ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಚಾವಣಿ ಸಗಣಿಯ ನೆಲಹಾಸು

Last Updated 24 ಜೂನ್ 2018, 14:04 IST
ಅಕ್ಷರ ಗಾತ್ರ

ಹುಲಿಯೂರುದುರ್ಗ: ನಿರ್ಗತಿಕ ಬದುಕನ್ನೇ ತನ್ನದಾಗಿಸಿಕೊಂಡು ಜೀವನ ನಡೆಸುತ್ತಿದ್ದ ವೃದ್ಧೆ ಹೊಂಬಾಳೆ ತಿಮ್ಮಮ್ಮನಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ನಿಂತಾಗ ಅಚ್ಚರಿಯೋ ಅಚ್ಚರಿ. ಕ್ಷೇತ್ರದ ಶಾಸಕರು ಜೇಬಿನಿಂದ ತೆಗೆದು ಇಪ್ಪತ್ತು ಸಾವಿರ ಕೈಗಿತ್ತಾಗ ಅವಳಿಗೆ ದಿಗ್ಭ್ರಮೆ. ಎಲ್ಲರೂ ತನ್ನ ಬಂಧುಗಳಂತೆ ಅಕ್ಕರೆ ತೋರಿದಾಗ ಅವಳ ಕಣ್ಣಾಲಿಗಳಲ್ಲಿ ನೀರು ಜಿನುಗಿದುದು ಮನಕರಗುವಂತ್ತಿತ್ತು.

ಇದೆಲ್ಲ ನಡೆದದ್ದು, ಅಮೃತೂರು ಹೋಬಳಿ ಸಣಬಘಟ್ಟ ಗ್ರಾಮದಲ್ಲಿ. ಚಾಣಿ ಇಲ್ಲದ ಮನೆಯಲ್ಲಿ, ಸಗಣಿಯ ನೆಲ ಹಾಸಿನ ಮೇಲೆ, ಮಣ್ಣು ಕರಗಿದ ಕಲ್ಲು ಗೋಡೆಗಳ ನಡುವೆ ಉಸಿರಾಡಿಕೊಂಡಿದ್ದ ಗ್ರಾಮದ ವೃದ್ದೆಯ ಬದುಕಿನ ಚಿತ್ರಣವನ್ನು ಸಾಮಾಜಿಕ ಜಾಲತಾಣ ಫೇಸ್, ಬುಕ್‌ನಲ್ಲಿ ಗ್ರಾಮದ ಯುವಕ ಕುಣಿಗಲ್ ತಾಲ್ಲೂಕು ಸಂರಕ್ಷಣಾ ಸೇನೆಯ ಅಧ್ಯಕ್ಷ ಗಿರೀಗೌಡ ಹರಿಬಿಟ್ಟ ಕೂಡಲೇ ಎಲ್ಲರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಸಂತೈಸಿದರು.

ಶಾಸಕ ಡಾ.ಎಚ್.ಡಿ.ರಂಗನಾಥ್ ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೇ ವೃದ್ಧೆಯ ಮನೆಯ ನಿರ್ಮಾಣ ಕಾರ್ಯ ಆರಂಭವಾಗಬೇಕು ಎಂದು ತಾಕೀತು ಮಾಡಿದರು.

ಫಲಾನುಭವಿಗಳು ಬಸವ ವಸತಿ ಹಾಗೂ ನರೇಗಾ ಯೋಜನೆಯ ಆರ್ಥಿಕ ಸೌಲಭ್ಯ ಪಡೆದು ತಾವೇ ಸ್ವತಃ ವಸತಿ ನಿರ್ಮಾಣ ಕೈಗೊಳ್ಳಲು ಅವಕಾಶವಿದ್ದು, ವೃದ್ಧೆಗೆ ಮನೆ ನಿರ್ಮಿಸಿಕೊಡಲು ಯಾರೊಬ್ಬರೂ ಮುಂದೆ ಬಾರದ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಸಮಜಾಯಿಷಿ ನೀಡಲು ಮುಂದಾದ ಅಭಿವೃದ್ದಿ ಅಧಿಕಾರಿಯ ಮಾತನ್ನು ಒಪ್ಪದ ಶಾಸಕರು ನೀವೇ ಏಕೆ ಕಟ್ಟಿಕೊಡಬಾರದಿತ್ತು ಎಂದು ಪ್ರಶ್ನಿಸಿದರು.

ನಾಳೆಯೇ ಮನೆಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಒಂದೇ ಹಂತದಲ್ಲಿ ಪೂರ್ಣಗೊಳಿಸುವುದಾಗಿ ಶಾಸಕರು ಹೇಳಿದರು. ಬಸವ ವಸತಿ ಹಾಗೂ ನರೇಗಾ ಯೋಜನೆಗಳಲ್ಲಿರುವ ಒಂದು ಲಕ್ಷ ಐವತ್ತಾರು ಸಾವಿರ ಮೊಬಲಗು ವಸತಿ ರಹಿತರ ಮನೆಯ ನಿರ್ಮಾಣಕ್ಕೆ ಲಭ್ಯವಿದೆ ಎಂದು ಅಭಿವೃದ್ಧಿ ಅಧಿಕಾರಿ ದಿಲೀಪ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಮಗೂ ವಸತಿ ಕೊಡಿ: ತಿಮ್ಮಮ್ಮನ ಸ್ಥಿತಿಗಿಂತ ನಮ್ಮ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ನಾವು ಕೂಡ ಯೋಜನೆಯ ಅರ್ಹ ಫಲಾನುಭವಿಗಳಾಗಿದ್ದು, ವಸತಿ ಭಾಗ್ಯ ತಮಗೂ ಸಿಗಬೇಕಿದೆ ಎಂದು ಶಾಸಕರಲ್ಲಿ ಅಳಲು ತೋಡಿಕೊಂಡರು. ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಶಾಸಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT