ತುರುವೇಕೆರೆ: ‘ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಅಗಲಿಕೆಯಿಂದ ಜೈನ ಸಮುದಾಯಕ್ಕೆ ಅಪಾರ ನಷ್ಟ ಉಂಟಾಗಿದೆ’ ಎಂದು ಜೈನ ಸಮಾಜದ ಮುಖಂಡ ಚಂದ್ರಪ್ರಭು ಹೇಳಿದರು.
ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ದಿಗಂಬರ ಜೈನ ಪಾಶ್ವನಾಥ ಸ್ವಾಮಿ ಟ್ರಸ್ಟ್‌ನ ಗೌರವಾಧ್ಯಕ್ಷರಾಗಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಿಧನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಚಾರುಕೀರ್ತಿ ಅವರು ವಿಚಾರ ಸಂಕಿರಣ, ಧರ್ಮಸಭೆಗಳಲ್ಲಿ ಭಾಗವಹಿಸಿ ತಮ್ಮ ಸರಳ ಶೈಲಿಯ ಪ್ರವಚನಗಳಿಂದ ಶ್ರಾವಕರ ಮನ ಗೆದ್ದಿದ್ದಾರೆ. ಜೈನ ಧರ್ಮ ಇಂದಿಗೂ ತನ್ನತನ ಉಳಿಸಿಕೊಂಡು ಬರುವುದಕ್ಕೆ ಜೈನ ತತ್ವಶಾಸ್ತ್ರ ಗ್ರಂಥಗಳು ಹಾಗೂ ಜೈನರ ವಾಸ್ತುಶಿಲ್ಪ ಕಲೆ ಎಂಬುದನ್ನು ಅರಿತಿದ್ದರು. ಹಾಗಾಗಿಯೇ, ಬಸದಿಗಳ ಜೀರ್ಣೋದ್ಧಾರ, ಜೈನ ಸಾಹಿತ್ಯ ಪ್ರಕಟಣೆಗೆ ವಿಶೇಷ ಒತ್ತು ನೀಡಿದ್ದರು. ಜೊತೆಗೆ, ಅವುಗಳ ರಕ್ಷಣೆಗೆ ಪ್ರಮುಖ ಪಾತ್ರವಹಿಸಿದ್ದರು ಎಂದು ಸ್ಮರಿಸಿದರು.
ಸರಸ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ಸುಮತಿ ಪ್ರಕಾಶ್ ಮಾತನಾಡಿ, ನಾಲ್ಕು ಮಹಾಮಸ್ತಕಾಭಿಷೇಕಗಳು ಶ್ರೀಗಳ ನೇತೃತ್ವದಲ್ಲಿ ನೆರವೇರಿವೆ. ಅವರು ಬಾಹುಬಲಿ ಮಕ್ಕಳ ಆಸ್ಪತ್ರೆ, ವೃದ್ಧಾಶ್ರಮ ಸ್ಥಾಪಿಸಿದರು. ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದಾರೆ. ಹತ್ತು ಹಲವು ಕ್ಷೇತ್ರದಲ್ಲಿ ತಮ್ಮ ಸೇವೆ ನಿರ್ವಹಿಸುತ್ತಾ ನಾಡಿನಲ್ಲಿ ಶಾಂತಿ ನೆಲೆಸಲು ಸತತ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂದರು.
ಮಾಯಸಂದ್ರ ಜೈನ ಸಮಾಜದ ಪದಾಧಿಕಾರಿಗಳು, ಸರಸ್ವತಿ ಮಹಿಳಾ ಸಮಾಜದ ಪದಾಧಿಕಾರಿಗಳು, ಪುರೋಹಿತ ಪ್ರದೀಪ್, ಮುಖಂಡ ವಿಪುಲ್ ಜೈನ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.