ಬುಧವಾರ, ಫೆಬ್ರವರಿ 1, 2023
16 °C
ಜನಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆ

ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ: ಜೆ.ಪಿ. ನಡ್ಡಾ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ‘ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಕರ್ನಾಟಕವನ್ನು ನಿರ್ಲಕ್ಷ ಮಾಡಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚು ಅನುದಾನ ನೀಡುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ನಗರದಲ್ಲಿ ಶುಕ್ರವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದವರು, ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದೆ. ಆ ಮೂಲಕ ದೇಶವನ್ನು ಅಭಿವೃದ್ಧಿಯ ಕಡೆ ತೆಗೆದುಕೊಂಡು ಹೋಗುವ ಮೂಲಕ ಪ್ರಧಾನಿ ಮೋದಿ ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದಾರೆ ಎಂದರು.

ತುಮಕೂರು ಹಾಗೂ ಶಿರಾ ಭಾಗದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಬಂಡವಾಳ ಹೂಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್ ಮುಖಂಡರು ಬಳಸುವ ಕೀಳು ಪದ ಪ್ರಯೋಗ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕೀಳು ಮನಸ್ಸು ಹೊಂದಿರುವ ಕಾಂಗ್ರೆಸ್  ಮತ್ತೆ ಅಧಿಕಾರಕ್ಕೆ ಬರದಂತೆ ಮನೆಯಲ್ಲಿ ಕೂರಿಸುವ ಕೆಲಸ ಮಾಡಬೇಕು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯ ಹೆಚ್ಚು ಅಭಿವೃದ್ಧಿ ಸಾಧಿಸುತ್ತಿದೆ. ರಾಜ್ಯದಲ್ಲಿ 6 ಸಾವಿರ ಕಿ.ಮೀ ಉದ್ದದ ರೈಲ್ವೆ ಯೋಜನೆ, ರೈಲ್ವೆ ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ತುಮಕೂರು- ದಾವಣಗೆರೆ ನೇರ ರೈಲು ಮಾರ್ಗಕ್ಕೆ ಅನುಮೋದನೆ ನೀಡಿರುವುದು ಬಿಜೆಪಿ ಸರ್ಕಾರ ಎಂದರು.

ತುಮಕೂರು ಜಿಲ್ಲೆಗೆ ನಡ್ಡಾ ಭೇಟಿ ನೀಡಿದ್ದಾರೆ. ಅವರ ಕಾಲು ಗುಣದಿಂದ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ರಾಜ್ಯದಲ್ಲಿ 135 ರಿಂದ 140 ಸ್ಥಾನ ಗಳಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಹಣ, ಹೆಂಡ, ಜಾತಿಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ’ ಎಂದು ಟೀಕಿಸಿದರು.

ಅಧಿಕಾರ ದೊರೆಯುವುದು ಅಸಾಧ್ಯ. ಕಾಂಗ್ರೆಸ್ ಸರ್ಕಾರ ತನ್ನ 5 ವರ್ಷದ ಸಾಧನೆಯ ಪಟ್ಟಿಯನ್ನು ಬಿಡುಗಡೆ ಮಾಡಲಿ. ನಾವು ನಮ್ಮ ಸರ್ಕಾರದ ಸಾಧನೆಯ ಪಟ್ಟಿ ಬಿಡುಗಡೆ ಮಾಡುತ್ತೇವೆ. ಸಾಧನೆ ಆಧಾರದ ಮೇಲೆ ಚುನಾವಣೆಗೆ ಹೋಗೋಣ. ಆಗ ಜನತೆ ಅಭಿವೃದ್ಧಿಯ ಮೇಲೆ ಮತ ನೀಡುತ್ತಾರೆ ಎಂದರು.

ಕಂದಾಯ ಸಚಿವ ಆರ್. ಅಶೋಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಂಸದ ಪಿ.ಸಿ. ಮೋಹನ್, ಮುಖಂಡ ಅಶ್ವತ್ಥನಾರಾಯಣ ಮಾತನಾಡಿದರು.

ಕಾಡುಗೊಲ್ಲರಿಗೆ ನಿರಾಶೆ: ಶಿರಾ ವಿಧಾನಸಭೆ ಉಪ ಚುನಾವಣ  ಸಮಯದಲ್ಲಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಅಧ್ಯಕ್ಷರಾಗಿ ಶಿರಾ ತಾಲ್ಲೂಕಿನ ಚಂಗಾವರ ಮಾರಣ್ಣ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಆದರೆ, ಕೆಲವರ ಒತ್ತಡಕ್ಕೆ ಮಣಿದು ಅದೇಶಕ್ಕೆ ತಡೆ ಹಿಡಿಯಲಾಗಿದೆ. ಶಿರಾಕ್ಕೆ ಬಿಜೆಪಿ ನಾಯಕರು ಆಗಮಿಸಿದ್ದು ಈ ಸಮಯದಲ್ಲಿ ಅಧ್ಯಕ್ಷರ ಆಯ್ಕೆಯ ಬಗ್ಗೆ ಮುಖ್ಯಮಂತ್ರಿ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಬಗ್ಗೆ ಚಕಾರ ಎತ್ತದಿರುವುದು ಕಾಡುಗೊಲ್ಲ ಜನಾಂಗಕ್ಕೆ ನಿರಾಶೆ ಮೂಡಿಸಿತು.

ಜನತೆಗೆ ರುಚಿಸದ ಭಾಷಣ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭಾಷಣ ಪ್ರಾರಂಭ ಮಾಡುತ್ತಿದ್ದಂತೆ ಜನರು ಎದ್ದು ಹೋಗಲು ಪ್ರಾರಂಭಿಸಿದರು. ಹಿಂದಿಯಲ್ಲಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಅವರ ಭಾಷಣ ಜನರಿಗೆ ಆರ್ಥವಾಗಲಿಲ್ಲ. ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದರೂ ಅದನ್ನು ಕೇಳಿಸಿಕೊಳ್ಳದೆ ಜನ ಜಾಗ ಖಾಲಿ ಮಾಡಿದರು. ನಡ್ಡಾ ಅವರು ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವಂತಾಯಿತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಬಿ.ಸಿ. ನಾಗೇಶ್, ಶಾಸಕ ಡಾ.ಸಿ‌.ಎಂ. ರಾಜೇಶ್ ಗೌಡ, ಜ್ಯೋತಿ ಗಣೇಶ್, ಮಸಾಲೆ ಜಯರಾಂ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ, ಕೆ.ಎಸ್. ಕಿರಣ್ ಕುಮಾರ್, ಡಾ.ಹುಲಿ ನಾಯ್ಕರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಕೆ. ಮಂಜುನಾಥ್, ಮುಡಿಮಡು ಮಂಜುನಾಥ್, ಚಂಗಾವರ ಮಾರಣ್ಣ, ವಿಜಯರಾಜು, ರಂಗಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.