ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೀಟ್‌ ಸ್ಟ್ರೋಕ್‌’ ಆತಂಕ: ಹಾಸಿಗೆ ಮೀಸಲು

ಬಿಸಿಗಾಳಿಗೆ ಕಂಗೆಟ್ಟ ಜನ, ಆಸ್ಪತ್ರೆಗಳಲ್ಲಿ ಸಾಲು ಗಟ್ಟಿ ನಿಂತ ಸಾರ್ವಜನಿಕರು
Published 1 ಮೇ 2024, 6:16 IST
Last Updated 1 ಮೇ 2024, 6:16 IST
ಅಕ್ಷರ ಗಾತ್ರ

ತುಮಕೂರು: ಹೆಚ್ಚಿದ ಬಿಸಿಲಿನ ತಾಪಮಾನದ ಜತೆಗೆ ಬಿಸಿಗಾಳಿ ಜನರನ್ನು ಕಂಗೆಡಿಸಿದ್ದು, ‘ಹೀಟ್‌ ಸ್ಟ್ರೋಕ್‌’ನ ಆತಂಕ ಶುರುವಾಗಿದೆ. ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಹಾಸಿಗೆ ಮೀಸಲಿಡಲಾಗಿದೆ.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಉರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಹೀಟ್‌ ಸ್ಟ್ರೋಕ್‌ ಪ್ರಕರಣಗಳು ಕಾಣಿಸಿಕೊಂಡರೆ ತಕ್ಷಣಕ್ಕೆ ಸ್ಪಂದಿಸಲು ಆಸ್ಪತ್ರೆಗಳಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 5, ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 2 ಪ್ರತ್ಯೇಕ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.

ಹೆಚ್ಚಿದ ಬಿಸಿಲಿನಿಂದ ಜನರ ಆರೋಗ್ಯವೂ ಹದಗೆಟ್ಟಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಮುಂದೆ ಜನರು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ‘ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಸುಸ್ತು, ತಲೆ ಸುತ್ತು ಬರುವುದು, ಕೆಲಸ ಮಾಡಲು ಆಗದಿರುವುದು, ಸ್ನಾಯು ಸೆಳೆತ, ಜ್ವರ ಸೇರಿದಂತೆ ಇತರೆ ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ. ಇದೇ ಸಮಸ್ಯೆ ಹೊತ್ತು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಗಂಭೀರವಾದ ಪ್ರಕರಣಗಳು ಕಾಣಿಸಿಕೊಳ್ಳುತ್ತಿಲ್ಲ.

‘ಬಿಸಿಲಿನಿಂದ ಬೆವರುವುದು ಜಾಸ್ತಿಯಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ದೇಹದಲ್ಲಿ ನೀರಿನ ಸಮತೋಲನ ಕಾಯ್ದುಕೊಳ್ಳಬೇಕು. ನೀರು ಹೆಚ್ಚು ಕುಡಿಯಬೇಕು. ಎಳನೀರು ಸೇವನೆಗೆ ಒತ್ತು ಕೊಡಬೇಕು. ಮಧ್ಯಾಹ್ನದ ಹೊತ್ತಿನಲ್ಲಿ ಹೊರಗಡೆ ಬರಬಾರದು. ತೆಳುವಾದ ಬಟ್ಟೆ ಧರಿಸಬೇಕು. ಸುಸ್ತು, ಜ್ವರದ ಲಕ್ಷಣ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾ ಆಸ್ಪತ್ರೆ ವೈದ್ಯರೊಬ್ಬರು ಮಾಹಿತಿ ಹಂಚಿಕೊಂಡರು.

ಮಳೆ ಕೊರತೆಯಿಂದ ಗಿಡ–ಮರಗಳು ಒಣಗುತ್ತಿವೆ. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ, ಎಲ್ಲರನ್ನು ತನ್ನತ್ತ ಕೈಬೀಸಿ ಕರೆಯುತ್ತಿದ್ದ ದೇವರಾಯನದುರ್ಗ, ಚಿನಗ ಬೆಟ್ಟದಲ್ಲಿ ಬೃಹತ್‌ ಮರಗಳ ಎಲೆ ಉದುರಿದೆ. ನೀರಿಲ್ಲದೆ ಪ್ರಾಣಿ, ಪಕ್ಷಿಗಳು ನರಳುತ್ತಿವೆ. ಸಂಘ–ಸಂಸ್ಥೆಗಳಿಂದ ದೇವರಾಯನದುರ್ಗದ ರಸ್ತೆಯಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಇದು ಅರಣ್ಯದ ಒಳಗಿರುವ ಪ್ರಾಣಿಗಳಿಗೆ ಉಪಯೋಗವಾಗುತ್ತಿಲ್ಲ.

‘ಅರಣ್ಯ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿಯೇ ಉಳಿದಿದ್ದಾರೆ. ಹೊರಗಡೆ ಬಂದು ವಾಸ್ತವದ ಸ್ಥಿತಿ ಅರಿಯುವ ಕೆಲಸ ಮಾಡುತ್ತಿಲ್ಲ. ಸಂಘ–ಸಂಸ್ಥೆಯವರು ಮಾಡಿದ ಕೆಲಸವನ್ನು ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ’ ಎಂದು ಜಿಲ್ಲೆಯ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮುಂದಿನ ವಾರ ಮಳೆ

ಜಿಲ್ಲೆಯಲ್ಲಿ ಮೇ ಎರಡನೇ ವಾರದಿಂದ ಮಳೆಯಾಗುವ ಮುನ್ಸೂಚನೆ ಇದೆ. ವಾಡಿಕೆಯ ಮಳೆಯಾಗಲಿದ್ದು ಶುರುವಾಗುವುದು ಸ್ವಲ್ಪ ವಿಳಂಬವಾಗಲಿದೆ. ಈಗಾಗಲೇ ಮಳೆಯಾಗಿದ್ದರೆ ಉದ್ದು ಹೆಸರು ಅಲಸಂದೆ ಬೆಳೆಗೆ ಅನುಕೂಲ ಆಗುತ್ತಿತ್ತು. ಮುಂದಿನ ವಾರದಿಂದ ಮಳೆಯಾಗುವ ಸಾಧ್ಯತೆ ಇದೆ. ಡಾ.ವಿ.ಗೋವಿಂದಗೌಡ ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ ತಿಪಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT