ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಹರಳು ಯೂರಿಯಾಗೆ ಹೆಚ್ಚಿದ ಬೇಡಿಕೆ

ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು ದಿನದಿಂದ ಉತ್ತಮ ಮಳೆ; ಗೊಬ್ಬರಕ್ಕೆ ಮುಗಿಬಿದ್ದ ರೈತರು
Last Updated 18 ಆಗಸ್ಟ್ 2020, 16:38 IST
ಅಕ್ಷರ ಗಾತ್ರ

ಕೊರಟಗೆರೆ: ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಆಗಿದ್ದು, ಮುಸುಕಿನ ಜೋಳ ಹಾಗೂ ರಾಗಿ ಬೆಳೆಗಳಿಗೆ ಹಾಕಲು ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಸಣ್ಣ ಹರಳು ಗೊಬ್ಬರವನ್ನು ರೈತರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ.

ಈಗಾಗಲೇ ರಾಗಿ, ಮುಸುಕಿನಜೋಳ ಇತರೆ ಬೆಳೆಗಳು ಬಿತ್ತನೆಯಾಗಿ ಒಂದೂವರೆ ತಿಂಗಳು ಕಳೆದಿದೆ. ಈಗ ಉತ್ತಮ ಕಾಳು ಕಟ್ಟುವ ಸಲುವಾಗಿ ಮೇಲುಗೊಬ್ಬವಾಗಿ ರೈತರು ಯೂರಿಯಾ ಗೊಬ್ಬರವನ್ನು ಬೆಳೆಗಳಿಗೆ ಹಾಕುತ್ತಾರೆ.

ಲಾರಿಯಲ್ಲಿ ಬಂದ ಯೂರಿಯಾ ಗೊಬ್ಬರವನ್ನು ಅಂಗಡಿಗೆ ಇಳಿಸುವ ಮುನ್ನವೇ
ರೈತರು ಸಾಲುಗಟ್ಟಿನಿಂತು ಖರೀದಿಸಿದ್ದು ಕಂಡು ಬಂತು. ಕಸಬಾ ಹೋಬಳಿ ವ್ಯಾಪ್ತಿಯ ವ್ಯವಸಾಯೋತ್ಪನ್ನ ಮಾರುಕಟ್ಟೆಯಲ್ಲಿ ದೊಡ್ಡ ಅರಳು ಹೊಂದಿರುವ ಯೂರಿಯಾ ಗೊಬ್ಬರ 12.5 ಕ್ವಿಂಟಲ್, ಹೊಳವನಹಳ್ಳಿಯಲ್ಲಿ 40, ಕೋಡ್ಲಹಳ್ಳಿ ವ್ಯವಸಾಯೋತ್ಪನ್ನ ಮಾರುಕಟ್ಟೆಯಲ್ಲಿ 20 ಕ್ವಿಂಟಲ್ ದಾಸ್ತಾನು ಇದೆ. ಆದರೂ
ಅದನ್ನು ರೈತರು ಖರೀದಿಸಲು ಮುಂದಾಗುತ್ತಿಲ್ಲ.

ಎರಡೂ ತರಹದ ಯೂರಿಯಾ ಗೊಬ್ಬರದಲ್ಲಿ ಶೇ 46ರಷ್ಟು ಸಾರಜನಕ ಹಾಗೂ ಬೇವು ಲೇಪನ ಇರುತ್ತದೆ. ಆದರೆ, ರೈತರು ಮಾತ್ರ ಸಣ್ಣ ಹರಳು ಬೇಗ ಕರುಗುತ್ತದೆ ಎಂಬ ಭಾವನೆಯಿಂದ ಅದನ್ನೆ ಹೆಚ್ಚು ಇಷ್ಟ ಪಟ್ಟು ಖರೀದಿಗೆ ಮುಂದಾಗುತ್ತಿದ್ದಾರೆ.

ಕೃಷಿ ಉತ್ಪನ್ನ ಮಾರಿಕಟ್ಟೆಯಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇದ್ದರೂ ಖರೀದಿಗೆ ಮುಂದಾಗುತ್ತಿಲ್ಲ. ಬದಲಾಗಿ ಅಂಗಡಿಗಳಲ್ಲಿ ಸಿಗುವ ಸಣ್ಣ ಹರಳಿನ ಗೊಬ್ಬರವನ್ನೆ ಖರೀದಿಸುತ್ತಿದ್ದಾರೆ.

ತಪ್ಪು ಕಲ್ಪನೆ

‘ರೈತರಲ್ಲಿ ಸಣ್ಣ ಹಾಗೂ ದಪ್ಪ ಹರಳಿನ ಯೂರಿಯಾ ಎಂಬ ತಪ್ಪು ಕಲ್ಪನೆ ಇದೆ. ಎರಡೂ ತರಹದ ಗೊಬ್ಬರದಲ್ಲಿ ಒಂದೇ ರೀತಿಯ ಸಾರಜನಕ ಇರುತ್ತದೆ. ಒಂದೇ ರೀತಿಯ ಫಲಿತಾಂಶವೂ ಇರುತ್ತದೆ. ಆದರೆ, ಸಣ್ಣ ಅರಳು ಬೇಗ ಕರಗುತ್ತದೆ ಎಂಬ ಉದ್ದೇಶದಿಂದಷ್ಟೇ ರೈತರು ಖರೀದಿ ಮಾಡಿ ಬೆಳೆಗಳಿಗೆ ನೀಡುತ್ತಿದ್ದಾರೆ. ರೈತರು ಎರಡನ್ನೂ ಬಳಸಬಹುದು’ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT