ಕೊರಟಗೆರೆ: ತಾಲ್ಲೂಕಿನ ತಂಗನಹಳ್ಳಿ ಬಳಿ ಕಲ್ಲು ಗಣಿಗಾರಿಕೆ ಪ್ರಾರಂಭಿಸಲು ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದ್ದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ಕೋಳಾಲ ಹೋಬಳಿ ಎಲೆರಾಂಪುರ ಗ್ರಾ.ಪಂ ವ್ಯಾಪ್ತಿಯ ತಂಗನಹಳ್ಳಿ ಸರ್ವೇ ನಂ 32ರಲ್ಲಿ 6 ಎಕರೆ, ನೀಲಗೊಂಡನಹಳ್ಳಿ ಗ್ರಾ.ಪಂ ಮಣ್ಣೂರು ತಿಮ್ಮನಹಳ್ಳಿ ಸರ್ವೆ ನಂ 4ರಲ್ಲಿ 40 ಎಕರೆ ಸರ್ಕಾರಿ ಗೋಮಾಳ ಇದೆ. ಇದನ್ನು ಬೆಂಗಳೂರು, ಬಳ್ಳಾರಿ ಮೂಲದ ವ್ಯಕ್ತಿಗೆ 25 ವರ್ಷದ ಅವಧಿಗೆ 3 ವರ್ಷದ ಹಿಂದೆಯೇ ಗುತ್ತಿಗೆ ನೀಡಿದ್ದು, ಗೋಮಾಳ ಕಬಳಿಸಲು ಹುನ್ನಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗಣಿಗಾರಿಕೆ ಆರಂಭಿಸದಂತೆ ರೈತರು, ಪರಿಸರ ಪ್ರೇಮಿಗಳು ಹಲವು ಬಾರಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗಣಿಗಾರಿಕೆ ಪ್ರಾರಂಭಿಸಲು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ವರ್ಗವೇ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದೆ ಎಂದು ದೂರಿದರು.
ಕೋಳಾಲ ಕಂದಾಯ ತನಿಖಾಧಿಕಾರಿ ಅರುಣ್‌ಕುಮಾರ್ ಗಣಿಗಾರಿಕೆ ಮಾಲೀಕರ ಜತೆ ಶಾಮೀಲಾಗಿದ್ದಾರೆ. ರೈತರಿಗೆ ಕನ್ನಡದಲ್ಲಿ ಸಹಿ ಮಾಡಲು ಬರುವುದಿಲ್ಲ. ಪತ್ರದಲ್ಲಿನ 15 ಸಹಿಗಳು ಇಂಗ್ಲಿಷ್‍ನಲ್ಲಿವೆ. ಗೋಮಾಳದ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರ ಹೆಸರನ್ನೇ ಮರೆಮಾಚಿದ್ದಾರೆ. ಕಂದಾಯ ತನಿಖಾಧಿಕಾರಿ ವಿರುದ್ಧ ತನಿಖೆ ನಡೆಸಿ ಅಮಾನತುಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಂಗನಹಳ್ಳಿ, ಐ.ಕೆ.ಕಾಲೊನಿ ನಡುವಿನ ಬೆಟ್ಟದಲ್ಲಿ ಎತ್ತಿನ ಹೊಳೆ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದೆ. ಪೈಪ್‍ಲೈನ್‍ನ ಎರಡು ಭಾಗದಲ್ಲಿ ಗಣಿಗಾರಿಕೆ ನಡೆಸಲು ದಾರಿ ಗುರುತಿಸುವುದಕ್ಕಾಗಿ ಮಧುಗಿರಿ ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಣಿಗಾರಿಕೆ ಆರಂಭಿಸಿದರೆ ಕಾಮಗಾರಿಗೆ ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
‘ಪ್ರವಾಸಿ ತಾಣ ದೇವರಾಯನದುರ್ಗಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಗಣಿಗಾರಿಕೆಗೆ ಮುಂದಾಗಿದ್ದಾರೆ. ಇದನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದು’ ಎಂದು ಎಲೆರಾಂಪುರ ಗ್ರಾ.ಪಂ ಸದಸ್ಯ ಸರ್ವೇಶ್, ಮುಖಂಡ ತಿಮ್ಮರಾಜು ಎಚ್ಚರಿಸಿದರು.
‘ಗಣಿಗಾರಿಕೆ ಪರ ಮತ್ತು ವಿರೋಧದ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು. ತಂಗನಹಳ್ಳಿ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ದಾರಿಯ ಸ್ಥಳ ಪರಿಶೀಲನೆ ನಡೆದಿದೆ. ಗಣಿಗಾರಿಕೆ ನಡೆಸದಂತೆ ಸ್ಥಳೀಯರು ಮನವಿ ಮಾಡಿದ್ದಾರೆ’ ಎಂದು ಮಧುಗಿರಿ ಉಪವಿಭಾಗಾಧಿಕಾರಿ ರಿಷಿ ಆನಂದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.