ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ | ಆಕರ್ಷಣೆ ಕಳೆದುಕೊಂಡ ಮಾಲಿಮರಿಯಪ್ಪ ರಂಗಮಂದಿರ

ನಿರ್ವಹಣೆ ಹೊಣೆ ಹೊತ್ತ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಕಲಾವಿದರಿಗಿಲ್ಲ ಪ್ರೋತ್ಸಾಹ
Published 7 ಆಗಸ್ಟ್ 2023, 7:27 IST
Last Updated 7 ಆಗಸ್ಟ್ 2023, 7:27 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನಲ್ಲಿಯೇ ಸಭೆ, ಸಮಾರಂಭ, ರಂಗಚಟುವಟಿಕೆಗಳಿಗೆ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರ ಕಳೆದ ಐದು ವರ್ಷಗಳಿಂದ ಯಾವುದೇ ಸಮಾರಂಭ ನಡೆಯದ ಕಾರಣ ಆಕರ್ಷಣೆಯನ್ನು ಕಳೆದುಕೊಂಡಿದೆ. ರಂಗ ಚಟುವಟಿಕೆಗಳಿಗೆ ಆದ್ಯತೆ ಇಲ್ಲದೆ, ಕಲಾವಿದರಿಗೂ ಪ್ರೋತ್ಸಾಹ ಇಲ್ಲದಂತಾಗಿದೆ.

ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಆಕರ್ಷಕ ವೇದಿಕೆ ಇದೆ. ವೇದಿಕೆಯ ಎಡ ಮತ್ತು ಬಲ ಭಾಗದಲ್ಲಿ ಎರಡು ಕೊಠಡಿಗಳಿವೆ. ಮೇಲ್ಭಾಗದಲ್ಲಿ ಮತ್ತೆರಡು ಕೊಠಡಿಗಳೂ ಇವೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ಕಿಟಕಿ ಮತ್ತು ಬಾಗಿಲು ಮುರಿದು ಹೋಗಿವೆ. ರಂಗಮಂದಿರದ ಚಾವಣಿಯ ಮೆಟ್ಟಿಲು ಮತ್ತು ಗೋಡೆ ಶಿಥಿಲಗೊಂಡು ಕುಸಿಯುವ ಹಂತ ತಲುಪಿವೆ.

ಈ ರಂಗಮಮದಿರ ಸುಣ್ಣ- ಬಣ್ಣ ಕಂಡು ಅದೆಷ್ಟೊ ವರ್ಷ ಕಳೆದಿವೆ. ಪುರಸಭೆ ಆವರಣದಲ್ಲಿಯೇ ರಂಗಮಂದಿರ ಇದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸದ ಕಾರಣ ಕಲಾವಿದರೂ ರಂಗಮಂದಿರದಿಂದ ದೂರ ಉಳಿದಿದ್ದಾರೆ.

ಈ ರಂಗಮಂದಿರದ ಕೊಠಡಿ ಹಾಗೂ ವೇದಿಕೆಯಲ್ಲಿ ಅನುಪಯುಕ್ತ ವಸ್ತುಗಳನ್ನು ಪುರಸಭೆ ಅಧಿಕಾರಿಗಳು ತುಂಬಿರುವುದರಿಂದ ನೂರಾರು ಕಲಾವಿದರಿಗೆ ಆಸರೆಯಾಗಬೇಕಿದ್ದ ರಂಗಮಂದಿರ ಉಪಯೋಗಕ್ಕಿಲ್ಲದಂತಾಗಿದ್ದು, ಕಲಾವಿದರಿಗೆ ವೇದಿಕೆಯೇ ಇಲ್ಲವಾಗಿದೆ ಎನ್ನುವುದು ಸ್ಥಳೀಯರ ಬೇಸರ.

ಈ ಹಿಂದೆ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಸಾವಿರಾರು ನಾಟಕ, ನೃತ್ಯ, ಸಂಗೀತ, ಶಾಲಾ ವಾರ್ಷಿಕೋತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜಕೀಯ ಹಾಗೂ ಹಲವು ಸಭೆ ಮತ್ತು ಸಮಾರಂಭಗಳಿಗೆ ವೇದಿಕೆಯಾಗಿತ್ತು. ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ಸಾರ್ವಜನಿಕರಿಗೆ ಹಾಗೂ ಕಲಾವಿದರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ ದಿನ ಕಳೆದಂತೆ ರಂಗಮಂದಿರದಲ್ಲಿದ್ದ ಸೌಕರ್ಯ ಮಾಯವಾಗಿ, ಕಟ್ಟಡ ಶಿಥಿಲಗೊಂಡು ಅದರ ಮೂಲ ಸ್ವರೂಪವೇ ಬದಲಾಯಿತು. ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ನಡೆಯುವುದೇ ಅಪರೂಪವಾಗಿದೆ.

ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ನಾಟಕ ಮಂಡಳಿಯವರು ಬಂದು ರಂಗಮಂದಿರದಲ್ಲಿ ವಾರಗಟ್ಟಲೇ ಉಳಿದುಕೊಂಡು ಪೌರಾಣಿಕ, ಸಾಮಾಜಿಕ ನಾಟಕ, ಹಾಡುಗಾರಿಕೆ, ಹಾಸ್ಯ ಸಂಜೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಿದ್ದರು. ಆದರೆ ರಂಗಮಂದಿರದಲ್ಲಿ ಮೂಲ ಸೌಕರ್ಯ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಕಲಾವಿದರು ರಂಗಮಂದಿರದಿಂದ ದೂರ ಉಳಿದಿದ್ದಾರೆ.

ಕಳೆದ ಐದು ವರ್ಷದಲ್ಲಿ ಈ ರಂಗಮಂದಿರದಲ್ಲಿ ಕಾರ್ಯಕ್ರಮಗಳು ಕಡಿಮೆಯಾಗಿ ರಂಗ ಮಂದಿರ ಕಸದ ಗೂಡಾಗಿ ಮಾರ್ಪಟ್ಟಿದೆ. ಇದರ ನಿರ್ವಹಣೆಯನ್ನು ವಹಿಸಿಕೊಂಡಿರುವ ಪುರಸಭೆ ಅಧಿಕಾರಿಗಳು ಕೂಡ ಅನುಪಯುಕ್ತ ವಸ್ತುಗಳನ್ನು ಹಾಕುವ ಮೂಲಕ ರಂಗ ಮಂದಿರ ಮತ್ತಷ್ಟು ಶಿಥಿಲವಾಗಲು ಕಾರಣವಾಗಿದ್ದಾರೆ.

ಪುರಸಭೆ ಆವರಣದಲ್ಲಿರುವ ಮಾಲಿ ಮರಿಯಪ್ಪ ರಂಗಮಂದಿರವನ್ನು ಸರಿಯಾಗಿ ನಿರ್ವಹಣೆ ಮಾಡದವರು ಪಟ್ಟಣವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ ಎನ್ನುವುದು ಕಲಾವಿದರು ಹಾಗೂ ಸಾರ್ವಜನಿಕರ ಪ್ರಶ್ನೆ.

ರಂಗಮಂದಿರಕ್ಕೆ ಸಮರ್ಪಕ ನೀರಿನ ವ್ಯವಸ್ಥೆ, ಬೆಳಕು ಮತ್ತು ಧ್ವನಿವರ್ಧಕ, ಅಂಕ ಪರದೆ, ಸೈಡ್ ವೀಂಗ್ಸ್, ಆಸನ ವ್ಯವಸ್ಥೆ, ಶೌಚಾಲಯ ಹಾಗೂ ಶಿಥಿಲಿಗೊಂಡಿರುವ ಕಟ್ಟಡ ದುರಸ್ತಿ ಕೈಗೊಂಡು, ನಿರ್ವಹಣೆಗೆ ಒಬ್ಬ ಸಿಬ್ಬಂದಿ ನೇಮಿಸಿದರೆ, ಕಲಾವಿದರು ಹಾಗೂ ಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕನ್ನಡ ಭವನ ನಿರ್ಮಾಣಕ್ಕೆ ಸಹಕಾರ ನೀಡಿದಂತೆ ಸಚಿವ ಕೆ.ಎನ್.ರಾಜಣ್ಣ ಅವರು ಈ ಮಾಲಿ ಮರಿಯಪ್ಪ ರಂಗಮಂದಿರದ ಅಭಿವೃದ್ಧಿಗೆ ಗಮನಹರಿಸಬೇಕು ಎನ್ನುವುದು ಕಲಾವಿದರ ಒತ್ತಾಸೆ.

ಮಧುಗಿರಿ ಪುರಸಭೆ ಆವರಣದಲ್ಲಿನ ಮಾಲಿಮರಿಯಪ್ಪ ರಂಗಮಂದಿರ
ಮಧುಗಿರಿ ಪುರಸಭೆ ಆವರಣದಲ್ಲಿನ ಮಾಲಿಮರಿಯಪ್ಪ ರಂಗಮಂದಿರ
ಮಾಲಿಮರಿಯಪ್ಪ ರಂಗಮಂದಿರದಲ್ಲಿ ಕಸ ಸಂಗ್ರಹ
ಮಾಲಿಮರಿಯಪ್ಪ ರಂಗಮಂದಿರದಲ್ಲಿ ಕಸ ಸಂಗ್ರಹ
ಪ.ವಿ.ಸುಬ್ರಹ್ಮಣ್ಯ
ಪ.ವಿ.ಸುಬ್ರಹ್ಮಣ್ಯ
ವೀರಣ್ಣ
ವೀರಣ್ಣ
ಎ.ರಾಮಚಂದ್ರಪ್ಪ
ಎ.ರಾಮಚಂದ್ರಪ್ಪ
ಪ್ರಕಾಶ್
ಪ್ರಕಾಶ್

Cut-off box - ಈ ರಂಗಮಂದಿರದಲ್ಲಿ ಸಾವಿರಾರು ನಾಟಕ ನೃತ್ಯ ಸಂಗೀತ ಶಾಲಾ ವಾರ್ಷಿಕೋತ್ಸವ ನಡೆಯುತ್ತಿದ್ದವು. ಐದಾರು ವರ್ಷಗಳಿಂದ ರಂಗಮಮದಿರದಲ್ಲಿ ಕಾರ್ಯಕ್ರಮಗಳು ಕಡಿಮೆಯಾಗಿದೆ. ರಂಗಮಂದಿರವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಪ.ವಿ.ಸುಬ್ರಹ್ಮಣ್ಯ ಕಸಾಪ ಮಾಜಿ ಅಧ್ಯಕ್ಷ ಈ ರಂಗಮಂದಿರದಲ್ಲಿ ಅನೇಕ ಕಾರ್ಯಕ್ರಮ ನಡಯುತ್ತಿದ್ದವು. ಹಲವು ನಾಟಕಗಳನ್ನು ಇಲ್ಲಿ ಪ್ರದರ್ಶಿಸಿದ್ದೇನೆ. ಆದರೆ ರಂಗಮಂದಿರದಲ್ಲಿ ಮೂಲ ಸೌಕರ್ಯ ಇಲ್ಲದೆ ಸೊರಗುತ್ತಿದೆ. ಸಚಿವ ರಾಜಣ್ಣ ರಂಗಮಂದಿರದ ಅಭಿವೃದ್ಧಿಗೆ ಒತ್ತು ನೀಡಬೇಕು. ವೀರಣ್ಣ ರಂಗಭೂಮಿ ಕಲಾವಿದ ಸಿದ್ಧಾಪುರ ಪಟ್ಟಣದಲ್ಲಿ ಸಭೆ ಸಮಾರಂಭಗಳಿಗೆ ಹಾಗೂ ಕಲಾವಿದರಿಗೆ ಉತ್ತಮ ವೇದಿಕೆ ಇಲ್ಲದಂತಾಗಿದೆ. ಈ ರಂಗಮಂದಿರದಲ್ಲಿ ಅನೇಕ ಕಾರ್ಯಕ್ರಮ ಹಾಗೂ ನಾಟಕದ ಅಭ್ಯಾಸ ನಡೆಯುತ್ತಿದ್ದವು. ಆದರೆ ಸಮರ್ಪಕ ನಿರ್ವಹಣೆ ಇಲ್ಲದೇ ರಂಗ ಮಂದಿರ ಹಾಳಾಗುತ್ತಿದೆ. ಇದನ್ನು ಕಲಾವಿದರಿಗೆ ಉಳಿಸಿಕೊಡಬೇಕು. ಎ.ರಾಮಚಂದ್ರಪ್ಪ ಕಸಾಪ ಉಪಾಧ್ಯಕ್ಷ ಈ ರಂಗಮಂದಿರಕ್ಕೆ ಸುಸಜ್ವಿತ ವ್ಯವಸ್ಥೆ ಕಲ್ಪಿಸಿದರೆ ಶಾಲಾ ವಾರ್ಷಿಕೋತ್ಸವ ಹಾಗೂ ಹಲವು ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ. ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.  ಪ್ರಕಾಶ್ ರಂಗಭೂಮಿ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT