ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ: ರಾಜ್ಯೋತ್ಸವಕ್ಕೆ ವೃದ್ಧೆಗೆ ಮನೆ ಕೊಡುಗೆ

ಕನ್ನಡ ಹೆಸರಿನ ಆಶ್ರಯದಾತರು ಈ ಗೆಳೆಯರು
Last Updated 4 ನವೆಂಬರ್ 2021, 8:04 IST
ಅಕ್ಷರ ಗಾತ್ರ

ಕೊರಟಗೆರೆ: ಸತತ 15 ವರ್ಷಗಳಿಂದ ತಾಲ್ಲೂಕಿನಾದ್ಯಂತ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ‘ಫ್ರೆಂಡ್ಸ್ ಗ್ರೂಪ್’ ಈ ವರ್ಷ ನಿರ್ಗತಿಕ ವೃದ್ಧೆಗೆ ಮನೆ ಕಟ್ಟಿಕೊಡುವ ಮೂಲಕ ರಾಜ್ಯೋತ್ಸವಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಪಟ್ಟಣದ ಗಿರಿನಗರದಲ್ಲಿ ಮಕ್ಕಳು ಇಲ್ಲದ ರಂಗಮ್ಮ ಎಂಬ ವೃದ್ಧೆ ಗುಡಿಸಿಲಿನಲ್ಲಿ ವೃದ್ಧಾಪ್ಯ ವೇತನದಿಂದಲೇ ಜೀವನ ಸಾಗಿಸುತ್ತಿದ್ದರು. ಕಳೆದ ಮುಂಗಾರಿನಲ್ಲಿ ಸುರಿದ ಮಳೆಗೆ ಗುಡಿಸಲೂ ಹಾಳಾಗಿತ್ತು. ಅಜ್ಜಿ ಬದುಕು ಬೀದಿ ಪಾಲಾಗಿತ್ತು. ಗುಡಿಸಿಲಿನ ಜಾಗದ ಬಯಲಿನಲ್ಲೆ ವಾಸ ಮಾಡುತ್ತಿದ್ದರು. ಫ್ರೆಂಡ್ಸ್ ಗ್ರೂಪ್‌ನ ಕೆ.ಎನ್.ರವಿಕುಮಾರ್ ತನ್ನ ಸ್ನೇಹಿತರೊಂದಿಗೆ ಚರ್ಚಿಸಿ ಅಜ್ಜಿಗೊಂದು ಸೂರು ಕಟ್ಟುವ ತೀರ್ಮಾನಕ್ಕೆ ಬಂದಿದ್ದರು.

ಫ್ರೆಂಡ್ಸ್ ಗ್ರೂಪ್, ನಟ ಜಗ್ಗೇಶ್ ಅಭಿಮಾನಿ ಬಳಗದ ಸದಸ್ಯರು ಹಾಗೂ ಕುಂಚ ಕಲಾವಿದರ ಸಂಘದ ಸ್ನೇಹಿತರು ಕೈಜೋಡಿಸಿ ನಾಲ್ಕು ತಿಂಗಳ ಹಿಂದೆ ಮನೆ ಕಟ್ಟುವ ಕೆಲಸ ಪ್ರಾರಂಭಿಸಿ ಕರ್ನಾಟಕ ರಾಜ್ಯೋತ್ಸವಕ್ಕೆ ಅಜ್ಜಿಗೆ ಉಡುಗೊರೆಯಾಗಿ ಸುಸಜ್ಜಿತ ಮನೆಯೊಂದನ್ನ ನಿರ್ಮಿಸಿ ಕೊಟ್ಟಿದ್ದಾರೆ. ಮನೆಗೆ ‘ಅಜ್ಜಿ ಕನಸಿನ ಮನೆ’ ಎಂಬ ಹೆಸರಿಟ್ಟು ಕನ್ನಡಾಂಬೆಯ ಚಿತ್ರವನ್ನು ದೊಡ್ಡದಾಗಿ ಬಿಡಿಸುವ ಜೊತೆಗೆ ಜಗ್ಗೇಶ್ ಅವರ ಭಾವ ಚಿತ್ರ ಹಾಕಲಾಗಿದೆ. ಕನ್ನಡ ಬಾವುಟದ ಬಣ್ಣವನ್ನೇ ಮನೆಗೆ ಬಳಿಯಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಸೂರಿಲ್ಲದ ವೃದ್ಧೆಯೊಬ್ಬರಿಗೆ ಮನೆ ನಿರ್ಮಿಸಿ ‘ಕನ್ನಡದ ಸೂರು’ ಎಂದು ನಾಮಕರಣ ಮಾಡಿ ಕೊಡುಗೆ ನೀಡಿದ್ದರು. ಎರಡು ವರ್ಷದ ಹಿಂದೆ ಅಂಧ ಗಾಯಕಿ ಸಹೋದರಿಯರಾದ ಮಧುಗಿರಿ ಪಟ್ಟಣದ ರತ್ನಮ್ಮ, ಮಂಜಮ್ಮ ಅವರಿಗೂ ಮನೆ ನಿರ್ಮಿಸಿ ಉಡುಗೊರೆ ನೀಡಿದ್ದರು.

ಪಟ್ಟಣದಾದ್ಯಂತ ಗಿಡನೆಟ್ಟು ಪೋಷಿಸುವುದು, ಉಚಿತ ಆಂಬುಲೆನ್ಸ್ ಸೇವೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ನಿರ್ಗತಿಕರಿಗೆ ಆಶ್ರಯ ನೀಡಬೇಕು, ಬದುಕಿಗೆ ಆಸರೆಯಾಗಬೇಕು ಎನ್ನುವುದು ಈ ಗೆಳೆಯರ ದ್ಯೇಯವಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಾಗಿಸುವ, ರೋಗಿಗಳನ್ನು ಆಸ್ಪತ್ರೆಗೆ ಕರೆತರುವ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯವನ್ನು ಈ ಗೆಳೆಯರು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT