ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಸಾರ್ವಜನಿಕ ಗ್ರಂಥಾಲಯ ನಿರ್ಲಕ್ಷ್ಯ; ಕಪಾಟು ಇಲ್ಲದೆ ಮೂಟೆ ಸೇರಿದ ಪುಸ್ತಕ

Published 24 ನವೆಂಬರ್ 2023, 7:24 IST
Last Updated 24 ನವೆಂಬರ್ 2023, 7:24 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಗ್ರಂಥಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದರಿಂದ ಓದುಗರ ಅಪಾರ ನಷ್ಟವುಂಟಾಗುತ್ತಿದೆ ಎಂದು ಹಲವು ಕನ್ನಡಪರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

ಪಟ್ಟಣಕ್ಕೆ ಸಾರ್ವಜನಿಕ ಗ್ರಂಥಾಲಯ ಅಂದಿನ ಶಾಸಕ, ಜನಪರ ರಾಜಕಾರಣಿ ವೈ.ಕೆ.ರಾಮಯ್ಯ ಅವರ ಕಾಲ (1985ರಲ್ಲಿ) ಮಂಜೂರಾಯಿತು. ಪ್ರಾರಂಭದ ದಿನಗಳಲ್ಲಿ ಮದ್ದೂರು ರಸ್ತೆ ಸಿ.ಡಿ.ರಾಮಸ್ವಾಮಿ ಛತ್ರದಲ್ಲಿ ಪ್ರಾರಂಭವಾಗಿ, 1988ರಲ್ಲಿ ಸಂತೆ ಮೈದಾನದಲ್ಲಿ ಸ್ವಂತ ಕಟ್ಟಡದಲ್ಲಿ ಆರಂಭಗೊಂಡಿತು.

ಅಂದಿನಿಂದ ಇಂದಿವರೆಗೂ ಕಿರಿದಾದ ಕಟ್ಟಡದಲ್ಲಿ ನಡೆಯುತ್ತಿದೆ. ಕಾಲ ಬದಲಾದಂತೆ ಪುಸ್ತಕಗಳು ಹೆಚ್ಚಾಗಿವೆ. ಕಂಪ್ಯೂಟರ್‌ಗಳು ಬಂದಿವೆ. ಆದರೂ, ಪುಸ್ತಕ ಜೋಡಿಸಲು ಕಪಾಟು ಇಲ್ಲದ ಕಾರಣ ಉತ್ತಮ ಗ್ರಂಥಗಳನ್ನು ಮೂಟೆಕಟ್ಟಿ ಇಡಲಾಗಿದೆ.

ಕಂಪ್ಯೂಟರ್ ಇದ್ದರೂ ಬಿಲ್ ಪಾವತಿ ಮಾಡಲು ಇಂಟರ್ ನೆಟ್ ಸೌಲಭ್ಯ ಇಲ್ಲ. ಪುಸ್ತಕ, ದಿನಪತ್ರಿಕೆ ಓದಲು ಬರುವವರಿಗೆ ಇಕ್ಕಟ್ಟಾದ ಜಾಗದಲ್ಲಿ ಅವಕಾಶ ನೀಡಲಾಗಿದೆ. ಮಳೆ ಬಂದರಂತೂ ನೀರು ಸೋರಿ ಪುಸ್ತಕಗಳು ಹಾಳಾಗುತ್ತಿವೆ. ಪುಸ್ತಕ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಹೊದಿಕೆ ಅನಿವಾರ್ಯವಾಗಿದೆ.

ಇನ್ನೂ ಗ್ರಂಥಾಲಯ ನಿರ್ವಹಣೆಗೆ ಸೂಕ್ತ ಸಿಬ್ಬಂದಿ ಇಲ್ಲ. ಎರಡು ವರ್ಷದಿಂದ ಗ್ರಂಥಪಾಲಕರಿಲ್ಲದೆ ಸಹಾಯಕಿ ಉಸ್ತುವಾರಿಯಲ್ಲಿ ಗ್ರಂಥಾಲಯ ನಿರ್ವಹಣೆ ಮಾಡಲಾಗುತ್ತಿದೆ.

ಗ್ರಂಥಾಲಯದ ಮೇಲ ಅಂತಸ್ತು ನಿರ್ಮಾಣದ ಜತೆಗೆ ಮೂಲಸೌಕರ್ಯ (ಪುರುಷರ ಮತ್ತು ಮಹಿಳೆಯರ ಶೌಚಾಲಯ ನಿರ್ಮಾಣ) ಮತ್ತು ಮೆಟ್ಟಿಲು ನಿರ್ಮಾಣಕ್ಕೆ ₹20ಲಕ್ಷ ಹಣ ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 10 ತಿಂಗಳು ಕಳೆದರೂ ಗುತ್ತಿಗೆದಾರರು ಮೀನಮೇಷ ಎಣಿಸುತ್ತಿದ್ದಾರೆ.

ಜ್ಞಾನ ಭಂಡಾರವಾದ ಸಾರ್ವಜನಿಕ ಗ್ರಂಥಾಲಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಬೇಕಾಗಿದೆ. ₹20 ಲಕ್ಷ ಬಿಡುಗಡೆಯಾಗಿದ್ದರೂ ಕಾಮಗಾರಿ ಪ್ರಾರಂಭಕ್ಕೆ ಶಾಸಕರ ಶುಭ ಮಹೂರ್ತಕ್ಕಾಗಿ ಕಾಯುತ್ತಿರುವುದು ಸರಿಯಲ್ಲ ಎಂದು ಕರವೇ ಅಧ್ಯಕ್ಷ ಮಂಜುನಾಥ್ ಹೇಳುತ್ತಾರೆ.

ಸುಸಜ್ಜಿತ ಗ್ರಂಥಾಲಯ ಇದ್ದರೆ ಸುತ್ತಮುತ್ತಲಿನ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಬರುವ ಗ್ರಾಮಾಂತರ ಪ್ರದೇಶದ  ಯುವ ಜನರಿಗೆ ಈ ಸೌಲಭ್ಯ ಇಲ್ಲದೆ ಅನಾನುಕೂಲವಾಗಿದೆ ಎನ್ನುತ್ತಾರೆ ಕನ್ನಡ ಸೇನೆ ಅಧ್ಯಕ್ಷ ಶ್ರೀನಿವಾಸ್.

ಗ್ರಂಥಾಲಯ ಸಪ್ತಾಹ ಆಚರಣೆ ಜತೆ ಗ್ರಂಥಾಲಯಕ್ಕೆ ಸೂಕ್ತ ಸಿಬ್ಬಂದಿ ಮತ್ತು ಮೂಲಸೌಕರ್ಯ ಕಲ್ಪಿಸಲು ಗಮನಹರಿಸಬೇಕೆಂದು ನಾಗರಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT