ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಉದ್ಯಾನಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ

ಕುಂದುಕೊರತೆ ಸಭೆಯಲ್ಲಿ 15ನೇ ವಾರ್ಡ್‌ನ ಸದಸ್ಯೆ ಗಿರಿಜಾ ಧನಿಯಕುಮಾರ್ ಒತ್ತಾಯ
Last Updated 5 ಸೆಪ್ಟೆಂಬರ್ 2021, 6:36 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿನ ಉದ್ಯಾನಗಳು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ 15ನೇ ವಾರ್ಡ್‌ನ ಸದಸ್ಯೆ ಗಿರಿಜಾ ಧನಿಯಕುಮಾರ್ ಅವರು ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದರು.

ನಗರಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ 15ನೇ ವಾರ್ಡ್‌ನ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ಹೃದಯಭಾಗದಲ್ಲಿರುವ ಉದ್ಯಾನಗಳಲ್ಲಿ ರಾತ್ರಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳಲ್ಲಿ ನಡೆಸುತ್ತಿದ್ದಾರೆ. ಸಾರ್ವಜನಿಕರು ಪ್ರಶ್ನಿಸಿದರೆ ಧಮಕಿ ಹಾಕುತ್ತಾರೆ. ಪಾರ್ಕ್‌ಗಳ ನಿರ್ವಹಣೆ ಸಹ ಸರಿಯಾಗಿ ಆಗುತ್ತಿಲ್ಲ. ಜೂನಿಯರ್ ಕಾಲೇಜಿನ ಆಲದಮರದ ಪಾರ್ಕ್‌ ಅನ್ನು ಯಾರು ನಿರ್ವಹಣೆ ಮಾಡಬೇಕು ಎಂಬ ಗೊಂದಲವಿದೆ. ಮರದ ಎಲೆಗಳು ನಿತ್ಯ ಬೀಳುವುದರಿಂದ ಒಂದು ದಿನ ಕಸ ತೆಗೆಯದಿದ್ದರೂ ಕಸ ತುಂಬಿಕೊಳ್ಳುತ್ತದೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಮೆಗಾ ಗ್ಯಾಸ್ ಸಂಸ್ಥೆಯವರು ಗಾಂಧಿನಗರದ ಕೆಲ ಮನೆಗಳಿಗೆ ಇಂದಿಗೂ ಸಂಪರ್ಕ ಕಲ್ಪಿಸಿಲ್ಲ. ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಗೌರಿ– ಗಣೇಶ ಹಬ್ಬದ ಸಂದರ್ಭದಲ್ಲಿ ವಾರ್ಡ್‌ನ ಸ್ವಚ್ಛತೆ ಹಾಗೂ ನೀರಿನ ಸಮರ್ಪಕ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಸ ಸರಿಯಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಕಸದ ರಾಶಿ ಅಲ್ಲಲ್ಲಿ ಕಾಣುತ್ತಿದ್ದು, ತೆರವುಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಆಯುಕ್ತೆ ರೇಣುಕಾ ಪ್ರತಿಕ್ರಿಯಿಸಿ, ನಗರದಿಂದ ಕಸವನ್ನು ಹೊರಗೆ ಸಾಗಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. 15ನೇ ವಾರ್ಡ್‌ಗೆ ಪತ್ಯೇಕವಾಗಿ ಒಂದು ಟ್ರ್ಯಾಕ್ಟರ್‌ ನೀಡಲಾಗಿದೆ. ಮನೆಗಳಿಂದ ಕಸ ತರಲು 4 ಆಟೊಗಳನ್ನು ನಿಯೋಜಿಸಲಾಗಿದೆ. ಅದರೆ ಒಣ ಮತ್ತು ಹಸಿ ಕಸ ಬೇರ್ಪಡಿಸದ ಕಾರಣ ಸ್ವಲ್ಪ ತಡವಾಗುತ್ತಿದೆ. ಈ ಬಗ್ಗೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಅಂದಿನ ಕಸ, ಅಂದೇ ಪ್ರತ್ಯೇಕಗೊಂಡು, ಅಜ್ಜಗೊಂಡನಹಳ್ಳಿ ಕಸವಿಲೇವಾರಿ ಘಟಕಕ್ಕೆ ಹೋಗಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಉದ್ಯಾನಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆಲದಮರದ ಉದ್ಯಾನವನ್ನು ಮುಂದಿನ ಐದು ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕಾಗಿದೆ. ಸ್ಮಾರ್ಟ್ ಸಿಟಿಯ ಪ್ರತಿ ಯೋಜನೆಗೂ ನಿರ್ವಹಣೆಯ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಕೆಲವು ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಂದ ಆವರಣದಲ್ಲಿರುವ ಗಿಡಗೆಂಟಿಗಳನ್ನು ತೆರವಿಗೆ ಪಾಲಿಕೆಗೆ ಒತ್ತಡ ತರುತ್ತಿದ್ದಾರೆ. ಇದು ಪಾಲಿಕೆಯ ಕೆಲಸವಲ್ಲ. ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳ ಸ್ವಚ್ಛತೆಯನ್ನು ಇಲಾಖೆಯವರೇ ಮಾಡಿಸಿಕೊಳ್ಳಬೇಕು. ಇದು ಪಾಲಿಕೆ ಜವಾಬ್ದಾರಿಯಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಗೌರಿ, ಗಣೇಶ ಹಬ್ಬದ ಆಚರಣೆ, ಗಣೇಶ ಪ್ರತಿಷ್ಠಾಪನೆ ಕುರಿತಂತೆ ಇನ್ನೂ ಪಾಲಿಕೆಗೆ ಸರ್ಕಾರದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಅದು ಬಂದ ತಕ್ಷಣ ತಿಳಿಸಲಾಗುವುದು. ಮನೆಗಳಲ್ಲಿ ಕೂರಿಸುವ ಗಣೇಶನ ವಿಸರ್ಜನೆಗೆ ಈ ಹಿಂದಿನ ರೀತಿ ಎರಡು ದಿನ ಪ್ರತಿ ವಾರ್ಡ್‌ನ ವೃತ್ತಗಳಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗುವುದು ಎಂದು ತಿಳಿಸಿದರು.

ಬೀದಿ ದೀಪಗಳ ನಿರ್ವಹಣೆ ಕುರಿತಂತೆ ಈಗಾಗಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಹರಿಸುವಂತೆ ಸೂಚಿಸಲಾಗಿದೆ. ಗಾಂಧಿನಗರ ಭಾಗದಲ್ಲಿ ಸುಮಾರು 30 ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ. ಸೋಮವಾರದೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ. ಕೆಲವರು ಪೈಪ್‌ಲೈನ್ ಮೂಲಕ ಗ್ಯಾಸ್‌ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಸಮಸ್ಯೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT