್ರದರ್ಶನದೊಂದಿಗೆ ಕೆಎನ್‌ಎಸ್ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ ನಡೆಯಿತು.

ಪ್ರತಿಕ್ರಿಯಿಸಿ (+)