ತಿಪಟೂರು: ಸಮಾಜದಲ್ಲಿನ ಯಾವುದೇ ಕ್ಷೇತ್ರ, ವಲಯಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವುದರಿಂದ ಪ್ರತಿಭೆಯ ಅನಾವರಣ ಸಾಧ್ಯ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.
ನಗರದ ಪಲ್ಲಾಗಟ್ಟಿ ಬಡಾವಣೆಯಲ್ಲಿ ಭಾನುವಾರ ಜನಸ್ಪಂದನ ಟ್ರಸ್ಟ್ ಆಯೋಜಿಸಿದ್ದ ಕೋವಿಡ್ ಸಂದರ್ಭದಲ್ಲಿ ಆಸರೆ ಕಳೆದುಕೊಂಡ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಜ್ಯೋತಿ ಬಾ ಫುಲೆ, ಸಾವಿತ್ರಿ ಫುಲೆ ಮತ್ತು ಫಾತಿಮಾ ಶೇಖ್ ಹೆಸರಿನಲ್ಲಿ ₹10 ಲಕ್ಷ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೌರವ ಮತ್ತು ಸನ್ಮಾನ ವಿದ್ಯಾರ್ಥಿ
ಗಳಿಗೆ ಪ್ರೇರಣೆಯಾಗಿ, ಉತ್ತಮ ಸಾಧನೆಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಯ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದರು.
ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮಹಿಳೆಯರಿಗೂ ಸಮಾನ ಅವಕಾಶಗಳಿದ್ದು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಶೈಕ್ಷಣಿಕವಾಗಿ ಸದೃಢರಾದಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ. ವಿದ್ಯೆಯಿಂದ ಮಾತ್ರ ಪ್ರತಿಯೊಬ್ಬರ ಜೀವನ ಬದಲಾವಣೆ ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಅನೇಕರು ದೇವಾಲಯ, ಮಠ-ಮಂದಿರಗಳಿಗೆ ಹೋಗುವುದು ಧರ್ಮ ಎಂದುಕೊಳ್ಳುತ್ತಾರೆ. ಆದರೆ ಒಬ್ಬರು ಇನ್ನೊಬ್ಬರಿಗೆ ಮಾನವೀಯ ಮೌಲ್ಯಗಳನ್ನು ತಿಳಿಸುವುದು ನಿಜವಾದ ಧರ್ಮ. ಯಾರಾದರೂ ದೇಶಕ್ಕಾಗಿ ಸಾಧನೆ ಮಾಡಿದಾಗ ಜಾತಿ, ಮತ, ವರ್ಗ ಮರೆತು ಸಾಮೂಹಿಕವಾಗಿ ಗೌರವಿಸುವುದೇ ಸಂಸ್ಕೃತಿ ಎಂದರು.
ಚಲನಚಿತ್ರ ನಿರ್ದೇಶಕಿ ಸುಮನ.ಡಿ.ಕಿತ್ತೂರ್ ಮಾತನಾಡಿ, ಮಹಿಳೆಯರ ಶಿಕ್ಷಣಕ್ಕೆ ಮೂಲ ಕಾರಣ ಸಾವಿತ್ರಿ ಫುಲೆ ಮತ್ತು ಫಾತಿಮಾ ಶೇಖ್. ಹಿಂದಿನ ದಿನಗಳಲ್ಲಿ ಇವರ ಹೆಸರು ಯಾರಿಗೂ ತಿಳಿಯದಂತೆ ವ್ಯವಸ್ಥಿತವಾಗಿ ರೂಪಿಸಿದ್ದು, ಇತ್ತೀಚಿಗೆ ದಿನಗಳಲ್ಲಿ ಬೆಳಕಿಗೆ ಬರುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹ ದೊರೆತಾಗ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಕಾರ್ಯಕ್ರಮದ ಮೂಲ ಉದ್ದೇಶ ಸಹಾಯ ಮಾಡುವುದಾದರೂ, ಇತಿಹಾಸವನ್ನು ನೆನಸಿಕೊಳ್ಳುವ ಆಶಯವೂ ಅಡಗಿದೆ. ಜ್ಯೋತಿಬಾ ಫುಲೆ, ಸಾವಿತ್ರಿ ಫುಲೆ ಮತ್ತು ಫಾತಿಮಾ ಶೇಖ್ ಇವರನ್ನು ನೆನಪಿಸಿಕೊಳ್ಳುವುದು ಜನಸ್ಪಂದನ ಟ್ರಸ್ಟ್‌ನ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ 98 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಠಾಗೂರು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಅನಿಲ್, ಜಿ.ಪಂ.ಸದಸ್ಯೆ ವತ್ಸಲಾ, ಹಾಲ್ಕುರಿಕೆ ಗ್ರಾ.ಪಂ.ಅಧ್ಯಕ್ಷ ಉಮಾ ಮಹೇಶ್, ಜಿ.ಪಂ.ಮಾಜಿ ಸದಸ್ಯ ತ್ರಿಯಾಂಬಕ, ಸಂತೋಷ್ ಕುಮಾರ್, ಬಿ.ಚೆನ್ನಪ್ಪ ಕಂಚಾಘಟ್ಟ, ಎ.ಇ.ದಿನೇಶ್ ಅನಿವಾಳ, ಎಂ.ಎಸ್.ಸೋಮಶೇಖರ್, ಲಿಂಗರಾಜು, ಶ್ರೀಕಾಂತ್, ತಿಮ್ಲಾಪುರ ದೇವರಾಜು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.