ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ | ಸೌಕರ್ಯ ಕಲ್ಪಿಸದ ಗುತ್ತಿಗೆದಾರರು

ಸುರಕ್ಷಾ ಕ್ರಮಗಳಿಲ್ಲದೆ ದುಡಿಯುತ್ತಿದ್ದಾರೆ ಹೊರ ರಾಜ್ಯಗಳ ಕಾರ್ಮಿಕರು
Last Updated 10 ಮೇ 2020, 20:15 IST
ಅಕ್ಷರ ಗಾತ್ರ

ಪಾವಗಡ: ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಗುತ್ತಿಗೆದಾರರು ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತಂದಿದ್ದಾರೆ. ಆದರೆ ಕೊರೊನಾ ಸೋಂಕು ಹರಡುತ್ತಿರುವ ಈ ದಿನಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ.

ತಾಲ್ಲೂಕಿನ ಪಳವಳ್ಳಿ, ಗಂಗಸಾಗರ, ಚಿಕ್ಕಹಳ್ಳಿ ಬಳಿ ವಿವಿಧ ಇಲಾಖೆಗಳ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಕಾರ್ಯಕ್ಕೆ ಆಂಧ್ರಪ್ರದೇಶ, ನೇಪಾಳ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಬಿಹಾರ ಸೇರಿದಂತೆ ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರನ್ನು ಕರೆತರಲಾಗಿದೆ.

ಕಾರ್ಮಿಕರನ್ನು ಅಗತ್ಯಕ್ಕೆ ತಕ್ಕಂತೆ ಪಳವಳ್ಳಿ, ಚಿಕ್ಕಹಳ್ಳಿ, ಗಂಗಸಾಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇವರನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಕರೆದೊಯ್ಯುವಾಗಲೂ ಅಂತರ ಕಾಯ್ದುಕೊಳ್ಳುತ್ತಿಲ್ಲ.

ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಕೊಡದೆ, ಸರ್ಕಾರದ ನಿಯಮಾವಳಿಗಳನ್ನು ಗುತ್ತಿಗೆದಾರರು ಗಾಳಿಗೆ ತೂರಿದ್ದಾರೆ. ತಗಡಿನ ಶೀಟ್‌ಗಳನ್ನು ಕಟ್ಟಿಕೊಂಡು ಕಿರಿದಾದ ಸ್ಥಳದಲ್ಲಿ ಮೂರರಿಂದ ನಾಲ್ಕು ಮಂದಿ ವಾಸಿಸುತ್ತಿದ್ದಾರೆ. ಈ ಸ್ಥಳದಲ್ಲಿಯೇ ಶೌಚಾಲಯವೂ ಇದೆ. ಸುತ್ತಲೂ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಕೊರೊನಾ ಹರಡುತ್ತಿದ್ದರೂ, ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಗುತ್ತಿಗೆದಾರರು ಕನಿಷ್ಠ ಸೌಲಭ್ಯಗಳನ್ನೂ ಕಲ್ಪಿಸಿಲ್ಲ.

ಇತ್ತೀಚೆಗೆ ಆಂಧ್ರದ ಗುಂಟೂರಿನಿಂದ ಪಳವಳ್ಳಿ ಅಂಬೇಡ್ಕರ್ ವಸತಿ ನಿಲಯ ಕಟ್ಟಡದ ಬಳಿ ಕೆಲ ಕಾರ್ಮಿಕರು ಬಂದಿದ್ದಾರೆ. ಅವರು ಬಂದ ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿಲ್ಲ. ಸ್ಥಳೀಯರು ಮಾಹಿತಿ ನೀಡಿದ ನಂತರ ಆರೋಗ್ಯ ಇಲಾಖೆ ಪರೀಕ್ಷೆಗೆ ಒಳಪಡಿಸಿದ್ದಾರೆ.

ಹೊರ ರಾಜ್ಯಗಳಿಂದ ಬಂದವರ ಆರೋಗ್ಯ ಪರೀಕ್ಷೆ ಮಾಡಿಸಬೇಕು. ಆರೋಗ್ಯ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಆದರೆ ಯಾವುದೇ ಪರೀಕ್ಷೆಯನ್ನೂ ಗುತ್ತಿಗೆದಾರರು ಮಾಡಿಸುತ್ತಿಲ್ಲ. ಕಾರ್ಮಿಕರ ವಿಳಾಸವನ್ನೂ ಪಡೆದಿಲ್ಲ ಎನ್ನುವ ದೂರುಗಳಿವೆ.

ಲಾಕ್‌ಡೌನ್ ಘೋಷಣೆಯಾದಾಗ ಕಾರ್ಮಿಕರನ್ನು ಪಳವಳ್ಳಿ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಳಿ ಬಿಟ್ಟು ಗುತ್ತಿಗೆದಾರರು ತೆರಳಿದ್ದರು. ‌ಊಟ ಇಲ್ಲದೆ ಕಾರ್ಮಿಕರು ಪರದಾಡುತ್ತಿದ್ದಾಗ ಗ್ರಾಮಸ್ಥರು, ತಾಲ್ಲೂಕು ಆಡಳಿತ ನೆರವು ನೀಡಿತ್ತು.

ಆಗಾಗ ಸ್ವಂತ ಊರುಗಳಿಗೆ ಹೋಗಿ ಬರುವವರ ಮಾಹಿತಿ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆಗೆ ಸಿಗುತ್ತಿಲ್ಲ. ಇವರ ಈ ನಿರ್ಲಕ್ಷ್ಯ ಧೋರಣೆ ಗ್ರಾಮಸ್ಥರ ಆತಂಕ ಹೆಚ್ಚಿಸಿದೆ.

*
ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿತ್ತು. ಗುತ್ತಿಗೆದಾರರು ಕಾರ್ಮಿಕರಿಗೆ ಸೌಕರ್ಯ ಕಲ್ಪಿಸಬೇಕು. ಹೊಸದಾಗಿ ಬಂದಿರುವರ ಬಗ್ಗೆ ಪರಿಶೀಲಿಸಲಾಗುವುದು.
-ವರದರಾಜು, ತಹಶೀಲ್ದಾರ್, ಪಾವಗಡ.

*
ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಆಂಧ್ರದ ಗುಂಟೂರಿನಿಂದ ಸಿಬ್ಬಂದಿ ಬಂದಿದ್ದಾರೆ. ಆದರೆ ಈವರೆಗೆ ಅವರನ್ನು ಪರೀಕ್ಷೆಗೆ ಒಳಪಡಿಸಿಲ್ಲ. ಇಲ್ಲಿನ ಕಾರ್ಮಿಕರಿಗೆ ಮಾಸ್ಕ್‌, ಸ್ಯಾನಿಟೈಸರ್‌ ನೀಡಿಲ್ಲ.
-ಮಾ.ನಂ ಶಶಿಕಿರಣ್‌, ಅಧ್ಯಕ್ಷರು, ಹೆಲ್ಪ ಸೊಸೈಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT