ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯಕ್ಕೆ ವಧಾಗಾರ ಕಾರ್ಯಾರಂಭ

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ₹ 46.63 ಕೋಟಿ ವೆಚ್ಚದಲ್ಲಿ ನಿರ್ಮಾಣ ಚೀಲನಹಳ್ಳಿಯಲ್ಲಿ ನಿರ್ಮಾಣ
Last Updated 13 ಜುಲೈ 2020, 5:59 IST
ಅಕ್ಷರ ಗಾತ್ರ

ಶಿರಾ: ರಾಜ್ಯದಲ್ಲೆ ಪ್ರಥಮ ಕುರಿ, ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರ (ವಧಾಗಾರ) ತಾಲ್ಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಕಾರ್ಯಾರಂಭವಾಗುವ ನಿರೀಕ್ಷೆ ಇದೆ.

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ20 ಎಕರೆಯಲ್ಲಿ ₹ 46.63 ಕೋಟಿ ವೆಚ್ಚದಲ್ಲಿ ಕೇಂದ್ರ ನಿರ್ಮಿಸುತ್ತಿದೆ. ಇದರಿಂದ ಕುರಿಗಾಹಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ರಾಜ್ಯದಲ್ಲಿ ಅತಿ ಹೆಚ್ಚು ಕುರಿ ಮತ್ತು ಮೇಕೆಗಳು ಶಿರಾ ತಾಲ್ಲೂಕಿನಲ್ಲಿವೆ. ಇದನ್ನು ಮನಗಂಡು ಟಿ.ಬಿ.ಜಯಚಂದ್ರ ಅವರು ಪಶುಸಂಗೋಪನೆ ಸಚಿವರಾಗಿದ್ದ ಸಮಯದಲ್ಲಿ ಅಧುನಿಕ ವಧಾಗಾರವನ್ನು ಮಂಜೂರು ಮಾಡಿಸಿದ್ದರು. ನಂತರ ಇದನ್ನು ಹಾಸನ ಜಿಲ್ಲೆಗೆ ವರ್ಗಾವಣೆ ಮಾಡಲು ಪ್ರಯತ್ನ ನಡೆದಿತ್ತು. ಕೊನೆಗೂ ಚೀಲನಹಳ್ಳಿ ಸಮೀಪ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ತಾಲ್ಲೂಕಿನಲ್ಲಿ 2012ನೇ ಸಮೀಕ್ಷೆ ಪ್ರಕಾರ ₹ 4.76 ಲಕ್ಷ ಕುರಿ ಮತ್ತು 54 ಸಾವಿರ ಮೇಕೆಗಳಿವೆ. ಇದರ ಪ್ರಮಾಣ ಈಗ ಇನ್ನು ಹೆಚ್ಚಾಗಿದೆ. ಜತೆಗೆ ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ನಗರ ಪ್ರದೇಶಕ್ಕೆ ಉದ್ಯೋಗಕ್ಕಾಗಿ ವಲಸೆ ಹೋಗಿದ್ದವರು ಗ್ರಾಮಗಳಿಗೆ ಮರಳಿದ್ದಾರೆ. ಇವರಲ್ಲಿ ಶೇ 23ರಷ್ಟು ಜನರು ಕುರಿ ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆಧುನಿಕ ವಧಾಗಾರದಲ್ಲಿ ನಿತ್ಯ 1,500ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳನ್ನು ವಧೆ ಮಾಡಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಮಾಂಸ ಮಾರಾಟ ಕೇಂದ್ರಗಳಿಗೆ ಉತ್ಕೃಷ್ಟವಾದ ಮಾಂಸ ಸರಬರಾಜು ಮಾಡಲು ಉದ್ದೇಶಿಸಲಾಗಿದೆ.

ಚರ್ಮ ಸಂಸ್ಕರಣೆ ಘಟಕ: ವಧಾಗಾರ ನಿರ್ಮಾಣವಾಗುತ್ತಿರುವುದರಿಂದ ಇಲ್ಲಿಯೇ ₹ 2 ಕೋಟಿ ವೆಚ್ಚದಲ್ಲಿ ಚರ್ಮ ಸಂಸ್ಕರಣಾ ಘಟಕ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಪ್ರಾರಂಭವಾಗುತ್ತಿರುವ ಮೊದಲ ಚರ್ಮ ಸಂಸ್ಕರಣ ಘಟಕ ಎನ್ನುವ ಹೆಗ್ಗಳಿಕೆ ಸಹ ಹೊಂದಿದೆ.

ಕಟ್ಟಡದ ಕಾಮಗಾರಿ ಶೇ 75ರಷ್ಟು ಮುಗಿದಿದ್ದು. ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇತ್ತೀಚೆಗೆ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಬೇಟಿ ನೀಡಿ ಕಾಮಗಾರಿ ವೀಕ್ಷಿಸಿ ವಧಾಗಾರದ ಕಾಮಗಾರಿಗೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ. ಕಟ್ಟಡದ ಕಾಮಗಾರಿ ಪೂರ್ಣಗೊಂಡ ನಂತರ ಯಂತ್ರೋಪಕರಣಗಳಿಗಾಗಿ ನಬಾರ್ಡ್‌ನಿಂದ ₹ 19 ಕೋಟಿ ಹಣ ಮಂಜೂರು ಮಾಡಿಸಿ ಕೊಡುವ ಭರವಸೆ ನೀಡಿದ್ದಾರೆ. ಇದು ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.

ತಾಲ್ಲೂಕಿನಲ್ಲಿ ಅತಿ ಹೆಚ್ಚು ಕುರಿಗಾಹಿಗಳಿವೆ. ಅವರು ಹಲವು ರೀತಿಯಲ್ಲಿ ಶೋಷಣೆ ಗುರಿ ಆಗುತ್ತಿದ್ದಾರೆ. ಸೂಕ್ತ ಮಾರುಕಟ್ಟೆ ಕಲ್ಪಿಸಲು ಆಧುನಿಕ ವಧಾಗಾರ ನಿರ್ಮಾಣಕ್ಕೆ ನಾನು ಸಚಿವನಾಗಿದ್ದಾಗ ನಿರ್ಣಯಿಸಲಾಗಿತ್ತು. ಇದು ಕುರಿಗಾಹಿಗಳ ಬದುಕಿನಲ್ಲಿ ಹೊಸ ತಿರುವು ನೀಡಿ ಮುಂದಿನ ದಿನಗಳಲ್ಲಿ ಹೆಚ್ಚು ಜನರು ಈ ಕಡೆ ಮುಖ ಮಾಡುವಂತೆ ಮಾಡುತ್ತದೆ

- ಟಿ.ಬಿ.ಜಯಚಂದ್ರ, ಮಾಜಿ ಸಚಿವರು

ಗೌಡಗೆರೆ ಹೋಬಳಿಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆದಾರ ರೈತ ಉತ್ಪಾದನೆ ಸಂಸ್ಥೆ ಪ್ರಾರಂಭಿಸಲಾಗುವುದು. ಮೂಲ ಬಂಡವಾಳ ನೀಡಿ ಕುರಿ ಮತ್ತು ಮೇಕೆಗಳನ್ನು ಸಾಕಾಣಿಕೆಗೆ ಅನುಕೂಲ ಮಾಡಿಕೊಡಲಾಗುವುದು. ನಂತರ ಕುರಿ ಮತ್ತು ಮೇಕೆಗಳನ್ನು ಖರೀದಿಸಲಾಗುವುದು. ಇದರಿಂದ ಕುರಿಗಾಹಿಗಳು ಆರ್ಥಿಕವಾಗಿ ಸದೃಢರಾಗಲು ಅನುಕೂಲವಾಗುವುದು.

- ಗೋ.ಮು.ನಾಗರಾಜು, ಉಪನಿರ್ದೇಶಕ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಬೆಂಗಳೂರು

ಅಂಕಿ ಅಂಶ

₹44.63 ಕೋಟಿ, ಅಂದಾಜು ವೆಚ್ಚ

₹23.53 ಕೋಟಿ, ಸಿವಿಲ್ ಕಾಮಗಾರಿಗೆ

₹21.10 ಕೋಟಿ, ಯಂತ್ರೋಪಕರಣ

₹25.23 ಕೋಟಿ, ನಬಾರ್ಡ ಸಾಲ

₹18.07 ಕೋಟಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT