ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳಿವು ನೀಡದೇ ಕಡಬ ಕೆರೆಗೆ ತೂಬು ಎತ್ತಿದ ಸಚಿವ

Last Updated 1 ಸೆಪ್ಟೆಂಬರ್ 2018, 17:32 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಕಾರೇಹಳ್ಳಿ ಸಮೀಪದ ಹೇಮಾವತಿ ಮುಖ್ಯ ನಾಲೆಯ ತೂಬುಗಳನ್ನು (ಎಸ್ಕೇಪ್) ಎತ್ತುವ ಮೂಲಕ ಸಚಿವ ಎಸ್.ಆರ್.ಶ್ರೀನಿವಾಸ್ ಕಡಬ ಕೆರೆಗೆ ನೀರು ಹರಿಸಿದರು.

ನೀರು ಹರಿಸುವ ಮುನ್ನ ‘ಸ್ವಕ್ಷೇತ್ರಕ್ಕೆ ಬಂದ ಸಚಿವರು ಮುಂದಿನ ಕಾರ್ಯಕ್ರಮ ಏನು ಎಲ್ಲಿಗೆ ಹೋಗಬೇಕು ಎಂದು ತಮ್ಮ ಬೆಂಗಾವಲು ವಾಹನದವರಿಗೆ ಸುಳಿವು ನೀಡದೇ ನೇರ ಕಾರೇಹಳ್ಳಿ ಎಸ್ಕೇಪ್ ಬಳಿ ತೆರಳಿ ಕಡಬ ಕೆರೆಗೆ ನೀರು ಹರಿಯುವ ತೂಬು ಎತ್ತಿದರು. ಸಾರ್ವಜನಿಕರು, ಅಧಿಕಾರಿಗಳು, ಮುಖಂಡರುಗಳಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ.

ಈಗ ತೂಬುಗಳಲ್ಲಿ 150 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಎಳ್ಳಷ್ಟು ನೀರು ಕಡಿಮೆ ಆಗಬಾರದು. ಈಗ ತೂಬು ಯಾವ ಮಟ್ಟದಲ್ಲಿದೆಯೋ ಅಷ್ಷೇ ಮಟ್ಟದಲ್ಲಿ ಇರಬೇಕು. ನಾನು ಆಗಿಂದಾಗ ಬರುತ್ತೇನೆ. ಸಾರ್ವಜನಕರಿಂದ ನೀರು ಬರುತ್ತಿಲ್ಲ ಎನ್ನುವ ದೂರುಗಳು ಬರದಂತೆ ನೀವೇ ನೋಡಿಕೊಳ್ಳಬೇಕು ಎಂದು ಹೇಮಾವತಿ ನಾಲಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಾಕೀತು ಮಾಡಿದರು.

ನಿಟ್ಟೂರು, ಬೆಲವತ್ತ ಕೆರೆ ತುಂಬಲಿವೆ. ಇಲ್ಲಿಂದ ನೀರು ಕಡಬ ಕೆರೆ ಸೇರಲಿದ್ದು ಈ ತಿಂಗಳ ಅಂತ್ಯಕ್ಕೆ ಶೇ 50ರಷ್ಟು ಕೆರೆ ತುಂಬಿಸಲಾಗುವುದು. ಡ್ಯಾಂನಲ್ಲಿ ಸಾಕಷ್ಟು ನೀರು ಇದ್ದು, ಬರುವ ಜನವರಿ ಅಂತ್ಯದವರೆಗೂ ನೀರು ಹರಿಯಲಿದ್ದು, ಜಿಲ್ಲೆಯ ಎಲ್ಲ ಕೆರೆಗಳು ತುಂಬಲಿವೆ. ರೈತರು ಆತಂಕಗೊಳ್ಳಬಾರದು ಎಂದು ತಿಳಿಸಿದರು.

ನೀರು ಹರಿಸಿಕೊಳ್ಳುವ ವಿಚಾರವಾಗಿ ಸೆ. 5ರಂದು ಜಿಲ್ಲಾ ಉಸ್ತುವರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಇಲ್ಲಿ ಎಲ್ಲ ತಾಲ್ಲೂಕುಗಳ ಶಾಸಕರೊಟ್ಟಿಗೆ ಚರ್ಚಿಸಿ ನೀರು ಹರಿಸಿಕೊಳ್ಳುವ ವಿಚಾರ ಮಂಡನೆಯಾಗಲಿದೆ. ಈವರೆಗೂ ನಮ್ಮ ತಾಲ್ಲೂಕಿಗೆ ನೀರು ಹರಿಸಿಕೊಂಡಿಲ್ಲ. ಈ ತಿಂಗಳು ನಮ್ಮ ಅವಧಿ ಈ ತಿಂಗಳು ಪೂರಾ ನೀರು ನಮ್ಮಲ್ಲಿ ಹರಿದರೇ ಹೇಮಾವತಿ ವ್ಯಾಪ್ತಿಯ ಕೆರೆಗಳು ಶೇ 50ರಷ್ಟು ತುಂಬಲಿವೆ. ಇದಕ್ಕೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಕೆರೆಗಳಿಗೆ ಎಕ್ಸ್‌ಪ್ರೆಸ್ ಲೈನ್ ನಿರ್ಮಿಸಿ ಪತ್ರ

‘ಕಡಬ, ಎಂ.ಎಚ್.ಪಟ್ಟಣ, ಗುಬ್ಬಿ(ಹೇರೂರು) ಕೆರೆಗಳಿಗೆ ಹೇಮಾವತಿ ನೀರು ಹರಿಯುವ ಎಕ್ಸ್ ಪ್ರೆಸ್ ಲೈನ್ ನಿರ್ಮಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಪತ್ರದ ಮೂಲಕ ತಿಳಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಗಂಭೀರವಾದ ಚರ್ಚೆ ನಡೆದಿದ್ದು, ಮೂರು ಕೆರೆಗಳಿಗೂ ಎಸ್ಕೇಪ್ ಲೈನ್ ನಿರ್ಮಾಣವಾಗಲಿದೆ. ನಿಟ್ಟೂರು ಹೋಬಳಿ ಕಾರೇಹಳ್ಳಿ ಬಳಿಯ ಡಿ.12 ಎಸ್ಕೇಪ್ ಮೂಲಕ ಎಕ್ಸ್‌ಪ್ರೆಸ್ ಲೈನ್ ವಿಸ್ತರಿಸುವ ಸಲುವಾಗಿ ಸರ್ವೆ ಮಾಡಿಸಿ, ನಕ್ಷೆ ತಯಾರಿಸಿ ಕೊಡಿ’ ಎಂದು ಅಧಿಕಾರಿಗಳಿಗೆ ದೂರವಾಣಿ ಮೂಲಕ ತಾಕೀತು ಮಾಡಿದರು.

ಇದರಿಂದ ಡಿ.12 ಎಸ್ಕೇಪ್ ಗೇಟ್ ಮೂಲಕ ಕಡಬ ಕೆರೆಗೆ 150 ಕ್ಯೂಸೆಕ್ಸ್ ಒಮ್ಮೆಗೆ ನೀರು ಹರಿಸಬಹುದು. ಕಡಬ ಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಟ್ಟಿದೆ. ಅಲ್ಲದೆ ಇಲ್ಲಿಂದಲೇ ಎಚ್ಎಎಲ್‌ಗೆ ನೀರು ಕೊಡಬೇಕಿದೆ. ಆದ್ದರಿಂದ ವರ್ಷಪೂರಾ ಕೆರೆಯ ನೀರು ಇರುವಂತೆ ನೋಡಿಕೊಳ್ಳಬೇಕಿದ್ದು, ಪ್ರತಿ ವರ್ಷ ಕೆರೆ ತುಂಬಿಸಲು ಎಕ್ಸ್‌ಪ್ರೆಸ್ ಲೈನ್ ನಿರ್ಮಿಸುವ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಆದ್ದರಿಂದ ಅನುದಾನ ಎಷ್ಟಾದರೂ ಸರ್ಕಾರ ನೀಡಲಿದ್ದು, ಕ್ರಿಯಾಯೋಜನೆ ತಯಾರಿಸಿ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT