ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳ ಆಯೋಗದ ಸಭೆ: ಅಧಿಕಾರಿಗಳಿಗೆ ಚಾಟಿ ಬೀಸಿದ ಆಯೋಗ

ಮಾನವ ಹಕ್ಕುಗಳ ಆಯೋಗದ ಸಭೆ; ಸಾರ್ವಜನಿಕರಿಂದ ಅಹವಾಲು ಸ್ವೀಕಾರ
Published 14 ಫೆಬ್ರುವರಿ 2024, 5:38 IST
Last Updated 14 ಫೆಬ್ರುವರಿ 2024, 5:38 IST
ಅಕ್ಷರ ಗಾತ್ರ

ತುಮಕೂರು: ಗೊಲ್ಲರಹಟ್ಟಿಗಳಲ್ಲಿ ಋತುಮತಿಯಾದ ಬಾಲಕಿಯರು ಹಾಗೂ ಬಾಣಂತಿಯರನ್ನು ಊರಾಚೆ ಇಡುವ ಅನಿಷ್ಟ ಪದ್ಧತಿ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ ಪೊಲೀಸ್‌ ಇಲಾಖೆ, ಜಿಲ್ಲಾ ಆಡಳಿತದ ಅಧಿಕಾರಿಗಳಿಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಚಾಟಿ ಬೀಸಿದರು.

ನಗರದಲ್ಲಿ ಮಂಗಳವಾರ ಮಾನವ ಹಕ್ಕುಗಳ ಆಯೋಗದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ಮತ್ತು ಕಾರ್ಯಾಗಾರದಲ್ಲಿ ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೆಣ್ಣು ಮಕ್ಕಳನ್ನು ಊರಾಚೆ ಗುಡಿಸಲಿನಲ್ಲಿ ಇಡುತ್ತಿರುವುದು ಅನಾಗರಿಕತೆ ಪರಮಾವಧಿ. ಸಮಾಜದ ಗುರು- ಹಿರಿಯರು ಸಂಪ್ರದಾಯ ಬಿಡಲು ಸಿದ್ಧರಿಲ್ಲ. ಅಧಿಕಾರಿಗಳು ಪದ್ಧತಿ ನಿರ್ಮೂಲನೆಗೆ ಮುಂದಾಗದೆ, ಅಂತರ ಕಾಯ್ದುಕೊಂಡಿದ್ದಾರೆ. ಈ ಇಬ್ಬರ ಜಟಾಪಟಿಯ ಮಧ್ಯೆ ಏನೂ ಅರಿಯದ ಹೆಣ್ಣು ಮಕ್ಕಳು ನರಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ತಾನೆ ಜನಿಸಿದ ಶಿಶುವನ್ನು ಅಡವಿಯಲ್ಲಿ ಬಿಟ್ಟು ಬರುವ ಕ್ರೂರ ಮನಸ್ಸುಗಳು ಸಮಾಜದಲ್ಲಿ ಇನ್ನೂ ಜೀವಂತವಾಗಿವೆ. ಒಂದು ಮಗುವನ್ನು ಕಾಡಿನಲ್ಲಿ ಬಿಟ್ಟು ಬರುವುದು ಅಪರಾಧ. ಇದು ಹಕ್ಕುಗಳನ್ನು ಕಸಿದುಕೊಂಡಂತೆ. ಪೊಲೀಸರು ಇಂತಹ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೆಚ್ಚಿನ ಘಟನೆಗಳಲ್ಲಿ ಪ್ರಕರಣ ದಾಖಲಿಸಿಲ್ಲ. ಪೋಷಕರನ್ನು ಜೈಲಿಗೆ ಹಾಕುವ ಕೆಲಸವಾಗಿಲ್ಲ. ಇದು ಪೊಲೀಸರ ವೈಫಲ್ಯ ಎಂದು ಕಟುವಾಗಿಯೇ ಮಾತನಾಡಿದರು.

ಇಡೀ ನಾಗರಿಕ ಸಮಾಜ ತಲೆ ತಗ್ಗಿಸಿ, ಕ್ಷಮೆ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳನ್ನು ಊರಿಂದ ಆಚೆ ಇಡುವ ಪೋಷಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸುವ ತನಕ ಅನಿಷ್ಟ ಪದ್ಧತಿ ನಿಲ್ಲುವುದಿಲ್ಲ. ಇಂತಹ ಘಟನೆಗಳಲ್ಲಿ ಪ್ರಕರಣ ದಾಖಲಿಸದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ತಪ್ಪಿತಸ್ಥರನ್ನು ಜೈಲಿಗೆ ಹಾಕುವ ಪೊಲೀಸರೇ ತಪ್ಪಿತಸ್ಥರಾದರೆ ಅವರನ್ನೇ ಜೈಲಿಗೆ ಕಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅನಿಷ್ಟ ಪದ್ಧತಿ ತಡೆಯಲು ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಯಾವ ಕ್ರಮಕೈಗೊಂಡಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ. ಸಂಬಳ ಸಹಿತ ರಜೆ ಪಡೆಯುತ್ತಾರೆ. ಕೆಲಸ ಮಾಡದೇ ವೇತನ ತೆಗೆದುಕೊಳ್ಳುತ್ತಾರೆ. ನಿವೃತ್ತಿಯ ನಂತರ ಪಿಂಚಣಿ ಒಳಗೊಂಡಂತೆ ಎಲ್ಲ ಸೌಲಭ್ಯಗಳೂ ಸಿಗುತ್ತವೆ. ಆದರೆ, ನಿಮ್ಮಿಂದ ಜನರಿಗೆ ಏನು ಪ್ರಯೋಜನವಾಗಿದೆ? ಎಂದು ಪ್ರಶ್ನಿಸಿದರು.

ಗ್ರಾಮ ಆಡಳಿತಾಧಿಕಾರಿಯಿಂದ ಹಿಡಿದು ಶಾಲೆಯ ಶಿಕ್ಷಕರ ವರೆಗೆ ಎಲ್ಲರು ಅನಿಷ್ಟ ಪದ್ಧತಿ ತೊಡೆದು ಹಾಕಲು ಕೈ ಜೋಡಿಸಬೇಕು. ಇಂತಹ ಘಟನೆಗಳು ಗಮನಕ್ಕೆ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ, ‘ಜಿಲ್ಲೆಯಲ್ಲಿ ಪೊಲೀಸ್‌, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಬೇಕು. ಆಯೋಗಕ್ಕೆ ದೂರಿನ ವರದಿ ಕಳುಹಿಸಲು ತಡ ಮಾಡಬಾರದು. ಕಠಿಣ ಕ್ರಮಕೈಗೊಳ್ಳುವ ತನಕ ಗೊಲ್ಲರಹಟ್ಟಿಗಳಲ್ಲಿ ಅನಿಷ್ಟ ಪದ್ಧತಿ ತೊಲಗಿಸಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳನ್ನು ಊರಿಂದ ಆಚೆ ಇಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದರೆ ಮಾತ್ರ ಇದರಿಂದ ಹೊರ ಬರಲು ಸಾಧ್ಯ’ ಎಂದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಮಾನವ ಹಕ್ಕುಗಳ ಆಯೋಗದ ಸದಸ್ಯ ಟಿ.ಶ್ಯಾಮ್‌ಭಟ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಕೆ.ವಿ.ಅಶೋಕ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿ.ಮರಿಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಇತರರು ಹಾಜರಿದ್ದರು.

ಪ್ರಕರಣ ದಾಖಲು: ಅಗತ್ಯ ಕ್ರಮ ತುಮಕೂರು ತಾಲ್ಲೂಕಿನ ಕೋರ ಹೋಬಳಿಯ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯ ಊರಾಚೆ ಗುಡಿಸಲಿನಲ್ಲಿದ್ದ ಮಗು ಸಾವನ್ನಪ್ಪಿದ್ದ ಬಗ್ಗೆ ಮಾನವ ಹಕ್ಕುಗಳ ಆಯೋಗದಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿದೆ. ಈ ಕುರಿತು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಆಯೋಗದ ಅಧ್ಯಕ್ಷ ಎಲ್‌.ನಾರಾಯಣಸ್ವಾಮಿ ತಿಳಿಸಿದರು. ಸಭೆಯ ನಂತರ ಸಾರ್ವಜನಿಕರ ಜತೆ ನಡೆದ ಸಂವಾದದಲ್ಲಿ ಮಾತನಾಡಿ ‘ಗೊಲ್ಲರಹಟ್ಟಿಯ ಅನಿಷ್ಟ ಪದ್ಧತಿ ಕೊನೆಗಾಣಿಸಲು ಅಧಿಕಾರಿಗಳು ಮುಂದಾಗಬೇಕು. ಇಂತಹ ಘಟನೆ ನಡೆದ ಕೂಡಲೇ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥರನ್ನು ಬಂಧಿಸಬೇಕು’ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನ ದುರ್ಗದಹಳ್ಳಿಯಲ್ಲಿ ಸ್ಮಶಾನಕ್ಕೆ ಹೋಗಲು ರಸ್ತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಗ್ರಾಮಸ್ಥರು ಅಧ್ಯಕ್ಷರ ಗಮನಕ್ಕೆ ತಂದರು. ಕೂಡಲೇ ಸ್ಮಶಾನಕ್ಕೆ ಪ್ರತ್ಯೇಕ ಜಾಗ ಗುರುತಿಸುವಂತೆ ತಹಶೀಲ್ದಾರ್‌ ಸಿದ್ದೇಶ್‌ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ನಿರ್ದೇಶಿಸಿದರು.

ಐಎಎಸ್‌ ಅಧಿಕಾರಿಗಳಿಗೆ ಎಚ್ಚರಿಕೆ

ಸರ್ಕಾರಿ ನೌಕರರೆಲ್ಲರೂ ಸಹ ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣು ಮಕ್ಕಳ ರಕ್ಷಣೆಗೆ ನಿಲ್ಲಬೇಕು. ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಮತ್ತು ಮಗುವನ್ನು ಊರಾಚೆ ಇಟ್ಟಿದ್ದಕ್ಕೆ ಮಗು ಸಾವನ್ನಪ್ಪಿದೆ. ಇಂತಹ ಪ್ರಕರಣ ಮರು ಕಳಿಸಿದರೆ ಐಎಎಸ್‌ ಅಧಿಕಾರಿಗಳ ವಿರುದ್ಧ ಕಲಂ 302 304ರಡಿ ಪ್ರಕರಣ ದಾಖಲಿಸಲಾಗುವುದು ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಎಚ್ಚರಿಸಿದರು. ಪ್ರಕರಣ ದಾಖಲಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಯೋಗದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT