ಬುಧವಾರ, ಸೆಪ್ಟೆಂಬರ್ 22, 2021
27 °C
ಲಕ್ಷಾಂತರ ರೂಪಾಯಿ ಆದಾಯವಿದ್ದರೂ ನಿರ್ವಹಣೆ ಇಲ್ಲ: ಸಾರ್ವಜನಿಕರ ಆರೋಪ

ಕೊರಟಗೆರೆ: ಅವ್ಯವಸ್ಥೆಯ ತಾಣವಾದ ಕ್ರೀಡಾಂಗಣ

ಎ.ಆರ್.ಚಿದಂಬರ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ಇಲ್ಲಿನ ತಾಲ್ಲೂಕು ಕ್ರೀಡಾಂಗಣ ಅವ್ಯವಸ್ಥೆಯ ತಾಣವಾಗಿದ್ದು, ಸೂಕ್ತ ನಿರ್ವಹಣೆಯಿಲ್ಲದೆ ಅನಾಥವಾಗಿದೆ.

ವಿಶಾಲವಾದ ಮೈದಾನ, ಒಳಾಂಗಣ ಕ್ರೀಡಾಂಗಣ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸುಪರ್ದಿಯಲ್ಲಿದೆ. ಈ ಕ್ರೀಡಾಂಗಣಕ್ಕೆ ವಿದ್ಯುತ್ ಸೌಲಭ್ಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅಂಕಣಗಳು ಹಾಳಾಗಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಸಾಮಗ್ರಿಗಳನ್ನೂ ಒದಗಿಸಿಲ್ಲ. 

ಕಾಂಪೌಂಡ್‌ಗೆ ಗೇಟ್‌ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಯಾರು, ಯಾವಾಗ ಬೇಕಾದರೂ ಮೈದಾನಕ್ಕೆ ಹೋಗಿ ಬರಬಹುದು. ಬೀದಿ ನಾಯಿಗಳು, ಬಿಡಾಡಿ ದನಗಳು, ಹಂದಿಗಳು ಕೂಡ ಮೈದಾನದಲ್ಲಿ ಓಡಾಡಿಕೊಂಡಿರುತ್ತವೆ.

ಪ್ರತಿ ವರ್ಷ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನದಂದು ಮಾತ್ರ ಕ್ರೀಡಾಂಗಣ ಸ್ವಚ್ಛಗೊಳಿಸಲಾಗುತ್ತದೆ. ಆನಂತರ ಮತ್ತೆ ಅವ್ಯವಸ್ಥೆಯ ತಾಣವಾಗುತ್ತದೆ. ಶೈಕ್ಷಣಿಕ ಕ್ರೀಡಾ ಸ್ಪರ್ಧೆಗಳು ನಡೆಯುವಾಗ ಕ್ರೀಡಾಂಗಣ ಸ್ವಚ್ಛಗೊಳಿಸಿ ವ್ಯವಸ್ಥಿತಿಗೊಳಿಸಲಾಗುತ್ತಿತ್ತು. ಆದರೆ ಎರಡು ವರ್ಷದಿಂದ ಕೊವಿಡ್‌ನಿಂದಾಗಿ ಕ್ರೀಡಾಕೂಟಗಳು ನಡೆಯದೆ ಕ್ರೀಡಾಂಗಣ ಇನ್ನಷ್ಟು ಹದಗೆಟ್ಟಿದೆ.

ಕ್ರೀಡಾಂಗಣಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಕ್ರೀಡಾ ಚಟುವಟಿಕೆ, ವಸ್ತು ಪ್ರದರ್ಶನ, ರಾಜಕೀಯ ಪಕ್ಷಗಳ ಸಮಾವೇಶ, ಸಂಘ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಂದ ಬಾಡಿಗೆ ಬರುತ್ತದೆ. ಹೀಗಿದ್ದರೂ ಕ್ರೀಡಾಂಗಣ ನಿರ್ವಹಣೆಗೆ ಆಸಕ್ತಿ ತೋರುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಕ್ರೀಡಾಂಗಣದಲ್ಲಿ ಮುಂಜಾನೆ ಹಾಗೂ ಸಂಜೆ ವೇಳೆ ಪಟ್ಟಣ ನಿವಾಸಿಗಳು ವಾಯುವಿಹಾರ ಮಾಡುತ್ತಾರೆ. ಸಂಜೆ 7 ಗಂಟೆ ನಂತರ ಅನೈತಿಕ ಚಟುವಟಿಕೆಗಳು ಶುರುವಾಗುತ್ತವೆ. ಸಬಂಧಿಸಿದ ಇಲಾಖೆಯವರು ಸೂಕ್ತ ನಿರ್ವಹಣೆ ಮಾಡಬೇಕು ಎಂದು ಸ್ಥಳೀಯರು, ಕ್ರೀಡಾಪಟುಗಳು ಹಾಗೂ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.