ಬಫರ್ ಡ್ಯಾಂ ನಿರ್ಮಾಣದಿಂ ಸಂಸ್ತ್ರಸ್ತರಾಗುವ ಸ್ಥಳ: 2 ವಾರದಲ್ಲಿ ಖುದ್ದು ಪರಿಶೀಲನೆ

7
ಸಂತ್ರಸ್ತರೊಂದಿಗಿನ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ

ಬಫರ್ ಡ್ಯಾಂ ನಿರ್ಮಾಣದಿಂ ಸಂಸ್ತ್ರಸ್ತರಾಗುವ ಸ್ಥಳ: 2 ವಾರದಲ್ಲಿ ಖುದ್ದು ಪರಿಶೀಲನೆ

Published:
Updated:
Deccan Herald

ತುಮಕೂರು: ಎತ್ತಿನ ಹೊಳೆ ಯೋಜನೆಯ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಬಫರ್ ಡ್ಯಾಂನಿಂದ ಸಂತ್ರಸ್ತರಾಗುವ ಗ್ರಾಮಗಳಿಗೆ ಎರಡು ವಾರದಲ್ಲಿ ಖುದ್ದು ಭೇಟಿ ನೀಡಿ ನಿವಾಸಿಗಳು ಮತ್ತು ರೈತರ ಅಹವಾಲು ಆಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎತ್ತಿನ ಹೊಳೆ ಯೋಜನೆಯ ಭೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣದ ಸಂತ್ರಸ್ತರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಕಳೆದ ವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎತ್ತಿನ ಹೊಳೆ ಯೋಜನೆಯ ಡ್ಯಾಂ ನಿರ್ಮಾಣಕ್ಕೆ ಅಗತ್ಯವಿರುವ ಜಮೀನಿನಲ್ಲಿ ಭೂ ಸ್ವಾಧೀನ, ನೇರ ಖರೀದಿ ಹಾಗೂ ಬಾಡಿಗೆ ಅಥವಾ ಗುತ್ತಿಗೆ ಆಧಾರದ ಮೇಲೆ ಪಡೆಯುವ ಬಗ್ಗೆ ರೈತರೊಂದಿಗೆ ಚರ್ಚಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಆ ಪ್ರಕಾರ ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗಲಿರುವ ಭಾಗದ ಗ್ರಾಮಗಳ ರೈತರು, ಸಾರ್ವಜನಿಕರ ಸಭೆ ಕರೆಯಲಾಗಿದೆ’ ಎಂದು ತಿಳಿಸಿದರು.

’ಎರಡು ವಾರಗಳಲ್ಲಿ ಗ್ರಾಮಗಳಿಗೆ ಭೇಟಿ ನೀಡಿದಾಗ ಅಹವಾಲು ಆಲಿಸಿ ವಾಸ್ತವಾಂಶಗಳನ್ನು ಆಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಆರ್. ಶಿವರಾಮಯ್ಯ ಮಾತನಾಡಿ,‘ ಯೋಜನೆ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬಂಗಾರದ ಬೆಲೆ ಬಾಳುವ ಜಮೀನಿಗೆ ಕಡಿಮೆ ಬೆಲೆ ನಿಗದಿ ಮಾಡಿ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾದರೆ ಅದಕ್ಕೆ ಅವಕಾಶ ಕೊಡುವುದಿಲ್ಲ. ರೈತರ ಕೆಲ ಭೂ ದಾಖಲೆಗಳು ತಿದ್ದುಪಡಿಯಾಗಬೇಕಿದೆ. ಕೋಳಾಲ ಹೋಬಳಿ ಪೋಡಿಮುಕ್ತ ಹೋಬಳಿಯನ್ನಾಗಿ ಘೋಷಣೆ ಮಾಡಬೇಕು’ ಎಂದು ಮನವಿ ಮಾಡಿದರು.

’ಯೋಜನೆ ವ್ಯಾಪ್ತಿಯಲ್ಲಿ ಬರುವ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ದರ ನಿಗದಿಪಡಿಸಲಾಗಿದೆ. ಅದೇ ದರವನ್ನು ಕೊರಟಗೆರೆ ತಾಲ್ಲೂಕಿಗೂ ಪರಿಗಣಿಸಬೇಕು’ ಎಂದು ಒತ್ತಾಯ ಮಾಡಿದರು.

ಬೆಲ್ಲದಹಳ್ಳಿ ಚಿಕ್ಕತಿಮ್ಮಯ್ಯ ಮಾತನಾಡಿ, ‘ಪಾವಗಡದಲ್ಲಿ ವ್ಯವಸಾಯಕ್ಕೆ ಯೋಗ್ಯವಲ್ಲದ ಬಂಜರು ಭೂಮಿಯು ಇದ್ದುದರಿಂದ ಗುತ್ತಿಗೆ ಆಧಾರದ ಮೇಲೆ ರೈತರಿಂದ ಪಡೆದು ಸೋಲಾರ್ ಪಾರ್ಕ್ ಸ್ಥಾಪಿಸಲಾಗಿದೆ. ಆದರೆ, ಭೈರಗೊಂಡ್ಲು ಸುತ್ತಮುತ್ತಲಿನ ಪ್ರದೇಶದಲ್ಲಿ ರೇಷ್ಮೆ, ಅಡಿಕೆ ಮತ್ತು ತೆಂಗು ಸೇರಿದಂತೆ ಹಲವು ಬಗೆಯ ತೋಟಗಾರಿಕೆ ಬೆಳೆ ಇರುವ ಪ್ರದೇಶವಾಗಿದೆ’ ಎಂದು ವಿವರಿಸಿದರು.

ಇಂತಹ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಡ್ಯಾಂ ನಿರ್ಮಿಸಲು ಸಾಧ್ಯವಿಲ್ಲ. ಗುತ್ತಿಗೆ ಅಥವಾ ಒಪ್ಪಂದದ ಆಧಾರದ ಮೇಲೆ ನೀಡಲು ನಾವೂ ಒಪ್ಪುವುದಿಲ್ಲ ಎಂದು ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಭೂಸ್ವಾಧೀನಾಧಿಕಾರಿ ಆರತಿ ಆನಂದ್, ಮಧುಗಿರಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ, ಕೊರಟಗೆರೆ ತಹಶೀಲ್ದಾರ್ ನಾಗರಾಜ್, ರೈತ ಮುಖಂಡರು ಇದ್ದರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !