ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರಂಟಿ’: ಬೊಮ್ಮಾಯಿ ಸುಮ್ಮನೆ ಕೊಡುತ್ತಿದ್ದರೆ? ಪರಮೇಶ್ವರ ಪ್ರಶ್ನೆ

Published 29 ಮೇ 2023, 15:59 IST
Last Updated 29 ಮೇ 2023, 15:59 IST
ಅಕ್ಷರ ಗಾತ್ರ

ತುಮಕೂರು: ‘ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನೀಡಿರುವ ‘ಗ್ಯಾರಂಟಿ’ಗಳನ್ನು ಎಲ್ಲರಿಗೂ ಕೊಟ್ಟುಬಿಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ. ಅವರಾಗಿದ್ದರೆ ಹಾಗೆಯೆ ಕೊಡುತ್ತಿದ್ದರೆ?’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರಶ್ನಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವುದೇ ನಿಯಮ ಇಲ್ಲದೆ ಕೇಳಿದವರಿಗೆಲ್ಲ ಕೊಡಲು ಸಾಧ್ಯವೇ? ಹೇಳಿದ್ದೀರಿ ಕೊಟ್ಟುಬಿಡಿ ಎಂದರೆ ಕೊಡಲಾಗದು’ ಎಂದರು.

‘ಗ್ಯಾರಂಟಿ’ ಜಾರಿಯಲ್ಲಿ ಗೊಂದಲ ಉಂಟಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಬಿಜೆಪಿಯವರಿಗೆ ಜನ ಸಮುದಾಯದಲ್ಲಿ ಗೊಂದಲ ಸೃಷ್ಟಿ ಮಾಡಬೇಕು ಎಂಬ ಉದ್ದೇಶ ಇರುವಂತೆ ಕಾಣುತ್ತದೆ. ಸರ್ಕಾರ ರಚನೆಯಾದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿಗೆ ನಿರ್ಧರಿಸಿ ಆದೇಶ ಹೊರಡಿಸಲಾಗಿದೆ. ಆಯಾ ಇಲಾಖೆಗಳು ಜಾರಿಗೆ ಕಾರ್ಯ ಯೋಜನೆ ರೂಪಿಸುತ್ತಿವೆ’ ಎಂದು ಹೇಳಿದರು.

‘ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದ್ದಾರೆ. ಜನ ಏನು ತೀರ್ಮಾನ ಕೊಟ್ಟಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ನಮಗೆ ಕೊಟ್ಟಿರುವ ಜವಾಬ್ದಾರಿ ನಮಗೂ ಗೊತ್ತಿದೆ. ನಾವು ಸ್ಪಂದಿಸದಿದ್ದರೆ ಜನರು ಏನು ಮಾಡುತ್ತಾರೆ ಎಂಬುದೂ ಗೊತ್ತಿದೆ. ಷರತ್ತುಗಳಿದ್ದರೆ ಇಲಾಖೆಯವರು ಹೇಳುತ್ತಾರೆ. ಅದನ್ನು ಪರಿಶೀಲಿಸಿ ವಿನಾಯಿತಿ ಕೊಡುವ ಅಧಿಕಾರ ಸಚಿವ ಸಂಪುಟಕ್ಕೆ ಇದೆ. ಎಲ್ಲವೂ ಗೊತ್ತಿದ್ದೇ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ಗಲಭೆಯಾಗುವ ಸಾಧ್ಯತೆ ಬಗ್ಗೆ ಮಾಜಿ ಸಂಸದ ವೀರಪ್ಪಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಪೊಲೀಸ್ ಇಲಾಖೆ ಸಮರ್ಥವಾಗಿದೆ. ಯಾವುದೇ ಗಲಾಟೆ, ದಂಗೆ ನಡೆಯದಂತೆ ನೋಡಿಕೊಳ್ಳುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT