ಶುಕ್ರವಾರ, ಜೂನ್ 25, 2021
29 °C
ಕುಂಬಾರರ ಬದುಕಿಗೆ ಕೊರೊನಾ ಕಂಟಕ; ಗಣೇಶ ವಿಗ್ರಹಗಳಿಗಿಲ್ಲ ಬೇಡಿಕೆ

ವಿಘ್ನ ನಿವಾರಕನಿಗೂ ಕೋವಿಡ್‌ ಭೀತಿ: ಗಣೇಶ ವಿಗ್ರಹಗಳಿಗಿಲ್ಲ ಬೇಡಿಕೆ

ಅಭಿಲಾಷ ಬಿ.ಸಿ. Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ತಲೆತಲಾಂತರದಿಂದ ಕುಂಬಾರಿಕೆಯನ್ನೇ ನಂಬಿ ಬದುಕುತ್ತಿದ್ದೇವೆ. ಗಣೇಶನ ವಿಗ್ರಹಗಳ ತಯಾರಿಕೆಯಲ್ಲಿ ಪೂಜೆಯಲ್ಲಿನ ತಲ್ಲೀನತೆಯನ್ನೇ ತೋರುತ್ತೇವೆ. ಆದರೆ ಭಕ್ತರ ಪಾಲಿಗೆ ಸಂಕಷ್ಟಹರ ಎಂದೇ ಖ್ಯಾತನಾಗಿರುವ ವಿಘ್ನೇಶ ಈ ವರ್ಷ ನಮ್ಮ ಕಷ್ಟ ದೂರ ಮಾಡುವ ಭರವಸೆ ಮೂಡಿಸಿಲ್ಲ. ಕೊರೊನಾ ಸೋಂಕು ಕುಂಬಾರರ ಬದುಕನ್ನು ಕಷ್ಟಕ್ಕೆ ದೂಡಿದೆ’ ಎಂದು ನಿಟ್ಟುಸಿರು ಬಿಟ್ಟರು ಕಲಾವಿದ ರುದ್ರಪ್ಪ.

ಹೌದು, ಪ್ರತಿವರ್ಷ ಗಣಪತಿ ಹಬ್ಬ ಸಮೀಪಿಸುತ್ತಿದ್ದಂತೆ ಗೌರಿ, ಗಣೇಶ ತಯಾರಕರಿಗೆ ವರ್ಷದ ಕೂಳು ಸಂಪಾದಿಸುವ ಸಂಭ್ರಮ. ತಿಂಗಳುಗಟ್ಟಲೆ ಶ್ರಮಪಟ್ಟು ತಯಾರಿಸಿದ ಸುಂದರ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವ ಉತ್ಸಾಹ. ಆದರೆ ಈ ವರ್ಷ ಕೊರೊನಾ ಭೀತಿಯಿಂದಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ ಹೇರಿರುವುದು ಕುಂಬಾರರ ಈ ಸಂಭ್ರಮವನ್ನು ಕಸಿದುಕೊಂಡಿದೆ.

ಈಗಾಗಲೇ ತಯಾರಿಸಿರುವ ದೊಡ್ಡ ಗಾತ್ರದ ಗಣಪತಿ ಮೂರ್ತಿಗಳನ್ನು ಏನು ಮಾಡಬೇಕು ಎನ್ನುವ ಗೊಂದಲ ತಯಾರಕರನ್ನು ಕಾಡುತ್ತಿದೆ. ಹಾಗಾಗಿ ಪುಟ್ಟ ಪುಟ್ಟ ಗಣೇಶನ ಮೂರ್ತಿಗಳಿಗೆ ಮಾತ್ರ ಬಣ್ಣ ಹೊಡೆಯುತ್ತಿದ್ದಾರೆ. ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಅಲಂಕೃತಗೊಂಡು ನೋಡುಗರನ್ನು ಆಕರ್ಷಿಸಬೇಕಿದ್ದ ವಿನಾಯಕನಿಗೆ ತಯಾರಕರೀಗ ಅಂತಿಮ ಸ್ಪರ್ಶ ನೀಡುವ ಮನಸ್ಸು ಮಾಡಿಲ್ಲ. ಅವುಗಳ ತಯಾರಿಕೆಯನ್ನೇ ಅರ್ಧಕ್ಕೆ ನಿಲ್ಲಿಸಿದ್ದಾರೆ. ಮನೆಗಳಲ್ಲಿ ಸರಳವಾಗಿ ಆಚರಿಸಲು ಯಾವುದೇ ಅಡಚಣೆ ಇಲ್ಲದಿರುವುದರಿಂದ ಸಣ್ಣ ಸಣ್ಣ ಮೂರ್ತಿಗಳನ್ನು ಮಾತ್ರ ಸಿದ್ಧಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಇತ್ತೀಚೆಗೆ ಮಡಿಕೆಗಳ ಮಾರಾಟ ಕುಸಿದಿದೆ. ಹಾಗಾಗಿ 300ಕ್ಕೂ ಹೆಚ್ಚು ಕುಟುಂಬಗಳು ಗಣಪತಿ ತಯಾರಿಕೆಯನ್ನೇ ನೆಚ್ಚಿಕೊಂಡಿವೆ. ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಮಧುಗಿರಿ ಹಾಗೂ ಗುಬ್ಬಿಯಲ್ಲಿ ಗಣಪತಿ ತಯಾರಕರ ಸಂಖ್ಯೆ ಹೆಚ್ಚಿದೆ.

ಸರ್ಕಾರ ಲಾಕ್‌ಡೌನ್‌ನಲ್ಲಿ ಘೋಷಿಸಿರುವ ಪರಿಹಾರಧನ ಕುಂಬಾರ ಸಮುದಾಯದ ಯಾರಿಗೂ ತಲುಪಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಸಾಧ್ಯವಾಗಿಲ್ಲ. ಬೇಸಿಗೆಯಲ್ಲೇ ಲಾಕ್‌ಡೌನ್‌ ಬಂದಿದ್ದರಿಂದ ಮಡಿಕೆಗಳ ವ್ಯಾಪಾರವೂ ಆಗಿರಲಿಲ್ಲ. ಈಗ ಗಣಪತಿ ಮಾರಾಟಕ್ಕೂ ಕೋವಿಡ್‌ ಕರಿನೆರಳು ಕವಿದಿದೆ ಎನ್ನುತ್ತಾರೆ ಪಾವಗಡ ತಾಲ್ಲೂಕು ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್.

ಸದ್ಯ ಎರಡೂವರೆ ಅಡಿಗಿಂತ ಪುಟ್ಟ ಗಣಪನ ತಯಾರಿಕೆಯಲ್ಲಿ ಕಲಾವಿದರು ನಿರತರಾಗಿದ್ದಾರೆ. ಚಿಕ್ಕ ಗಾತ್ರದ ಗಣಪತಿ ತಯಾರಿಕೆಗೆ ಹೆಚ್ಚು ಸಮಯ ಹಾಗೂ ಕೌಶಲ ಬೇಡುತ್ತದೆ. ಆದರೆ ಲಾಭ ಕಡಿಮೆ. ಮಾರಾಟಗಾರರಿಗೂ ಇದರಿಂದ ಹೆಚ್ಚು ಆದಾಯವಿಲ್ಲ ಎನ್ನುವುದು ಕುಂಬಾರರ ಅನಿಸಿಕೆ.

ಕುಸಿದ ವಹಿವಾಟು

20 ವರ್ಷದಿಂದ ಗಣಪತಿ ವಹಿವಾಟು ಮಾಡುತ್ತಿದ್ದೇನೆ. ಜಿಲ್ಲೆಯ ವಿವಿಧೆಡೆಗಳಿಂದ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದೆ. ಪ್ರತಿ ವರ್ಷ ₹8 ಲಕ್ಷದಿಂದ ₹10 ಲಕ್ಷ ವಹಿವಾಟು ನಡೆಯುತ್ತಿತ್ತು. ಈ ವರ್ಷ ವಹಿವಾಟು ತೀವ್ರ ಕುಸಿದಿದೆ. ₹5 ಲಕ್ಷ ವ್ಯಯಿಸಿ 1,500 ಚಿಕ್ಕ ಗಾತ್ರದ ಗಣಪತಿ ಖರೀದಿಸಿದ್ದೇನೆ. ದೊಡ್ಡ ಗ್ರಾತ್ರದ ಗಣಪತಿಗಳಿಗೆ ಬಣ್ಣ ಹಚ್ಚದಂತೆ ಎಲ್ಲರಿಗೂ ಮಾಹಿತಿ ನೀಡುತ್ತಿದ್ದೇನೆ ಎನ್ನುತ್ತಾರೆ ಕುಂಬಾರ ಸಂಘದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಸ್‌.ರವಿ.

ಕುಸಿದ ವಹಿವಾಟು

20 ವರ್ಷದಿಂದ ಗಣಪತಿ ವಹಿವಾಟು ಮಾಡುತ್ತಿದ್ದೇನೆ. ಜಿಲ್ಲೆಯ ವಿವಿಧೆಡೆಗಳಿಂದ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದೆ. ಪ್ರತಿ ವರ್ಷ ₹8 ಲಕ್ಷದಿಂದ ₹10 ಲಕ್ಷ ವಹಿವಾಟು ನಡೆಯುತ್ತಿತ್ತು. ಈ ವರ್ಷ ವಹಿವಾಟು ತೀವ್ರ ಕುಸಿದಿದೆ. ₹5 ಲಕ್ಷ ವ್ಯಯಿಸಿ 1,500 ಚಿಕ್ಕ ಗಾತ್ರದ ಗಣಪತಿ ಖರೀದಿಸಿದ್ದೇನೆ. ದೊಡ್ಡ ಗ್ರಾತ್ರದ ಗಣಪತಿಗಳಿಗೆ ಬಣ್ಣ ಹಚ್ಚದಂತೆ ಎಲ್ಲರಿಗೂ ಮಾಹಿತಿ ನೀಡುತ್ತಿದ್ದೇನೆ ಎನ್ನುತ್ತಾರೆ ಕುಂಬಾರ ಸಂಘದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಸ್‌.ರವಿ.

ಕೂಲಿಯೂ ಕೈಸೇರಿಲ್ಲ

ಪ್ರತಿ ವರ್ಷ ಈ ವೇಳೆಗಾಗಲೇ 500 ಗಣಪತಿ ಮೂರ್ತಿಗಳು ಮಾರಾಟವಾಗುತ್ತಿದ್ದವು. ಈ ವರ್ಷ ಈಗಾಗಲೇ 250 ಗಣಪತಿ ವಿಗ್ರಹ ತಯಾರಿಸಿದ್ದು, ₹1 ಲಕ್ಷ ಬಂಡವಾಳ ತೊಡಗಿಸಿದ್ದೇವೆ. ಕಚ್ಚಾವಸ್ತು, ತಯಾರಿಸಿರುವ ಕೂಲಿಗೆ ಸಾಕಗುವಷ್ಟು ಆದಾಯವೂ ಕೈಸೇರಿಲ್ಲ. ಹಬ್ಬಕ್ಕೆ ಕೆಲವೇ ದಿನ ಬಾಕಿ ಇದ್ದು, ಗಣಪತಿ ಮಾರಾಟಕ್ಕೆ ಅವಕಾಶ ನೀಡುತ್ತಾರೊ, ಇಲ್ಲವೊ ಎನ್ನುವ ಬಗ್ಗೆಯೂ ಸ್ಪಷ್ಟತೆಯಿಲ್ಲದೆ ಗೊಂದಲದಲ್ಲಿದ್ದೇವೆ ಎನ್ನುತ್ತಾರೆ ತುರುವೇಕೆರೆ ತಾಲ್ಲೂಕಿನ ದೇವರಾಜು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು