ಬುಧವಾರ, ಆಗಸ್ಟ್ 4, 2021
20 °C
4ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಆರೋಪ

ಲಾಕ್‌ಡೌನ್‌ನಲ್ಲಿ ‘ಅಬಕಾರಿ’ ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲಾಕ್‌ಡೌನ್ ಅವಧಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಎಲ್ಲ ಇಲಾಖೆ ಅಧಿಕಾರಿಗಳು ನಮಗೆ ಇಷ್ಟು ನಷ್ಟವಾಗಿದೆ ಎಂದು ವರದಿ ನೀಡುತ್ತಿದ್ದಾರೆ. ಆದರೆ ಅಬಕಾರಿ ಅಧಿಕಾರಿಗಳು ಮಾತ್ರ ಸೋಂಪಾಗಿ ಇದ್ದೀರಾ ಎಂದು ಸೋಮವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅಬಕಾರಿ ಇಲಾಖೆ ಜಿಲ್ಲಾ ಉಪ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಲಾಕ್‌ಡೌನ್ ಪೂರ್ವದಲ್ಲಿ ಮದ್ಯದ ಅಂಗಡಿಗಳಲ್ಲಿ ಸರಕು ಇತ್ತು. ಅಂಗಡಿಗಳು ಮತ್ತೆ ಆರಂಭ ಆದಾಗ ಆ ಸರಕು ಖಾಲಿ ಆಗಿದೆ. ಹೀಗೆ ಅಕ್ರಮ ಎಸಗಿದ ಮದ್ಯದ ಅಂಗಡಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಈ ಅವ್ಯವಹಾರದಲ್ಲಿ ನೀವು ಸಹ ಭಾಗಿಯಾಗಿದ್ದೀರಾ ಎಂದು ಅಸಮಾಧಾನ ಹೊರಹಾಕಿದರು.

ಈ ನಡುವೆ ಉಪ ಆಯುಕ್ತರು, ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ, ಎಷ್ಟು ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ನೀಡಿದರು. 7 ಅಂಗಡಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದರು.

ಆಗ ಮಾಧುಸ್ವಾಮಿ, ‘ಕೆಲವು ಬಡವರು ಮದ್ಯ ವ್ಯಸನದ ಚಟಕ್ಕೆ ಗುರಿಯಾಗಿರುತ್ತಾರೆ. ಅಂತಹವರಿಗೆ ಹೆಚ್ಚು ಬೆಲೆಗೆ ಮದ್ಯ ಮಾರಾಟ ಮಾಡಲಾಗಿದೆ’ ಎಂದು ಸಿಡಿಮಿಡಿಗೊಂಡರು. ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ‘ತಹಶೀಲ್ದಾರ್ ನೇತೃತ್ವದಲ್ಲಿ ಜಂಟಿ ಪರಿಶೀಲನೆ ಸಹ ನಡೆಸಲಾಗಿದೆ’ ಎಂದರು.

‘ಲಾಕ್‌ಡೌನ್ ಪೂರ್ವದಲ್ಲಿ ಅಂಗಡಿಗಳಲ್ಲಿ ಇದ್ದ ಸ್ಟಾಕ್‌ ಹಾಗೂ ನಂತರ ಇದ್ದ ಸರಕಿನ ಬಗ್ಗೆ ತಾಲ್ಲೂಕುವಾರು ಮಾಹಿತಿ ನೀಡಬೇಕು. ಇದಕ್ಕಾಗಿಯೇ ಪ್ರತ್ಯೇಕವಾಗಿ ಸಭೆ ನಡೆಸುತ್ತೇನೆ’ ಎಂದು ಸಚಿವರು ಹೇಳಿದರು.

ಗ್ರಾಮೀಣ ಭಾಗಗಳಲ್ಲಿ ಕೆಲವರು ಸಗಟು ವ್ಯಾಪಾರಿಗಳಿಂದ ಮದ್ಯ ಖರೀದಿಸಿ ಮಾರಾಟ ಮಾಡುತ್ತಾರೆ. ನೀವು ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೀರಿ. ಇದರ ಜತೆಗೆ ಯಾರು ಆತನಿಗೆ ಮದ್ಯ ಮಾರಾಟ ಮಾಡಿರುತ್ತಾನೊ ಆ ಅಂಗಡಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.

ಬಗರ್ ಹುಕುಂ ಸಾಗುವಳಿ ಹಕ್ಕುಪತ್ರ ನೀಡುವ ವಿಚಾರದಲ್ಲಿ ಬೇಗ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಸಚಿವರು, ಶಿರಾ, ಪಾವಗಡದಲ್ಲಿ ಕಂದಾಯ ಅದಾಲತ್‌ಗಳು ಹೆಚ್ಚು ನಡೆದಿಲ್ಲ. ಏಕೆ ಮಾಡುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು‌. ಉಳಿದ ತಾಲ್ಲೂಕುಗಳಲ್ಲಿ ಎಷ್ಟು ಅದಾಲತ್‌ಗಳು ನಡೆದಿವೆ ಎನ್ನುವ ಬಗ್ಗೆ ಮಾಹಿತಿ ಪಡೆದರು.

ಜಿಲ್ಲೆಯ ಕೆಲವು ಕೆರೆಗಳಲ್ಲಿ ನೀರಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಎರಡು ತಿಂಗಳ ಕಾಲ ಮೀನುಗಳನ್ನು ಬಿಡುವ ಬಗ್ಗೆ ಆಲೋಚಿಸುವಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಗ ಶಾಸಕ ಮಸಾಲ ಜಯರಾಮ್, ‘ಕೆಲವು ಸಂಘಗಳು ಕೆರೆ ಗುತ್ತಿಗೆ ಪಡೆದಿವೆ. ಇಲ್ಲಿ ಮೀನುಗಾಣಿಕೆ ಮಾಡುತ್ತಿದ್ದು ಕೋಳಿ ತ್ಯಾಜ್ಯವನ್ನು ಮೀನಿಗೆ ಆಹಾರವಾಗಿ ನೀಡಲಾಗುತ್ತಿದೆ. ಇದು ಕೆರೆಗೆ ಆಪತ್ತು ತರಲಿದೆ’ ಎಂದರು. ಆಗ ಮಾಧುಸ್ವಾಮಿ, ಹೀಗೆ ಮಾಡುವವರ ಟೆಂಡರ್ ರದ್ದುಪಡಿಸಿ ಎಂದು ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ವಿಚಾರ ಪ್ರಸ್ತಾಪವಾದಾಗ, ಕಳೆದ ವರ್ಷ ಕ್ರಿಯಾಯೋಜನೆ ತಯಾರಿಸದೆ ಕೊಳವೆಬಾವಿ ತೆಗೆಸಲಾಗಿದೆ. ಕೊಳವೆಬಾವಿ ತೆಗೆದವರು ಬಿಲ್‌ಗಾಗಿ ಅಲೆಯುತ್ತಿದ್ದಾರೆ ಎಂದು ನೀರು ಪೂರೈಕೆಯಲ್ಲಿನ ಅಧ್ವಾನಗಳ ಬಗ್ಗೆ ತಿಳಿಸುತ್ತ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನವಾರುಗಳ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಎಂಜಿನಿಯರ್‌ಗಳನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಬೇಕು ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಅವರಿಗೆ ನಿರ್ದೇಶನ ನೀಡಿದರು.

ರೇಷ್ಮೆ, ರೈಲ್ವೆ ಯೋಜನೆಗಳು, ಗ್ರಾಮೀಣ ರಸ್ತೆ ಹೀಗೆ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಲೋಕ ದೋಷಗಳ ಬಗ್ಗೆ ಚರ್ಚಿಸಿದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು