ಶನಿವಾರ, ಫೆಬ್ರವರಿ 27, 2021
23 °C
ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಹಾಸನ ಜೆಡಿಎಸ್ ಶಾಸಕರ ವಿರೋಧ; ಮುಂದಿನ ವಾರ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ

ತುಮಕೂರು: ಮತ್ತೆ ಮುನ್ನೆಲೆಗೆ ಹೇಮಾವತಿ ರಾಜಕಾರಣ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜೆಡಿಎಸ್ ಮತ್ತು ಬಿಜೆಪಿ ನಡುವಿನ ಹೇಮಾವತಿ ನದಿ ನೀರಿನ ರಾಜಕಾರಣ ಜಿಲ್ಲೆಯಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬರುವ ಲಕ್ಷಣಗಳು ಕಾಣಿಸುತ್ತಿವೆ. ಗೊರೂರು ಜಲಾಶಯದಿಂದ ಮೇ 1ರಿಂದ ಜಿಲ್ಲೆಗೆ ನೀರು ಹರಿಯಬೇಕಿತ್ತು. ಆದರೆ ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರ ವಿರೋಧದ ಕಾರಣ ನೀರು ಹರಿಸುವುದಕ್ಕೆ ತಾತ್ಕಾಲಿಕವಾಗಿ ತಡೆ ಬಿತ್ತು.

ಈ ವಿಚಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂಗಳ ತಲುಪಿದೆ. ಮುಂದಿನ ವಾರ ಅಧಿಕಾರಿಗಳು, ಹೇಮಾವತಿ ವ್ಯಾಪ್ತಿಯ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಮುಖ್ಯಮಂತ್ರಿ ನಡೆಸಲಿದ್ದಾರೆ. ಹೇಮಾವತಿ ಜಲಾಶಯವು ಹಾಸನ, ಮಂಡ್ಯ, ತುಮಕೂರು, ಮೈಸೂರು ಜಿಲ್ಲೆಯ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಎಲ್ಲ ಜಿಲ್ಲೆಗಳಿಗೂ ನೀರು ಹರಿಸಬೇಕು ಎನ್ನುವುದು ಜೆಡಿಎಸ್ ಶಾಸಕರ ಆಗ್ರಹ.

ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ ಎನ್ನುವ ಉದ್ದೇಶದಿಂದ ತುಮಕೂರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲೆಗೆ 1.8 ಟಿಎಂಸಿ ಅಡಿ ನೀರು ಹರಿಸಲು ಮುಂದಾಗಿದ್ದರು. ಸಚಿವರ ಮೌಖಿಕ ಆದೇಶ ಹಾಸನ ಜೆಡಿಎಸ್ ಶಾಸಕರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರ್ಲೆ ಗ್ರಾಮಸ್ಥರು ನೀರು ಹರಿಸುವುದನ್ನು ವಿರೋಧಿಸಿ ಜಲಾಶಯದ ಬಳಿ ಪ್ರತಿಭಟನೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳ ಕಾರಣದಿಂದ ಜಿಲ್ಲೆಗೆ ನೀರು ಹರಿಯುವುದಕ್ಕೆ ತಡೆ ಬಿದ್ದಿದೆ.

ಜೆಡಿಎಸ್ ರಾಜ್ಯ ಘಕಟದ ಅಧ್ಯಕ್ಷರೂ ಆಗಿರುವ ಸಕಲೇಶಪುರ ಶಾಸಕ ಎಚ್‌.ಕೆ.ಕುಮಾರಸ್ವಾಮಿ, ಹಾಸನ ಕಡೆಗಣಿಸಿ ತುಮಕೂರಿಗೆ ನೀರು ಹರಿಸುವುದಕ್ಕೆ ವಿರೋಧವಿದೆ. ಜಿಲ್ಲೆಗೆ ನೀರು ಕೊಡದಿದ್ದರೆ ಹೋರಾಟ ಅನಿವಾರ್ಯ ಎಂದು ಘೋಷಿಸಿದ್ದರು.

ಈಗ ನೀರು ಹರಿಸಲು ತಡೆ ನೀಡಿರುವುದು ಸಹಜವಾಗಿ ಜಿಲ್ಲೆಯ ಜನ‍ಪ್ರತಿನಿಧಿಗಳು, ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೇಮಾವತಿ ವಿಚಾರವನ್ನು ರಾಜಕೀಯ ಅಸ್ತ್ರವಾಗಿ ಬಿಜೆಪಿ ಶಾಸಕರು ಬಳಸಿಕೊಳ್ಳಲು ಮುಂದಾಗಿದ್ದು, ಜೆಡಿಎಸ್‌ ಮೇಲೆ ಮುಗಿಬಿದ್ದಿದ್ದಾರೆ.

ಮುಖ್ಯಮಂತ್ರಿ ಸಭೆ ನಂತರ ಯಾವ ರೀತಿಯ ಬೆಳವಣಿಗೆಗಳು ಘಟಿಸುತ್ತವೆ. ಪರ ವಿರೋಧದ ವಾಕ್ಸಮರಕ್ಕೆ ಕಾರಣವಾಗುತ್ತದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದಿನಿಂದಲೂ ಎರಡೂ ಜಿಲ್ಲೆಗಳ ಶಾಸಕರ ನಡುವೆ ಹೇಮಾವತಿ ನೀರಿನ ವಿಚಾರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಸೋಲಿಗೂ ಹೇಮಾವತಿ ನದಿ ನೀರಿನ ರಾಜಕಾರಣವೇ ಪ್ರಮುಖ ಎಂಬ ವಿಚಾರ ಬಹಿರಂಗ ಸತ್ಯ.

ನಡೆಯದ ಸಭೆ: ನೀರು ಹರಿಸುವ ವಿಚಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ಕರೆಯದೆ ಜೆ.ಸಿ.ಮಾಧುಸ್ವಾಮಿ ಮೌಖಿಕ ಆದೇಶ ನೀಡಿರುವುದೇ ಜೆಡಿಎಸ್ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿವರ ಏಕ ಪಕ್ಷೀಯ ತೀರ್ಮಾನಕ್ಕೆ ವಿರೋಧವಿದೆ. ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಕೆರೆಗಳಿಗೂ ನೀರು ಹರಿಸಬೇಕು. ಐಸಿಸಿ ಸಭೆ ಕರೆದು ಚರ್ಚಿಸಿ, ನೀರು ಬಿಡುವ ತೀರ್ಮಾನ ಕೈಗೊಳ್ಳಬೇಕು ಎನ್ನುವುದು ಜೆಡಿಎಸ್ ಶಾಸಕರ ಆಗ್ರಹವಾಗಿದೆ.

***

‘ಕುಡಿಯುವ ನೀರಿಗೆ ಅಡ್ಡಿ ಅಕ್ಷಮ್ಯ’

‘ಕುಡಿಯುವ ನೀರು ಬಿಡುವ ವಿಚಾರದಲ್ಲಿ ಅಡ್ಡಿಪಡಿಸುವುದು ಅಕ್ಷಮ್ಯ. ಮಳೆ ಬಂತು ನೀರು ಬಿಟ್ಟರು. ಯಾರು ಎಷ್ಟು ಪ್ರಮಾಣದ ನೀರನ್ನು ಉಪಯೋಗಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ನಮ್ಮ ಪಾಲಿನ ನೀರನ್ನು ಕೊಡಿ ಎನ್ನುವುದಷ್ಟೇ ನಮ್ಮ ಆಗ್ರಹ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಜಿ.ಬಿ.ಜ್ಯೋತಿಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಲಾಶಯ ಮತ್ತು ತುಮಕೂರು ಜಿಲ್ಲೆಯ ಹೇಮಾವತಿ ನಾಲೆ ಕಾಲುವೆ ಆರಂಭಕ್ಕೂ 92 ಕಿ.ಮೀ ಅಂತರ ಇದೆ. ಕೊರೊನಾ ಮತ್ತು ಮಾನವ ಸಂಪನ್ಮೂಲ ಇಲ್ಲದ ಕಾರಣಕ್ಕೆ ಜಿಲ್ಲೆಗೆ ನೀರು ಹರಿಯುವುದು ತಡವಾಗಿದೆ. ಈ ವರ್ಷದ ನೀರನ್ನು ಮುಂದಿನ ವರ್ಷ ಬಿಡುವುದಿಲ್ಲ. ಈಗ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಜಿಲ್ಲೆಗೂ ಹರಿಸಬೇಕು ಎಂದು ಆಗ್ರಹಿಸಿದರು.

***

ಜಿಲ್ಲೆಯ ಹಿತಾಸಕ್ತಿ ರಕ್ಷಣೆ

ಜಿಲ್ಲೆಗೆ ಮೀಸಲಿರುವ ನೀರನ್ನು ಬಿಡಲೇಬೇಕು. ಇದು ಪಕ್ಷಾತೀತವಾದ ಒತ್ತಾಯ. ನಮ್ಮ ಪಕ್ಷದ ಶಾಸಕರು ಸಹ ಜಿಲ್ಲೆಯ ಹಿತಕ್ಕೆ ಪೂರಕವಾಗಿ ಇದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್ ತಿಳಿಸಿದರು.

ಕುಡಿಯುವ ನೀರಿಗೆ ಜೆಡಿಎಸ್ ಶಾಸಕರು ವಿರೋಧ ವ್ಯಕ್ತಪಡಿಸುವುದಿಲ್ಲ. ಶೀಘ್ರ ಹೇಮಾವತಿ ಜಲಾಶಯ ವ್ಯಾಪ್ತಿಯ ನೀರಾವರಿ ಸಲಹಾ ಸಮಿತಿ ಸಭೆ ನಡೆಯಬೇಕು. ಜಿಲ್ಲೆಗೆ ಅನುಕೂಲವಾಗಬೇಕು ಎಂದರು.

***

ಸಿ.ಎಂಗೆ ಪತ್ರ

ಜಿಲ್ಲೆಗೆ ಹೇಮಾವತಿ ನೀರು ಹರಿಸುವಂತೆ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಪಾವಗಡ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಹೇಮಾವತಿಯೇ ಕುಡಿಯುವ ನೀರಿಗೆ ಆಶ್ರಯವಾಗಿದೆ. ಪ್ರತಿ ವರ್ಷವೂ ಹೇಮಾವತಿ ನೀರಿಗಾಗಿ ಹೋರಾಟ ನಡೆಬೇಕಾಗಿದೆ. ಕರ್ನಾಟಕ, ತಮಿಳುನಾಡು ನಡುವಿನ ಕಾವೇರಿ ವಿವಾದದ ರೀತಿಯಲ್ಲಿ ಹೇಮಾವತಿ ವಿಚಾರ ಉಂಟಾಗುತ್ತಿದೆ. ನಿಷ್ಪಕ್ಷಪಾತವಾಗಿ ಕ್ರಮವಹಿಸಿ ಜಿಲ್ಲೆಗೆ ನೀರು ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.