ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗೊಲ್ಲ ನಿಗಮ; ಮೂಗಿಗೆ ತುಪ್ಪ

ಸಂಘದ ಕಾರ್ಯಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ಆರೋಪ
Last Updated 19 ಜನವರಿ 2021, 2:45 IST
ಅಕ್ಷರ ಗಾತ್ರ

ಗುಬ್ಬಿ: ‘ಕಾಡುಗೊಲ್ಲ ಸಮುದಾಯದ ಅಭ್ಯುದಯಕ್ಕೆ ನಿಗಮ ರಚಿಸಿದ ರಾಜ್ಯ ಸರ್ಕಾರ ನಿಗಮವನ್ನು ಕ್ರಿಯಾಶೀಲಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಮೂಗಿಗೆ ತುಪ್ಪ ಸವರುವ ಕೆಲಸದಂತಾಗಿದೆ’ ಎಂದು ತಾಲ್ಲೂಕು ಕಾಡುಗೊಲ್ಲರ ಸಂಘದ ಕಾರ್ಯಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿರಾ ಚುನಾವಣೆಗೆ ಮುನ್ನ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತು ತಪ್ಪುವುದಿಲ್ಲ ಎಂಬ ಭರವಸೆ ಇದೆ. ಕೊಟ್ಟ ಮಾತಿನಿಂದ ನಿಗಮ ಸ್ಥಾಪನೆಗೆ ಚಾಲನೆ ನೀಡಿದಂತೆ ಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸವನ್ನು ಮಾಡಬೇಕಿದೆ’ ಎಂದರು.

‘ಎಸ್‌ಟಿಗೆ ಸೇರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಕೇಂದ್ರಕ್ಕೆ ತಲುಪಬೇಕಿದೆ. ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದ ಗೊಲ್ಲರು ನಾಗರಿಕರು ಸಮಾಜದಿಂದ ಹೊರತಾಗಿ ಶೈಕ್ಷಣಿಕ, ಆರ್ಥಿಕ ಮಟ್ಟದಲ್ಲೂ ಹಿಂದೆ ಬಿದ್ದಿದ್ದಾರೆ. ಇಂದಿಗೂ ಶಿಕ್ಷಣ ವಂಚಿತ ಮಕ್ಕಳು ಹಟ್ಟಿಗಳಲ್ಲಿದ್ದಾರೆ. ವಿಧಾನಪರಿಷತ್ತು ಅಥವಾ ರಾಜ್ಯಸಭಾ ಸದಸ್ಯರಲ್ಲಿ ಗೊಲ್ಲರಿಗೆ ಆದ್ಯತೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮಾಜದ ಮುಖ್ಯವಾಹಿನಿಗೆ ಗೊಲ್ಲರು ಬರಲು ಸರ್ಕಾರವು ಅವರಿಗೆ ಸವಲತ್ತುಗಳನ್ನು ಒದಗಿಸಿ ಕೊಡಬೇಕು. ಮೂರು ತಿಂಗಳಾದರೂ ನಿಗಮಕ್ಕೆ ಚಾಲನೆ ದೊರೆಯದಿದ್ದರೆ ಕಾಡುಗೊಲ್ಲರು ಕೇವಲ ಮತಬ್ಯಾಂಕ್‌ಗಳು ಎನಿಸಿಕೊಳ್ಳುತ್ತಾರೆ. ಮುಂದಿನ ದಿನದಲ್ಲಿ ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ ಎಂದು ನಮೂದಿಸಬೇಕು. ಈ ಜತೆಗೆ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮವಾಗಿ ಮಾರ್ಪಾಡು ಮಾಡಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲು ಚಿಂತನೆ ನಡೆಸಲಾಗಿದೆ’ ಎಂದರು.

‘ಇದೇ ತಿಂಗಳ 27ರಂದು ನಡೆಯುವ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಅಭಿವೃದ್ಧಿ ಚಿಂತನೆ ನಡೆಸಲಾಗುವುದು. ಪ್ರಜ್ಞಾವಂತರು ಈ ಸಭೆಯಲ್ಲಿ ಸಲಹೆ ಸೂಚನೆ ನೀಡಬೇಕು. ಬಗರ್‌ಹುಕುಂ ಮಂಜೂರಾತಿ ಹೆಸರಿನಲ್ಲಿ ಅಧಿಕಾರಿಗಳು ಮುಗ್ಧ ಜನರ ಜಮೀನು ಕಿತ್ತುಕೊಳ್ಳುತ್ತಿರುವ ಬಗ್ಗೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡ ಸಿದ್ದರಾಜು ಮಾತನಾಡಿ, ‘ಸರ್ಕಾರ ನೀಡಿದ ಭರವಸೆಗಳು ಈಡೇರುವಲ್ಲಿ ವಿಳಂಬ ಧೋರಣೆ ತೋರುತ್ತಿದೆ. ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡದ ಸರ್ಕಾರ ಕೇವಲ ಚುನಾವಣೆಗೆ ಮಾತ್ರ ನಮ್ಮನ್ನು ಬಳಸಿಕೊಂಡಂತೆ ಅನುಮಾನ ಮೂಡುತ್ತಿದೆ. ಸಾಮಾಜಿಕವಾಗಿ ತಳಮಟ್ಟದಲ್ಲಿರುವ ಗೊಲ್ಲ ಸಮಾಜ ಹಕ್ಕು ಪ್ರತಿಪಾದಿಸಿ ಪಕ್ಷಾತೀತವಾಗಿ ಹಕ್ಕೊತ್ತಾಯ ಮಾಡಬೇಕಿದೆ’ ಎಂದರು.

ಕಾಡುಗೊಲ್ಲರ ಸಂಘದ ಯರ‍್ರಪ್ಪ, ನಾಗರಾಜು, ರಾಜಶೇಖರ್, ಸಣ್ಣತಿಮ್ಮಯ್ಯ, ಪುರುಷೋತ್ತಮ್, ಕೆಂಪರಾಜು, ದಿಂಡಿಗನಹಳ್ಳಿ ಹಟ್ಟಿ ಲೋಕೇಶ್, ವನಕಮ್ಮನಹಟ್ಟಿ ಆನಂದ್, ಯರ‍್ರನಹಟ್ಟಿ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT