ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳಗುಪ್ಪೆ ಅಭಿವೃದ್ಧಿಗಿಲ್ಲ ‘ಆದರ್ಶ’ ಅನುದಾನ

Published 24 ಸೆಪ್ಟೆಂಬರ್ 2023, 6:10 IST
Last Updated 24 ಸೆಪ್ಟೆಂಬರ್ 2023, 6:10 IST
ಅಕ್ಷರ ಗಾತ್ರ

ತಿಪಟೂರು: ಪ್ರಾಚೀನ ಸ್ಮಾರಕ ಹಾಗೂ ಮೂಡಲಪಾಯ ಯಕ್ಷಗಾನದ ತವರೂರಾದ ತಾಲ್ಲೂಕಿನ ಅರಳಗುಪ್ಪೆಯನ್ನು ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಂಡಾಗ ಜನರು ‘ಹೈಟೆಕ್’ ಗ್ರಾಮದ ಕನಸು ಕಂಡಿದ್ದರು. ಆದರೆ ಅದು ನನಸಾಗುವ ಯಾವ ಭರವಸೆಯೂ ಸದ್ಯಕ್ಕೆ ಉಳಿದಿಲ್ಲ.

ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಅರಳಗುಪ್ಪೆಯೂ ಒಂದು. 2019ರಲ್ಲಿ ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾದಾಗ ಹಲವು ಯೋಜನೆಗಳ ಚಿಂತನೆ ಮಾಡಿದ್ದರು. ಅದರಂತೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಂಡು ಕಲೆ ಪ್ರೋತ್ಸಾಹ, ಸ್ಮಾರಕ ಅಭಿವೃದ್ಧಿ, ಪ್ರವಾಸಿ ತಾಣದ ಪರಿಕಲ್ಪನೆಯನ್ನು ಸ್ಥಳೀಯರು ಹೊಂದಿದ್ದರು. ಆನಂತರ ಆದರ್ಶ ಗ್ರಾಮದ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನಲ ಬರಲಿಲ್ಲ. ನರೇಗಾ ಯೋಜನೆಯನ್ನೇ ಬಳಸಿಕೊಂಡು ‌ಕೆಲವು ಅಭಿವೃದ್ಧಿ ಮಾಡಬಹುದು ಎಂದಾಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

ಸಂಸದರ ಆದರ್ಶ ಗ್ರಾಮ ಯೋಜನೆ ಅಡಿ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲಾಗುವುದು.
ವೇದಮೂರ್ತಿ, ಪಿಡಿಒ, ಅರಳಗುಪ್ಪೆ ಗ್ರಾ.ಪಂ.

ಈ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಒಟ್ಟು 122 ಕಾಮಗಾರಿ ಕೈಗೊಂಡಿದ್ದು, ಹಲವು ಕಾಮಗಾರಿ ಮುಕ್ತಾಯವಾಗಿದ್ದು, ಕೆಲವು ಬಾಕಿ ಉಳಿದಿವೆ. ಗ್ರಾಮದಲ್ಲಿ ರಸ್ತೆ, ಚರಂಡಿಯಂತಹ ಮೂಲ ಸೌಕರ್ಯಗಳೇ ಮರೀಚಿಕೆಯಾಗಿವೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಸಿ ರಸ್ತೆ, ಶತಮಾನದ ಶಾಲೆಗೆ ಮಳೆ ನೀರು ಸಂಗ್ರಹ ಘಟಕ, ಆಟದ ಮೈದಾನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಕೆರೆ ಅಭಿವೃದ್ಧಿ, ಬಸಿ ಕಾಲುವೆ, ಶಾಲೆಯ ಸಭಾ ಮಂಟಪ, ಕಟ್ಟದ ದುರಸ್ತಿ, ಶಾಲೆಗೆ ವಾಹನ ಸೌಲಭ್ಯ ಸೇರಿದಂತೆ ಸ್ಥಳೀಯರಿಗೆ ಟೈಲರಿಂಗ್ ತರಬೇತಿ ನೀಡಲಾಗಿದೆ.

ಅರಳಗುಪ್ಪೆ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ನಡೆದಿವೆ. ಇನ್ನೂ ಹೆಚ್ಚಿನ ಕಾಮಗಾರಿಗಳ ಅಗತ್ಯತೆ ಇದೆ. ಪಶು ಚಿಕಿತ್ಸಾ ಕೇಂದ್ರದ ನಿರೀಕ್ಷೆಯಲ್ಲಿ ಸ್ಥಳೀಯ ರೈತರಿದ್ದಾರೆ.
ನೇತ್ರಾನಂದ, ಗ್ರಾ.ಪಂ.ಸದಸ್ಯ

ಗ್ರಾಮದಲ್ಲಿ 13ನೇ ಶತಮಾನದ ಹೊಯ್ಸಳರ ಕಾಲದ ಕೇಶವ ದೇವಾಲಯವಿದ್ದು, ಪುರಾತತ್ವ ಇಲಾಖೆಗೆ ಸೇರಿದೆ. ಇದನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿಸುವಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ರಾಜ್ಯದಲ್ಲಿಯೇ ಮೂಡಲಪಾಯ ಯಕ್ಷಗಾನದ ತವರೂರು ಅರಳಗುಪ್ಪೆ. ಇದೀಗ ಆ ಕಲೆಯು ಅಳಿವಿನ ಅಂಚಿಗೆ ತಲುಪುತ್ತಿದ್ದು ಕಲೆಯನ್ನು ಪ್ರೋತ್ಸಾಹಿಸಲು ಯಾವುದೇ ಉತ್ತೇಜನ ದೊರಕದಿರುವುದು ಗ್ರಾಮದ ಕಲಾವಿದರಿಗೆ ಬೇಸರ ಮೂಡಿಸಿದೆ.

ಮುಂದಿನ ತಲೆಮಾರಿಗೂ ಈ ಕಲೆ ತಲುಪಿಸಬೇಕು ಎನ್ನುವುದು ಅನೇಕ ಕಲಾವಿದರ ಆಶಯ. ಗ್ರಾಮದಲ್ಲಿ ಹೈನುಗಾರಿಕೆಗೂ ಆದ್ಯತೆ ನೀಡಿದ್ದು, ಸುತ್ತಮುತ್ತಲಿನ ಹಳ್ಳಿಗಳಿಗೆ ಅನುಕೂಲವಾಗುವಂತೆ ಪಶುಚಿಕಿತ್ಸಾ ಕೇಂದ್ರದ ಅಗತ್ಯವಿದ್ದು ಅದರ ಜಾರಿಯ ನಿರೀಕ್ಷೆಯಲ್ಲಿ ಇಲ್ಲಿನ ರೈತರಿದ್ದಾರೆ.

ಅರಳಗುಪ್ಪೆ ಗ್ರಾಮದ ಪ್ರಾಚೀನ ಕೇಶವ ದೇವಾಲಯ
ಅರಳಗುಪ್ಪೆ ಗ್ರಾಮದ ಪ್ರಾಚೀನ ಕೇಶವ ದೇವಾಲಯ
ಪೋಟೋ : ಅರಳಗುಪ್ಪೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಸಿಸಿ ರಸ್ತೆಯ ಚಿತ್ರ.
ಪೋಟೋ : ಅರಳಗುಪ್ಪೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಸಿಸಿ ರಸ್ತೆಯ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT