ಗುರುವಾರ , ಅಕ್ಟೋಬರ್ 1, 2020
20 °C

ತುಮಕೂರು | ಖಾಸಗಿ ಆಸ್ಪತ್ರೆಗಳಿಂದ 2,500ಹಾಸಿಗೆ ಲಭ್ಯ: ಸಚಿವ ಮಾಧುಸ್ವಾಮಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಕೊರೊನಾ ರೋಗಿಗಳ ಚಿಕಿತ್ಸೆಗೆ ಮೀಸಲಿಡಬೇಕು. ಜಿಲ್ಲೆಯಲ್ಲಿ 80 ಖಾಸಗಿ ಆಸ್ಪತ್ರೆಗಳಿದ್ದು ತುಮಕೂರು ನಗರದಲ್ಲಿಯೇ 39 ಇವೆ. ಜಿಲ್ಲೆಯಲ್ಲಿ ಸುಮಾರು 2,500ಕ್ಕೂ ಹೆಚ್ಚು ಹಾಸಿಗೆಗಳು ಖಾಸಗಿ ಆಸ್ಪತ್ರೆಗಳಿಂದ ಲಭ್ಯವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ನಗರದ ಖಾಸಗಿ ಆಸ್ಪತ್ರೆಗಳು ಒಗ್ಗೂಡಿ ಅಶ್ವಿನಿ ಆಯುರ್ವೇದ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ ಆಸ್ಪತ್ರೆ ವೀಕ್ಷಿಸಿದ ನಂತರ ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯಲ್ಲಿ ‌ಮಾತನಾಡಿದರು.

‘ಕೋವಿಡ್ ಪರೀಕ್ಷೆ ಹೆಸರಿನಲ್ಲಿ ಬೇರೆಡೆಗೆ ಕಳುಹಿಸದೆ ನಿಮ್ಮ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಬೇಕು. ಸಂಕಷ್ಟದ ಈ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಕರ್ತವ್ಯವಾಗಿದೆ. ಆಸ್ಪತ್ರೆಗೆ ಬರುವವರನ್ನು ಚಿಕಿತ್ಸೆ ನೀಡದೆ ಕೋವಿಡ್ ಪರೀಕ್ಷೆಯ ವರದಿಯನ್ನು ಕೇಳಿ ವಾಪಸ್ ಕಳುಹಿಸಿದರೆ ಹೇಗೆ? ತುರ್ತು ಸಂದರ್ಭದಲ್ಲಿ ಬರುವ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡಿ. ಬಡವರ ಸೇವೆ ಮಾಡಿದರೆ ನಿಮ್ಮ ವೃತ್ತಿಗೆ ಗೌರವ ಬರುತ್ತದೆ’ ಎಂದರು.

ಅನಾರೋಗ್ಯದಿಂದ ಆಸ್ಪತ್ರೆಗೆ ಬರುವವರಿಗೆ ಮಾಮೂಲಿಯಂತೆ ಸೂಕ್ತ ಚಿಕಿತ್ಸೆ ನೀಡಿ. ಕೋವಿಡ್ ಲಕ್ಷಣವಿರುವ ರೋಗಿಗಳು ಬಂದರೆ, ಪರೀಕ್ಷೆ ಮಾಡಿ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡಬೇಕು. ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾದರೆ ಜೀವ ಉಳಿಸಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರು ಕೊನೆಯ ಸಮಯದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಬಂದಿರುವವರೇ ಆಗಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳು, ಅಲ್ಲಿ ಲಭ್ಯವಾಗುವ ಹಾಸಿಗೆಗಳ ಬಗ್ಗೆ ಡಿಎಚ್‌ಒ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಖಾಸಗಿ ಆಸ್ಪತ್ರೆಗಳ ವೈದ್ಯರಾದ ಡಾ.ಬಸವರಾಜ್, ಡಾ.ಪ್ರಭಾಕರ, ಡಾ.ಮಹೇಶ ಸೇರಿದಂತೆ ಖಾಸಗಿ ಆಸ್ಪತ್ರೆಯ ವೈದ್ಯರು, ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಲೆಕ್ಕಪರಿಶೋಧಕ ರಾಮಚಂದ್ರಪ್ಪ ಒಂದು ವೆಂಟಿಲೇಟರ್ ಖರೀದಿಸಲು ₹ 4.50 ಲಕ್ಷದ ಚೆಕ್‍ ಅನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು