ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಲಪ್ಪಗೆ ಕುಂಚಿಟಿಗರ ಬೆಂಬಲ

Published 5 ಮಾರ್ಚ್ 2024, 4:26 IST
Last Updated 5 ಮಾರ್ಚ್ 2024, 4:26 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ್‌ ಹಾಲಪ್ಪ ನಗರದಲ್ಲಿ ಭಾನುವಾರ ಕುಂಚಿಟಿಗ ಒಕ್ಕಲಿಗ ಸಮುದಾಯದ ಬೆಂಬಲ ಗಿಟ್ಟಿಸುವ ಕೆಲಸ ಮಾಡಿದರು.

ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್‌ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಸಮುದಾಯದ ಮುಂದಿನ ರಾಜಕೀಯ ನಾಯಕತ್ವದ ಕುರಿತು ಚರ್ಚೆ ನಡೆಯಿತು. ಮುಂದಿನ ಚುನಾವಣೆಯಲ್ಲಿ ಸಮುದಾಯದ ನಾಯಕರಿಗೆ ಬೆಂಬಲ ಸೂಚಿಸಿ, ಶಕ್ತಿ ತುಂಬಬೇಕು ಎಂಬ ನಿರ್ಣಯ ಕೈಗೊಂಡರು.

‘ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಕುಂಚಿಟಿಗ ನಾಯಕರಿಗೆ ಸೂಕ್ತ ಸ್ಥಾನಮಾನ, ಅವಕಾಶಗಳು ಕೈ ತಪ್ಪುತ್ತಿವೆ. ಸಮುದಾಯದಲ್ಲಿನ ಸಂಘಟನಾ ಕೊರತೆಯಿಂದ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ. ಸಮುದಾಯ ಎಚ್ಚೆತ್ತುಕೊಳ್ಳಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಮುರಳೀಧರ ಹಾಲಪ್ಪ ಎಲ್ಲ ವರ್ಗದವರ ಜತೆ ಬೆರೆತು, ಎಲ್ಲರ ವಿಶ್ವಾಸ ಗಳಿಸುತ್ತಿದ್ದಾರೆ. ಕುಂಚಿಟಿಗ ಸಮುದಾಯ ಅವರಿಗೆ ಶಕ್ತಿ ತುಂಬಬೇಕು’ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮುದಾಯದ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ತರಬೇಕು. ಸಮುದಾಯವನ್ನು ನಿರ್ಲಕ್ಷ್ಯಿಸಿದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

‘ಸಮುದಾಯದ ಧ್ವನಿಯಾಗಿ ಮುಖಂಡರು ಸ್ಪಂದಿಸಬೇಕು. ಉನ್ನತ ಹುದ್ದೆಯಲ್ಲಿರುವ ಕುಂಚಿಟಿಗ ಅಧಿಕಾರಿಗಳು ಸಮುದಾಯದ ಬಡ, ಆಸಕ್ತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು, ಮಾರ್ಗದರ್ಶನ ನೀಡಿ ಸಹಕರಿಸಬೇಕು’ ಎಂದು ಮುರಳೀಧರ ಹಾಲಪ್ಪ ಮನವಿ ಮಾಡಿದರು.

ಕುಂಚಿಟಿಗ ಒಕ್ಕಲಿಗರ ಮುಖಂಡರಾದ ಲಿಂಗಣ್ಣ, ದೊಡ್ಡಲಿಂಗಪ್ಪ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT