ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಹಾ ಹತ್ಯೆ: ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ

ಹಿಂದೂಗಳ ವಿಚಾರದಲ್ಲಿ ‘ಮೌನ ರಾಮಯ್ಯ’: ಅಶೋಕ ವಾಗ್ದಾಳಿ
Published 23 ಏಪ್ರಿಲ್ 2024, 5:31 IST
Last Updated 23 ಏಪ್ರಿಲ್ 2024, 5:31 IST
ಅಕ್ಷರ ಗಾತ್ರ

ತುಮಕೂರು: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಖಂಡಿಸಿ ಬಿಜೆಪಿ, ಜೆಡಿಎಸ್ ಜಂಟಿಯಾಗಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು. ಕಾಂಗ್ರೆಸ್ ನಾಯಕರು ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಮುಗಿಬಿದ್ದರು.

ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಘೋಷಣೆ ಕೂಗಿದರು. ಮುಸ್ಲಿಮರನ್ನು ಓಲೈಸುವ ಕೆಲಸದಲ್ಲಿ ಸರ್ಕಾರ ನಿರತವಾಗಿದೆ. ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ‘ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ. ನೇಹಾ ಹತ್ಯೆ ಪ್ರಕರಣದಲ್ಲಿ ಅಪರಾಧಿ ಸ್ಥಾನದಲ್ಲಿ ನಿಂತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಕ್ಸಲಿಸಂ ಬಂತು, ಭಯೋತ್ಪಾದನೆ ಹೆಚ್ಚಾಯಿತು, ಈಗ ಲವ್ ಜಿಹಾದ್ ನಡೆಯುತ್ತಿದೆ. ಆ ಹೆಸರಿನಲ್ಲಿ ನೇಹಾ ಹತ್ಯೆಯಾಗಿದೆ. ಇದನ್ನು ಇಡೀ ದೇಶವೇ ನೋಡುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ಮಾತ್ರ ಲವ್ ಕೇಸು ಎನ್ನುತ್ತಿದ್ದಾರೆ. ನಾವು ಸಹ ಅದನ್ನೇ ಹೇಳುತ್ತಿರುವುದು. ಇವರಿಗೆ ಲವ್ ಎಂದರೇನು? ಲವ್ ಜಿಹಾದ್ ಎಂದರೇನು? ಎಂಬ ಬಗ್ಗೆ ಸಾಮಾನ್ಯ ಜ್ಞಾನವೂ ಇಲ್ಲವೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನವರು ಮುಸ್ಲಿಂ ಯುವಕರಿಗೆ ಹಣ ಕೊಟ್ಟು ತರಬೇತಿ ನೀಡಿ ಕಳುಹಿಸುತ್ತಿರುವುದು ಲವ್ ಜಿಹಾದ್ ಅಲ್ಲದೆ, ಬೇರೇನು? ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಸಿದ್ದರಾಮಯ್ಯ ಅವರು ಹಿಂದೂಗಳ ವಿರುದ್ಧ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಮುಸ್ಲಿಮರ ವಿಚಾರ ಬಂದಾಗ ಬೇರೆ ಯಾರಿಗೆ ತೊಂದರೆಯಾದರೂ ಸುಮ್ಮನಾಗುತ್ತಾರೆ. ಹಿಂದೂಗಳ ವಿಚಾರದಲ್ಲಿ ‘ಮೌನ ರಾಮಯ್ಯ’ ಆಗುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮುಸ್ಲಿಂ ಯುವಕರನ್ನು ‘ಬ್ರದರ್ಸ್’ ಎನ್ನುತ್ತಾರೆ ಎಂದು ಟೀಕಿಸಿದರು.

ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದೆ. ಗೂಂಡಾ ರಾಜ್ಯವನ್ನಾಗಿ ಮಾಡಿದೆ. ತೊಘಲಕ್ ದರ್ಬಾರ್ ನಡೆಸುತ್ತಿದೆ. ಕಾನೂನು, ಸುವ್ಯವಸ್ಥೆ ಹಾಳಾಗಿದೆ. ಈ ಸರ್ಕಾರಕ್ಕೆ ತಾಕತ್ತಿದ್ದರೆ ನೇಹಾ ಹತ್ಯೆ ಆರೋಪಿಗೆ ಗುಂಡು ಹೊಡೆಯಬೇಕು ಎಂದು ಸವಾಲು ಹಾಕಿದರು.

ಶಾಸಕರಾದ ಬಿ.ಸುರೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್, ಮುಖಂಡ ಬಂಡೆಪ್ಪ ಕಾಶಂಪೂರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಸರ್ಕಾರ ಸತ್ತ ಸ್ಥಿತಿಯಲ್ಲಿದೆ: ಸೋಮಣ್ಣ ‘ರಾಜ್ಯದ ಕಾಂಗ್ರೆಸ್ ಸರ್ಕಾರ ಅರಾಜತೆಯ ಕೂಪವಾಗಿದೆ. ಈ ಸರ್ಕಾರ ಸತ್ತ ಸ್ಥಿತಿಯಲ್ಲಿದೆ. ಕಾಲೇಜು ಪ್ರಾಂಶುಪಾಲರ ಕೊಠಡಿ ಎದುರೇ ಲವ್ ಮಾಡುವಂತೆ ಒತ್ತಾಯಿಸಿ ನೇಹಾಗೆ 9 ಬಾರಿ ಇರಿಯುತ್ತಾನೆ ಎಂದರೆ ರಾಜ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಎಷ್ಟರ ಮಟ್ಟಿಗೆ ರಕ್ಷಣೆ ಇದೆ’ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಇತಿ ಮಿತಿ ದೂರದೃಷ್ಟಿಯ ಚಿಂತನೆಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಸರ್ಕಾರಗಳು ಅಧಿಕಾರದಲ್ಲಿದ್ದರೆ ಜನರ ದೃಷ್ಟಿಯಲ್ಲಿ ನಾವು ಏನಾಗುತ್ತೇವೆ ಎಂಬುದನ್ನು ಆಲೋಚಿಸಬೇಕು. ಮುಸ್ಲಿಂರ ಓಲೈಕೆಯಲ್ಲಿ ತೊಡಗಿದೆ. ಹಿಂದೂ ಹೆಣ್ಣು ಮಕ್ಕಳಿಗೆ ಈ ಸರ್ಕಾರದಲ್ಲಿ ಗೌರವ ಸಿಗುತ್ತಿಲ್ಲ. ಕೊಲೆ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT