ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ನಿರೀಕ್ಷಿತ ವ್ಯವಹಾರ ಕಾಣದ ಪುಷ್ಪ ಹರಾಜು ಮಾರುಕಟ್ಟೆ

ಚಿಕ್ಕನಹಳ್ಳಿ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರ: ಎಲ್ಲ ಸೌಕರ್ಯವಿದ್ದರೂ ರೈತರ ನಿರಾಸಕ್ತಿ
Published 11 ಡಿಸೆಂಬರ್ 2023, 7:29 IST
Last Updated 11 ಡಿಸೆಂಬರ್ 2023, 7:29 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಹೂವು ಬೆಳೆಗಾರರು ಮತ್ತು ಪುಷ್ಪ ಉದ್ಯಮಕ್ಕೆ ಅನುಕೂಲ ಮಾಡಿಕೊಡಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರ’ ಎರಡು ವರ್ಷದಿಂದ ಕಾರ್ಯಾರಂಭ ಮಾಡಿದ್ದರೂ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ರಾಜ್ಯದಲ್ಲಿ 2009-10ನೇ ಸಾಲಿನಲ್ಲಿ ಬೆಳಗಾವಿ, ದಾವಣಗೆರೆ, ಉಡುಪಿ ಮತ್ತು ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಸರ್ಕಾರ ಪುಷ್ಪ ಹರಾಜ ಮಾರುಕಟ್ಟೆ ಪ್ರಾರಂಭಿಸಿದ್ದು ಇದರಲ್ಲಿ ಉಡುಪಿ ಹೊರತುಪಡಿಸಿ ಮೂರು ಕಡೆ ಹೂವಿನ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿವೆ.

ಕಳ್ಳಂಬೆಳ್ಳ ಹೋಬಳಿ ಸುತ್ತಲಿನ ಕಡವಿಗೆರೆ, ಕಾರ್ಪೇಹಳ್ಳಿ, ದೇವರಹಳ್ಳಿ, ಚಿಕ್ಕನಹಳ್ಳಿ, ಹಾಲೇನಹಳ್ಳಿ, ಬಾಲೇನಹಳ್ಳಿ, ಉದ್ದಯ್ಯನ ಪಾಳ್ಯ, ಕಸಬಾ ಹೋಬಳಿಯ ಹೆಗ್ಗನಹಳ್ಳಿ, ಎಮ್ಮೆರಹಳ್ಳಿ, ಚಿಕ್ಕಗೂಳ, ರತ್ನಸಂದ್ರ, ಕೊಟ್ಟ ಹಾಗೂ ಬುಕ್ಕಾಪಟ್ಟಣ ಹೋಬಳಿಯ ಕಂಬದಹಳ್ಳಿ, ಹೊನ್ನೇನಹಳ್ಳಿ, ಹುಯಿಲ್‌ದೊರೆ, ಕಿಲಾರದಹಳ್ಳಿ, ನಿಂಬೆಮರದಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ 1,200 ಹೆಕ್ಟೇರ್‌ನಲ್ಲಿ ಸಾವಿರಕ್ಕೂ ಹೆಚ್ಚು ರೈತರು ಎರಡು ದಶಕಗಳಿಂದ ಸೇವಂತಿಗೆ, ಕಾಕಡ, ಕನಕಾಂಬರ, ಮಲ್ಲಿಗೆ ಮತ್ತು ಚೆಂಡುಹೂವು ಬೆಳೆಯುತ್ತಿದ್ದಾರೆ. ಈ ಹೂವುಗಳಿಗೆ ನಿಯಮಿತ ಮಾರುಕಟ್ಟೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದರು.

ಮಾರುಕಟ್ಟೆ ಪ್ರಾರಂಭವಾದರೆ ಶಿರಾ ತಾಲ್ಲೂಕಿನ ಪುಷ್ಪ ಉದ್ಯಮದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳು ಆಗುತ್ತವೆ ಎನ್ನುವ ನಿರೀಕ್ಷೆಯಿಂದ ಅಂದು ಶಾಸಕರಾಗಿದ್ದ ಟಿ.ಬಿ.ಜಯಚಂದ್ರ ಸರ್ಕಾರದ ಮೇಲೆ ಒತ್ತಡ ತಂದು ಚಿಕ್ಕನಹಳ್ಳಿಯಲ್ಲಿ ಮಾರುಕಟ್ಟೆ ಮಂಜೂರು ಮಾಡಿಸಿ 2012ರಲ್ಲಿ ಉದ್ಘಾಟನೆ‌ ಮಾಡಿಸಿದ್ದರು. ಆದರೆ ರೈತರ ಸಹಕಾರವಿಲ್ಲದ ಕಾರಣ ಎಂಟು ವರ್ಷ ಮಾರುಕಟ್ಟೆ ಕಾರ್ಯಾರಂಭವನ್ನೇ ಮಾಡಿರಲಿಲ್ಲ.

ಮಾರುಕಟ್ಟೆಯನ್ನು ಎರಡು ವರ್ಷ ಶಿರಾ ಎಪಿಎಂಸಿಗೆ ನೀಡಲಾಗಿತ್ತು. ಅಂದು ಅಧ್ಯಕ್ಷರಾಗಿದ್ದ ಎಂ.ಆರ್.ಶಶಿಧರ್ ಗೌಡ ಅವರು ಹೂವು ಬೆಳೆಗಾರರ ಮನವೊಲಿಸಿ ಮಾರುಕಟ್ಟೆಗೆ ಕರೆತರುವ ಕೆಲಸ ಮಾಡಿದ್ದರು. ಶಿರಾದಲ್ಲಿ ನಡೆಯುವ ಹೂವಿನ ಮಾರುಕಟ್ಟೆಯನ್ನು ಅಲ್ಲಿಗೆ ವರ್ಗಾವಣೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ ಅವರ ಅವಧಿ ಮುಗಿದ ನಂತರ ಈ ಪ್ರಕ್ರಿಯೆಗೆ ಚಾಲನೆ ದೊರೆಯದೆ ಮಾರುಕಟ್ಟೆ ಸ್ಥಗಿತಗೊಂಡಿತು.

ಬಾರದ ರೈತರು: ಸರ್ಕಾರ ಚಿಕ್ಕನಹಳ್ಳಿಯಲ್ಲಿ ಮೂಲ ಸೌಕರ್ಯ ಹೊಂದಿರುವ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಿಸಿದರೂ ಹೂವು ಬೆಳೆಗಾರರು ಮಾರುಕಟ್ಟೆಗೆ ಬರದೆ, ಯಾವುದೇ ಸೌಕರ್ಯಗಳಿಲ್ಲದ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ನಡೆಯುವ ಹೂವಿನ ಮಾರುಕಟ್ಟೆಗೆ ಬಹುತೇಕರು ಹೋಗುತ್ತಿದ್ದಾರೆ.

ಹೂವಿನ ಬೆಳೆಗಾರರಿಗೆ ವ್ಯಾಪಾರಿಗಳು ಮೊದಲೇ ಹಣ ನೀಡಿರುವುದರಿಂದ ಅವರು ಹೇಳಿದ ಕಡೆ ಹೂವು ತೆಗೆದುಕೊಂಡು ಹೋಗುತ್ತಾರೆ. ಒಂದು ರೀತಿಯಲ್ಲಿ ಪುಷ್ಪ ಉದ್ಯಮ ಮಧ್ಯವರ್ತಿಗಳ ಕೈಯಲ್ಲಿದೆ. ಇದನ್ನು ಸರಿದಾರಿಗೆ ತರಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ಆಳ, ಅಗಲ ಬಲ್ಲವರು.

ಸುಮಾರು ಎಂಟು ವರ್ಷ ವ್ಯವಹಾರವಿಲ್ಲದೆ ಸ್ಥಗಿತಗೊಂಡಿದ್ದ ಮಾರುಟ್ಟೆಗೆ 2020ರಲ್ಲಿ ಸಹಾಯಕ ನಿರ್ದೇಶಕರಾಗಿ ಬಂದ ಆರ್.ನಾಗರಾಜು ಅವರು ಹೂವು ಬೆಳೆಗಾರರ ಮನವೊಲಿಸಿ 2021ರಲ್ಲಿ ಮತ್ತೆ ಮಾರುಕಟ್ಟೆಯನ್ನು ಹೊಸದಾಗಿ ಉದ್ಘಾಟನೆ ಮಾಡುವ ಮೂಲಕ ಹೊಸ ರೂಪ ನೀಡಿದ್ದು, ಎರಡು ವರ್ಷಗಳಿಂದ ಮಾರುಕಟ್ಟೆ ನಡೆಯುವಂತಾಗಿದೆ.

ಚಿಕ್ಕನಹಳ್ಳಿ ಮಾರುಕಟ್ಟೆಗೆ ಬಂದಿರುವ ಚೆಂಡು ಹೂವು
ಚಿಕ್ಕನಹಳ್ಳಿ ಮಾರುಕಟ್ಟೆಗೆ ಬಂದಿರುವ ಚೆಂಡು ಹೂವು

ಶಿರಾದಲ್ಲಿ ನಡೆಯುವ ಹೂವಿನ ಮಾರುಕಟ್ಟೆಯನ್ನು ಚಿಕ್ಕನಹಳ್ಳಿಗೆ ಸ್ಥಳಾಂತರ ಮಾಡಿದರೆ ಮಾರುಕಟ್ಟೆಗೆ ಹೊಸ ರಂಗು ಬರುವುದು. ನಗರದಲ್ಲಿ ಹೂವಿನ‌ ಮಾರುಕಟ್ಟೆ ನಡೆಸಲು ಸ್ಥಳವಿಲ್ಲದೆ ರಸ್ತೆಯಲ್ಲಿ ನಡೆಯುತ್ತಿದ್ದರೂ ನಗರಸಭೆ ತನಗೆ ಬರುವ ಆದಾಯಕ್ಕೆ ಹೊಡೆತ ಬೀಳುವುದು ಎನ್ನುವ ಉದ್ದೇಶದಿಂದ ಮಾರುಕಟ್ಟೆ ಸ್ಥಳಾಂತರಕ್ಕೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪವೂ ಇದೆ.

ಮಾರುಕಟ್ಟೆಗೆ ಸದ್ಯ ಚೆಂಡು ಹೂವು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು ಕಳೆದ ವರ್ಷ ₹1 ಕೋಟಿ ವ್ಯವಹಾರ ನಡೆಸಿರುವುದು ಆಶಾದಾಯಕ ಬೆಳವಣಿಗೆ ಎನ್ನುತ್ತಾರೆ ಸ್ಥಳೀಯರು.

ಶಿರಾ ತಾಲ್ಲೂಕಿನ ಕದರೇಕಂಬದಹಳ್ಳಿಯಲ್ಲಿ ಮಾರುಕಟ್ಟೆಗೆ ಹೂವು ತರುವಂತೆ ಸಹಾಯಕ ನಿರ್ದೇಶಕ ಆರ್.ನಾಗರಾಜು ಹೂವು ಬೆಳೆಗಾರರನ್ನು ಮನವೊಲಿಸಿದರು
ಶಿರಾ ತಾಲ್ಲೂಕಿನ ಕದರೇಕಂಬದಹಳ್ಳಿಯಲ್ಲಿ ಮಾರುಕಟ್ಟೆಗೆ ಹೂವು ತರುವಂತೆ ಸಹಾಯಕ ನಿರ್ದೇಶಕ ಆರ್.ನಾಗರಾಜು ಹೂವು ಬೆಳೆಗಾರರನ್ನು ಮನವೊಲಿಸಿದರು
ಕೇಂದ್ರದ ವೈಶಿಷ್ಟ್ಯ
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಈ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ 15 ಮಳಿಗೆ ಹರಾಜು ಪ್ರಾಂಗಣ ಶೀತಲ ಗೃಹ ಸಭಾಂಗಣ ವಿಶ್ರಾಂತಿ ಕೊಠಡಿ ಪುರುಷರಿಗೆ ಎರಡು ಮತ್ತು ಮಹಿಳೆಯರಿಗೆ ನಾಲ್ಕು ಶೌಚಾಲಯ ನಾಲ್ಕು ಕೊಠಡಿ ಎರಡು ಭದ್ರತಾ ಕೊಠಡಿಗಳಿವೆ.
ಆರ್.ನಾಗರಾಜು
ಆರ್.ನಾಗರಾಜು
ಬೆಳೆಗಾರರ ಮನವೊಲಿಕೆ
ವಹಿವಾಟು ಇಲ್ಲದೆ ಸ್ಥಗಿತವಾಗಿದ್ದ ಮಾರುಕಟ್ಟೆಗೆ ಹೊಸ ರೂಪ ನೀಡಲು ಇಲಾಖೆ ಸಂಪೂರ್ಣ ಸಹಕಾರ ನೀಡಿದೆ. ಹೂವು ಬೆಳೆಯುವ ಗ್ರಾಮಗಳಿಗೆ ತೆರಳಿ ಅವರ ಮನವೊಲಿಸಿ ಅವರಿಗೆ ಎಲ್ಲ ರೀತಿಯ ಸೌಕರ್ಯ ನೀಡಿ ಮಾರುಕಟ್ಟೆಗೆ ಕರೆತರುವ ಕೆಲಸ ಮಾಡಲಾಗಿದೆ. ಇದರಿಂದ ಈಗ ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಹೂವು ಬರುತ್ತಿದೆ. ಇದರ ಜೊತೆಗೆ ಮಲ್ಲೇ ಕಾಕಡ ಕನಕಾಂಬರ ಮಾರುಕಟ್ಟೆಗೆ ಬಂದರೆ ಅನುಕೂಲವಾಗುವುದು. ಶಿರಾದಲ್ಲಿ ನಡೆಯುವ ಹೂವಿನ ಮಾರುಕಟ್ಟೆ ನಿಲ್ಲಿಸಿದರೆ ಇಲ್ಲಿನ ಮಾರುಕಟ್ಟೆ ಹೆಚ್ಚು ಗಮನ ಸೆಳೆಯುವುದು. ಆರ್.ನಾಗರಾಜು ಸಹಾಯಕ ನಿರ್ದೇಶಕ ಪುಷ್ಪ ಹರಾಜು ಮಾರುಕಟ್ಟೆ ಚಿಕ್ಕನಹಳ್ಳಿ
ರಮೇಶ್ ಬಾಬು
ರಮೇಶ್ ಬಾಬು
ಇನ್ನಷ್ಟು ಜಾಗೃತಿ ಬೇಕು
ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸೌಕರ್ಯ ನೀಡಿದ್ದರೂ ರೈತರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಬಡವನಹಳ್ಳಿಯಲ್ಲಿ ಯಾವುದೇ ಸೌಕರ್ಯ ಇಲ್ಲದಿದ್ದರೂ ಅಲ್ಲಿಗೆ ಹೆಚ್ಚಿನ ರೈತರು ಹೂವು ತೆಗೆದುಕೊಂಡು ಹೋಗುತ್ತಿರುವುದು ವಿಪರ್ಯಾಸ. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು. ರೈತರು ಸಹ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ರಮೇಶ್ ಬಾಬು ಬಾಲಬಸವನಹಳ್ಳಿ
ಮಂಜುನಾಥ್
ಮಂಜುನಾಥ್
ಉತ್ತಮ ಬೆಲೆಯ ಖಚಿತತೆ ಅಗತ್ಯ
ಕೆಲವು ವರ್ಷಗಳ ಹಿಂದೆ ಶೂನ್ಯ ವಹಿವಾಟು ನಡೆಯುತ್ತಿದ್ದ ಪುಷ್ಪ ಹರಾಜು ಮಾರುಕಟ್ಟೆ ಈಗ ಒಂದು ಹಂತಕ್ಕೆ ಬಂದಿದ್ದು ಉತ್ತಮ ಹಾದಿ ಹಿಡಿದಿದೆ. ಪ್ರಸ್ತುತ ಶಿರಾದಲ್ಲಿ ಅಸಂಘಟಿತವಾಗಿ ನಡೆಯುವ ಹೂವಿನ ಮಾರುಕಟ್ಟೆಯನ್ನು ಸ್ಥಗಿತ ಮಾಡಿದರೆ ಹೂವು ಬೆಳೆಯುವ ರೈತರು ಪುಷ್ಪ ಹರಾಜು ಮಾರುಕಟ್ಟೆಗೆ ಬರುವುದಕ್ಕೆ ಪ್ರಾರಂಭಿಸುತ್ತಾರೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಜೊತೆಗೆ ರೈತರಿಗೆ ಉತ್ತಮ ಬೆಲೆ ಸಿಗುವುದನ್ನು ಖಚಿತ ಪಡಿಸಿದರೆ ಅನುಕೂಲವಾಗುವುದು. ಮಂಜುನಾಥ್ ಅಮಲಗೊಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT