ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರಟಗೆರೆ| ಗ್ರಾ.ಪಂ. ಎಡವಟ್ಟು: 40 ಮನೆ ತೆರವು

ಅರಸಾಪುರ: ನೋಟಿಸ್‌ ನೀಡದೆ ಹೆದ್ದಾರಿ ಪ್ರಾಧಿಕಾರ ಕಾರ್ಯಾಚರಣೆ
Last Updated 29 ಮಾರ್ಚ್ 2023, 6:09 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಅರಸಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಡಿದ ತಪ್ಪಿನಿಂದ ಹೆದ್ದಾರಿ ಜಾಗದಲ್ಲಿ ನಿರ್ಮಾಣ ಮಾಡಿಕೊಂಡಿದ್ದ ಸುಮಾರು 40 ಕುಟುಂಬಗಳು ವಸತಿ ಕಳೆದುಕೊಂಡಿದ್ದು, ಬದುಕು ಬೀದಿಗೆ ಬಿದ್ದಿದೆ.

ಅರಸಾಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಜಾಗವನ್ನು ಪಂಚಾಯಿತಿಯಿಂದ ಮನೆಯ ನಿವೇಶನದ ಖಾತೆ ಮಾಡಿಕೊಡಲಾಗಿದೆ. ಮನೆ ಮತ್ತು ಶೌಚಾಲಯ ನಿರ್ಮಾಣಕ್ಕೆ ವಸತಿ ಯೋಜನೆಯಡಿ ಅನುದಾನವನ್ನೂ ಮಂಜೂರು ಮಾಡಲಾಗಿದೆ. ಅದರಂತೆ ಹೆದ್ದಾರಿ ಜಾಗದಲ್ಲಿ 40ಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

ಆ ಕಾರಣಕ್ಕೆ ಪ್ರತಿವರ್ಷ ಮನೆ ಮತ್ತು ನೀರಿನ ಕಂದಾಯವನ್ನು ಪಂಚಾಯಿತಿಯಿಂದ ವಸೂಲಿ ಮಾಡಲಾಗಿದೆ. ಆದರೆ, ಸೋಮವಾರದಿಂದ ರಾಷ್ಟ್ರೀಯ ಪ್ರಾಧಿಕಾರದ ಹೆದ್ದಾರಿ ಅಧಿಕಾರಿಗಳು ಹೆದ್ದಾರಿಗೆ ನಿಗದಿಯಾದ ಸ್ಥಳವನ್ನು ಒತ್ತುವರಿ ಮಾಡಲಾಗಿದೆ ಎಂಬ ಕಾರಣಕ್ಕೆ ಮನೆಗಳನ್ನು ತೆರವು ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಇದರಿಂದ ಒತ್ತುವರಿ ಜಾಗದಲ್ಲಿ ಪಂಚಾಯಿತಿ ಅಧಿಕಾರಿಗಳ ತಪ್ಪಿನಿಂದ ಮನೆ ನಿರ್ಮಾಣ ಮಾಡಿಕೊಂಡಿರುವ ಕುಟುಂಬಗಳು ಈಗ ಆಸರೆ ಕಳೆದುಕೊಂಡಿವೆ.

ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಾಪುರ, ಬೈರೇನಹಳ್ಳಿ ಮತ್ತು ಅರಸಾಪುರ ತಾಂಡಾದ 40ಕ್ಕೂ ಹೆಚ್ಚು ಬಡಜನರ ಮನೆಗಳು ರಾತ್ರೋರಾತ್ರಿ ನೆಲಸಮವಾಗಿವೆ. ರೈತರು, ಕೂಲಿ ಕಾರ್ಮಿಕ ಕುಟುಂಬಗಳಿಗೆ ಇದರಿಂದ ನಷ್ಟ ಉಂಟಾಗಿದೆ.

ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಜಾಗದಲ್ಲಿ ಮನೆಗಳು ಸೇರಿದಂತೆ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಕಂದಾಯ ಇಲಾಖೆ ಕಚೇರಿ, ಶುದ್ಧ ಕುಡಿಯುವ ನೀರಿನ ಘಟಕ ಕೂಡ ನಿರ್ಮಿಸಲಾಗಿದೆ. ಅನುದಾನ ಬಳಕೆಯ ತರಾತುರಿಯಲ್ಲಿ ಸರ್ಕಾರಿ ಅಧಿಕಾರಿಗಳು ಹೆದ್ದಾರಿ ಜಾಗವನ್ನೇ ಬಳಸಿ ಸರ್ಕಾರಿ ಕಟ್ಟಡಗಳನ್ನೂ ನಿರ್ಮಿಸಿದ್ದಾರೆ. ಈಗ ಅವು ಕೂಡ ನೆಲಸಮವಾಗಿವೆ.

ಹೆದ್ದಾರಿ ಜಾಗಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೆದ್ದಾರಿ ಪ್ರಾಧಿಕಾರದಿಂದ ಮಾಹಿತಿ ನೀಡಿದ್ದರೂ ಗ್ರಾಮ ಪಂಚಾಯಿತಿ ಆಡಳಿತ ಸಾರ್ವಜನಿಕರಿಗೆ ಮಾಹಿತಿ ನೀಡದೆ ಮರೆಮಾಚಿದೆ. ಆ ಕಾರಣಕ್ಕೆ ಒತ್ತುವರಿ ತೆರವು ಸಂಬಂಧ ಯಾರಿಗೂ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ಮಾಡಿರುವುದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

₹ 235 ಕೋಟಿ ವೆಚ್ಚ: ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಮಾರ್ಗವಾಗಿ ಕೊರಟಗೆರೆಯ ಬೈರೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ 51.5 ಕಿ.ಮೀ ಉದ್ದದ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೀದರ್ ಮೂಲದ ಕೆಜಿಸಿಐಪಿಎಲ್ ಖಾಸಗಿ ಕಂಪನಿಯು ₹ 235 ಕೋಟಿ ಮೊತ್ತದ ಟೆಂಡರ್ ಪಡೆದಿದೆ. ಗ್ರಾಮಗಳಲ್ಲಿ 41 ಅಡಿ ಮತ್ತು ಗ್ರಾಮ ಹೊರತುಪಡಿಸಿ 46 ಅಡಿ ವಿಸ್ತರಣೆ ಕಾಮಗಾರಿಯನ್ನು ಸ್ಥಳೀಯರಿಗೆ ಮಾಹಿತಿ ನೀಡದೆ ರಾತ್ರೋರಾತ್ರಿ ಪ್ರಾರಂಭಿಸಲಾಗಿದೆ.

‘ರಾತ್ರೋರಾತ್ರಿ ಮನೆಗಳ ನೆಲಸಮ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ನೋಟಿಸ್ ನೀಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ದಬ್ಬಾಳಿಕೆಯಿಂದ ವರ್ತಿಸುತ್ತಾರೆ. ರಂಜಾನ್ ಇರುವ ಕಾರಣ ಒಂದು ತಿಂಗಳ ಅವಕಾಶ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸದೆ ಮನೆ ನೆಲಸಮ ಮಾಡಿದ್ದಾರೆ’ ಎಂದು ಅರಸಾಪುರದ ನಹೀಮ್ ಉನ್ನಿಸಾ ಅಳಲು
ತೋಡಿಕೊಂಡರು.

‘ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ ಮನೆ ಅಥವಾ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಗ್ರಾ.ಪಂ.ನಿಂದ ಮನೆ ಜಾಗ ಮಂಜೂರು ಮತ್ತು ಕಂದಾಯ ವಸೂಲಾತಿ ಬಗ್ಗೆ ಮಾಹಿತಿ ಪಡೆಯಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ತಹಶೀಲ್ದಾರ್‌ ಮುನಿಸ್ವಾಮಿ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT