ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಸನ ಮುಕ್ತಿಗೆ ಇಚ್ಛಾಶಕ್ತಿಯೇ ಮದ್ದು

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮೇಯರ್ ಫರೀದಾ ಬೇಗಂ
Last Updated 16 ಫೆಬ್ರುವರಿ 2020, 9:06 IST
ಅಕ್ಷರ ಗಾತ್ರ

ತುಮಕೂರು: ‘ಇಚ್ಛಾಶಕ್ತಿ ಇದ್ದರೆ ಮಾತ್ರ ನಾವು ದುಶ್ಚಟಗಳಿಂದ ದೂರ ಇರಬಹುದು, ಹೊರಬರಬಹುದು’ ಎಂದು ಮೇಯರ್ ಫರೀದಾ ಬೇಗಂ ಹೇಳಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ ಹಾಗೂ ತುಮಕೂರು ನೆಹರೂ ಯುವ ಕೇಂದ್ರ ಸಹಯೋಗದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳಿಂದ ಸಂತೋಷ ಸಿಗುತ್ತದೆ ಎಂದು ಅರ್ಧದಷ್ಟು ಯುವಜನರು ಈಗಾಗಲೇ ಅದಕ್ಕೆ ಬಲಿ ಆಗಿದ್ದಾರೆ. ಇನ್ನೊಬ್ಬರಿ ಹೋಲಿಕೆ ಮಾಡಿಕೊಂಡು, ‘ನಾನೇನು ಜಾಸ್ತಿ ಕುಡಿಯಲ್ಲಪ್ಪ, ಒಂದು ಪೆಗ್‌ ಅಷ್ಟೆ’ ಎಂದು ಸಮರ್ಥಿಸಿಕೊಳ್ಳುವ ಮನೋಭಾವ ಬೆಳೆಯುತ್ತಿದೆ. ವಿಷವನ್ನು ಸ್ಪಲ್ಪ ಕುಡಿದರೂ ದುಷ್ಪರಿಣಾಮ ಬಿರುತ್ತದೆ ಎಂದು ಎಚ್ಚರಿಸಿದರು.

ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸುತ್ತ ಪ್ರತಿ ಸಂಭ್ರಮಾಚರಣೆಯಲ್ಲಿ ಮದ್ಯಪಾನ, ಧೂಮಪಾನ ಮಾಡುವುದು ಹೆಮ್ಮೆಯ ವಿಷಯ ಎನಿಸಿಕೊಳ್ಳುವ ಕೆಟ್ಟ ಸಂಪ್ರದಾಯ ಬೆಳೆಯುತ್ತಿದೆ. ಈ ಬಗ್ಗೆ ಪ್ರತಿ ಮನೆಯಿಂದಲೇ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ನಾವೆಲ್ಲರೂ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಇಡೀ ಸಮಾಜ ಸುಂದರವಾಗುತ್ತದೆ ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ‘ನಮಗೆ ನಾವೇ ಶಿಲ್ಪಿಗಳು’ ಎಂದು ವಿವೇಕಾನಂದರು ಹೇಳಿದ್ದಾರೆ. ಉನ್ನತ ವಿಚಾರಗಳನ್ನು ಅಳವಡಿಸಿಕೊಳ್ಳದಿದ್ದರೆ, ಜೀವನ ಕಳಪೆ ಆಗಲು ನಾವೇ ಅನುಮತಿ ನೀಡಿದಂತೆ. ವ್ಯಸನದ ವಿಷ ವರ್ತುಲದ ಒಳಗೆ ಯಾರು ಪ್ರವೇಶಿಸಬಾರದು ಎಂದು ಸಲಹೆ ನೀಡಿದರು.

ಶಕ್ತವಾದ ದೇಹದಲ್ಲಿ ಸಶಕ್ತವಾದ ಮನಸ್ಸಿರುತ್ತದೆ. ‘ಶರೀರ ಮಾಧ್ಯಂ ಕರು ಧರ್ಮ ಸಾಧನಂ’ ಎಂಬ ಮಾತಿನಂತೆ ಬದುಕಿನ ಸಾರ್ಥಕತೆಯು ಶಾರೀರಿಕ ಆರೋಗ್ಯದ ಮೇಲೆ ಅವಲಂಬಿಸಿರುತ್ತದೆ. ಶಾರೀರಿಕ, ಮಾನಸಿಕ, ಬೌದ್ಧಿಕ ಆರೋಗ್ಯ ಕಾಪಾಡಿಕೊಳ್ಳುವುದು ಆದ್ಯತೆ ಆಗಬೇಕು ಎಂದು ಹೇಳಿದರು.

ದುಡಿದಿದ್ದನ್ನು ಕುಡಿತಕ್ಕೆ ಹಾಕಿ ದೇಹ, ಮನಸ್ಸು ಮತ್ತು ಮನೆ ಹಾಳು ಮಾಡಿಕೊಂಡು ಬೀದಿಪಾಲಾಗಿರುವ ಎಷ್ಟೋ ಉದಾಹರಣೆಗಳನ್ನು ನೋಡುತ್ತಿದ್ದೇವೆ. ಜೀವನವನ್ನು ಸುಂದರ ಆಗಿಸಿಕೊಳ್ಳುವುದು ಅಥವಾ ವಿಕೃತಗೊಳಿಸಿಕೊಳ್ಳುವುದು ಅವರವರ ಕೈಯಲ್ಲೇ ಇರುತ್ತದೆ ಎಂದರು.

ಅಚರ್ಡ್ ಸಂಸ್ಥೆಯ ಡಾ.ಎಚ್.ಜಿ.ಸದಾಶಿವಯ್ಯ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಬಾಲಭವನದ ವರೆಗೂ ನಡೆದ ಜಾಗೃತಿ ಜಾಥಾದಲ್ಲಿ ಸಿದ್ಧಗಂಗಾ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾರವಿಕುಮಾರ್, ಮಂಡಳಿಯ ಕಾರ್ಯದರ್ಶಿ ರೋಹಿಣಿ ಕೆ., ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT