ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಏಳ್ಗೆಗೆ ದುಡಿದ ಶ್ರೇಷ್ಠ ಸಾಹಿತಿ ಅ.ನ.ಕೃ

ತಿಂಗಳ ಕನ್ನಡ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಗೋವಿಂದಯ್ಯ ದ್ವಾರಾನುಕುಂಟೆ ನುಡಿ
Last Updated 4 ಜೂನ್ 2019, 20:11 IST
ಅಕ್ಷರ ಗಾತ್ರ

ತುಮಕೂರು: ‘ಶ್ರಮಿಕ ವರ್ಗದವರ ಬಗ್ಗೆ ಒಲವು, ಸಾಮಾಜಿಕ ಕಳಕಳಿ, ಭಾವುಕತೆ, ಭಾರತೀಯತೆಯ ನೆಲೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅ.ನ.ಕೃಷ್ಣರಾಯರು ಕನ್ನಡದ ಸರ್ವತೋಮುಖ ಬೆಳವಣಿಗೆಗೆ ದುಡಿದ ಶ್ರೇಷ್ಠ ಬರಹಗಾರರಲ್ಲೊಬ್ಬರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಗೋವಿಂದಯ್ಯ ದ್ವಾರಾನುಕುಂಟೆ ಹೇಳಿದರು.

ನಗರ ಕೇಂದ್ರ ಗ್ರಂಥಾಲಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಟ್ಯಾಕಲ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ಧ ಕನ್ನಡ ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾಯರ ಸಾಹಿತ್ಯ ಸ್ಮರಣೆ 7ನೇ ತಿಂಗಳ ಕನ್ನಡ ಸಾಹಿತ್ಯ ಸಂವಾದ ಮಾಲೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಕನ್ನಡವೇ ನನ್ನ ಕುಲ, ಕನ್ನಡವೇ ನನ್ನ ಧರ್ಮ, ಕನ್ನಡವೇ ನನ್ನ ಕರ್ಮ ಅಥವಾ ಕರ್ತವ್ಯದ ನೆಲೆ ಎಂದು ಅ.ನ.ಕೃ ಹೇಳುತ್ತಿದ್ದರು’ ಎಂದರು.

‘ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲ್‌ರು ಮುಸ್ಲಿಂ ಕನ್ನಡಿಗರು, ಆದರೆ, ಅ.ನ.ಕೃಷ್ಣರಾಯರು ಅಚ್ಚ ಕನ್ನಡಿಗರು ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರರು ಪ್ರಶಂಸಿಸುತ್ತಿದ್ದರು. ಅಪರೂಪದ ಕವಿ, ಕನ್ನಡದ ಕಾದಂಬರಿ ಸಾರ್ವಭೌಮರಾಗಿ 120ಕ್ಕೂ ಹೆಚ್ಚು ಕೃತಿಗಳನ್ನು ನೀಡಿ ಕನ್ನಡಿಗರ ಮನೆ ಮನಗಳಲ್ಲಿ ಸ್ಥಾನ ಪಡೆದಿದ್ದಾರೆ’ ಎಂದರು.

‘ಬಾಪು, ಸೀತಾರಾಮಯ್ಯ, ಗೋವಿಂದರಾಯರು, ಆಲೂರು ವೆಂಕಟರಾಯರು, ಕಡಪ ರಾಘವೇಂದ್ರರಾಯರು, ಕೆರೂರು ವಾಸುದೇವಾಚಾರ್ಯರು, ಎಂ.ಎಸ್. ಪುಟ್ಟಣ್ಣ ಮುಂತಾದ ಮಹನೀಯರ ಸಂಪರ್ಕದಿಂದ, ರವೀಂದ್ರನಾಥ ಟ್ಯಾಗೋರರು ’ಶಾಂತಿನಿಕೇತನ’ದ ದೆಸೆಯಿಂದ ಕನ್ನಡ ನಾಡು-ನುಡಿಯ ಸೇವಕರಾಗಿ ದುಡಿದರು. ’ಕನ್ನಡ ಯುವಜನ ಸಭಾ’, ’ಸಂಯುಕ್ತ ರಂಗ’ದ ಮೂಲಕ ಕನ್ನಡ ಪರ ಕಾಳಜಿಯನ್ನು ಎತ್ತಿ ಹಿಡಿದರು’ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಜಿ.ಕೆ.ಕುಲಕರ್ಣಿ ಮಾತನಾಡಿ, ‘ನಟರಾಗಿ, ಹೋರಾಟಗಾರರಾಗಿ, ವಾಗ್ಮಿಗಳಾಗಿ, ವಿಮರ್ಶಕರಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ ಅ.ನ.ಕೃ ಬಹುಮುಖ ಪ್ರತಿಭೆ ಹೊಂದಿದ್ದರು. ಕನ್ನಡದ ಕಟ್ಟಾಳುವಾಗಿದ್ದ ಅವರು, ಸಾಹಿತ್ಯ ಜನರ ಮನೋವಿಕಾಸಕ್ಕೆ ಸಾಧನವಾಗಬೇಕು. ಸಮಾಜದ ಉನ್ನತಿಗೆ, ಸಾಮಾನ್ಯನ ಚಿಂತನೆಗೆ ಕಾರಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು’ ಎಂದು ಹೇಳಿದರು.

ಟ್ಯಾಕಲ್ ಸಂಸ್ಥೆ ಕಾರ್ಯದರ್ಶಿ, ನಿವೃತ್ತ ಪ್ರಾಚಾರ್ಯ ಎಸ್.ಕುಮಾರಸ್ವಾಮಿ ಮಾತನಾಡಿ,‘ ಅ.ನ.ಕೃ ಅವರಿಗಿದ್ದ ದೇಸಿಯ ಚಳವಳಿಯ ಕಾಳಜಿ, ಶಾಂತಿ ನಿಕೇತನದಲ್ಲಿ ನಡೆಸುತ್ತಿದ್ದ ಪುಸ್ತಕ ಸಂವಾದದಲ್ಲಿ ಅವರು ತೋರುತ್ತಿದ್ದ ಕನ್ನಡ ನಾಡಿನ ಪ್ರೇಮ ಅಸಾಧಾರಣವಾದುದು ಎಂದು ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಮಾತನಾಡಿ, ‘ಅ.ನ.ಕೃ ಅವರ ಸಾಹಿತ್ಯ ಕುರಿತು ಚರ್ಚೆ, ಸಂವಾದ ನಡೆಯಬೇಕು. ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕು’ ಎಂದು ಹೇಳಿದರು.

ಡಾ.ಎಂ.ಗೋವಿಂದರಾಯ ಸ್ವಾಗತಿಸಿದರು. ನಗರ ಕೇಂದ್ರ ಗ್ರಂಥಾಲಯ ಸಹಾಯಕಿ ವಿ.ಪುಷ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT