ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಸಿಟಿ ಕೆಲಸಕ್ಕೆ ಸಚಿವರ ಅತೃಪ್ತಿ

ಗುತ್ತಿಗೆದಾರರನ್ನು ತರಾಟೆಗೆ ತೆಗದುಕೊಂಡ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು
Last Updated 7 ಜನವರಿ 2021, 4:15 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಬುಧವಾರ ವೀಕ್ಷಿಸಿದರು. ಈ ಸಮಯದಲ್ಲಿ ಕಳಪೆ ಕಾಮಗಾರಿ ಕಂಡು ಅಧಿಕಾರಿಗಳು, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

₹ 930 ಕೋಟಿ ಮೊತ್ತದಲ್ಲಿ ವಿವಿಧಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟೊಂದು ದೊಡ್ಡ ಮೊತ್ತದಲ್ಲಿ ಹಣ ಖರ್ಚು ಮಾಡುತ್ತಿದ್ದು, ಕಾಮಗಾರಿಗಳ ಸಂಖ್ಯೆ ಗಮನಿಸಿದರೆ ನಗರದ ಚಿತ್ರಣವನ್ನೇ ಬದಲಿಸಬೇಕಿತ್ತು. ಸಮರ್ಪಕವಾಗಿ ಕಾಮಗಾರಿಗಳು ನಡೆದು, ಪೂರ್ಣಗೊಂಡಿದ್ದರೆ ಈ ವೇಳೆಗಾಗಲೇ ನಗರ ‘ಸ್ಮಾರ್ಟ್’ ಆಗಬೇಕಿತ್ತು. ಆದರೆ ಅಂತಹ ವಾತಾವರಣವೇ ಕಂಡುಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ, ಚರಂಡಿ, ಪಾರ್ಕ್, ಕ್ರೀಡಾಂಗಣ ಸೇರಿದಂತೆ ಸಾಕಷ್ಟು ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಕೆಲವು ಮುಗಿಯುವ ಹಂತಕ್ಕೆ ಬರಬೇಕಿತ್ತು. ಇಲ್ಲಿ ನೋಡಿದರೆ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ. ಇಷ್ಟೊಂದು ತಡವಾಗಲು ಕಾರಣವೇನು ಎಂದು ಪ್ರಶ್ನಿಸಿದರು. ಸ್ಥಳದಲ್ಲಿ ಇದ್ದ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ಬಿ.ಟಿ.ರಂಗಸ್ವಾಮಿ, ಗುತ್ತಿಗೆದಾರರ ವಿರುದ್ಧ ಕಿಡಿಕಾರಿದರು. ಪಾಲಿಕೆ ಆಯುಕ್ತರ ವಿರುದ್ಧವೂ ಚಾಟಿ ಬೀಸಿದರು.

ರಸ್ತೆಗೆ ಗಡುವು: ಬಿ.ಎಚ್.ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಫೆ. 6ರ ಒಳಗೆ ಮುಗಿಯಬೇಕು. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ರಿಂಗ್ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಸಾಕಷ್ಟು ತಡವಾಗಿದ್ದು, ಮತ್ತೆ ನಿಧಾನವಾಗಬಾರದು. ಇನ್ನೂ ಶೇ 35ರಿಂದ 40ರಷ್ಟು ಕೆಲಸ ಆಗಬೇಕಿದ್ದು, ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು.ಮಹಾತ್ಮ ಗಾಂಧಿ ಕ್ರೀಡಾಂಗಣ ಕಾಮಗಾರಿಯನ್ನುಶೀಘ್ರ ಮುಗಿಸಬೇಕು ಎಂದು ಸೂಚಿಸಿದರು.

ಒಂದು ಹಂತದಲ್ಲಿ ಅಧಿಕಾರಿಗಳು, ಗುತ್ತಿಗೆದಾರರನ್ನು ನೇರವಾಗಿ ಪ್ರಶ್ನಿಸಿದರು. ಕೆಲಸ ಮಾಡಲು ಏನು ಸಮಸ್ಯೆ?. ಹಣ ನೀಡುತ್ತಿಲ್ಲವೆ? ಬಿಲ್ ಕೊಟ್ಟಮೇಲೆ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಲು ನಿಮಗೆ ಏನಾಗಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಯಾವುದೇ ಸಬೂಬು ಹೇಳದೆ ಕೆಲಸ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

‘ನಾನು ತುಮಕೂರಿಗೆ ಮತ್ತೆ ಬಂದು ಪರಿಶೀಲನೆ ನಡೆಸುತ್ತೇನೆ. ಅಷ್ಟರಲ್ಲಿ ನಿಗದಿತ ಕಾಮಗಾರಿಗಳು ಪೂರ್ಣಗೊಂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಕೆಲಸ ತಡವಾಗಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಕಾಮಗಾರಿಗಳ ವೀಕ್ಷಣೆ ನಂತರ ನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಸಚಿವರ ಜತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT