ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕಾಡುಗೊಲ್ಲರ ನಿಗಮ ನನೆಗುದಿಗೆ

ಬೆಂಗಳೂರಿನಲ್ಲಿ ಸಮುದಾಯದ ಮುಖಂಡರ ಸಭೆ: ಸಿ.ಎಂ ಭೇಟಿಗೆ ನಿರ್ಧಾರ
Last Updated 15 ನವೆಂಬರ್ 2020, 21:55 IST
ಅಕ್ಷರ ಗಾತ್ರ

ತುಮಕೂರು: ಶಿರಾ ಉಪಚುನಾವಣೆ ಹೊಸ್ತಿಲಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಕಾಡುಗೊಲ್ಲ ಅಭಿವೃದ್ಧಿ ನಿಗಮದ ರಚನೆ ನನೆಗುದಿಗೆ ಬಿದ್ದಿರುವುದಕ್ಕೆ ಕಾಡುಗೊಲ್ಲ ಸಮುದಾಯದ ಮುಖಂಡರಿಂದ ಆಕ್ರೋಶ ‌ವ್ಯಕ್ತವಾಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ನಿಗಮ ರಚನೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದರು. ನವೆಂಬರ್ ಎರಡನೇ ವಾರವಾದರೂ ಬೈಲಾ ರಚನೆ, ನಿಗಮ ರಚನೆಯ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳದಿರುವುದು, ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಹಾಗೂ ಅನುದಾನ ಬಿಡುಗಡೆ ಆಗದಿರುವ ಬಗ್ಗೆ ಅಸಮಾಧಾನ ಮೂಡಿದೆ.

ಉಪಚುನಾವಣೆ ಫಲಿತಾಂಶ ಘೋಷಣೆಯಾದ ತಕ್ಷಣವೇ ನಿಗಮ ರಚನೆ ಆಗುತ್ತದೆ ಎನ್ನುವ ಆಶಾವಾದ ಸಮುದಾಯದಲ್ಲಿ ಇತ್ತು. ಆದರೆ ಈಗ ಸರ್ಕಾರ ನಿಧಾನಗತಿಯ ಧೋರಣೆ ಅನುಸರಿಸುತ್ತಿದೆ ಎಂದು ಮುಖಂಡರು ದೂರುತ್ತಿದ್ದಾರೆ.

ಈ ಸಂಬಂಧ ಚರ್ಚಿಸುವ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಭಾನುವಾರ (ನ.15) ರಾಜ್ಯದ ವಿವಿಧ ಜಿಲ್ಲೆಗಳ ಕಾಡುಗೊಲ್ಲ ಸಮುದಾಯದ ಮುಖಂಡರು ಸಭೆ ನಡೆಸಿದರು.

‘ಬೆಳಗಾವಿ ಮತ್ತು ಬಸವಕಲ್ಯಾಣ ಉಪಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ ₹50 ಕೋಟಿ ಮೀಸಲಿಟ್ಟಿದೆ. ಆದರೆ ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೆ ನಿರ್ದಿಷ್ಟ ಅನುದಾನದ ಪ್ರಸ್ತಾಪವಿಲ್ಲ. ಬಾಯಿ ಮಾತಿಗೆ ₹ 100 ಕೋಟಿ ನೀಡುತ್ತೇವೆ ಎಂದಿದ್ದಾರೆ. ತಕ್ಷಣವೇ ನಿಗಮದ ಬೈಲಾ ಸಿದ್ಧಗೊಳಿಸಬೇಕು. ಅಧ್ಯಕ್ಷರನ್ನುನೇಮಿಸಿ, ಅನುದಾನ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಯಿತು’ ಎಂದು ಮುಖಂಡರೊಬ್ಬರು ತಿಳಿಸಿದರು.

‘ಈ ಬಗ್ಗೆ ಗಮನಸೆಳೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಲು ನಿರ್ಧರಿಸಿದ್ದೇವೆ.
ಕೆಲವು ಪಟ್ಟಭದ್ರರು ಈಗಲೂ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಹೆಸರನ್ನು ಗೊಲ್ಲ ಅಭಿವೃದ್ಧಿ ನಿಗಮ ಎಂದು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗೊಂದು ವೇಳೆ ಮಾಡಿದರೆ ಹೋರಾಟ ನಡೆಸುತ್ತೇವೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾಡುಗೊಲ್ಲ ಸಮುದಾಯದ ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಸಿ.ಎಂ.ನಾಗರಾಜು, ಚಂಗಾವರ ಮಾರಣ್ಣ, ದೊಡ್ಡಮಲ್ಲಯ್ಯ ಮತ್ತಿತರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ.

‘ಶಿರಾ ಉಪಚುನಾವಣೆಯಲ್ಲಿ ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಿದ್ದೇವೆ. ಸ್ವಲ್ಪ ವಿಳಂಬವಾಗಿದೆ. ಆದರೆ ಮುಖ್ಯಮಂತ್ರಿ ಅವರು ಅನುದಾನವನ್ನು ನೀಡುವ ವಿಶ್ವಾಸ ಇದೆ. ಶೀಘ್ರದಲ್ಲಿಯೇ ಅವರನ್ನು ಭೇಟಿ ಮಾಡುತ್ತೇವೆ’ ಎನ್ನುವರು ತುಮಕೂರು ಜಿಲ್ಲಾ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಂ.ಈರಣ್ಣ.

‘2018ರ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಾನು ಮುಖ್ಯಮಂತ್ರಿಯಾದರೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡುವೆ ಎಂದು ಭರವಸೆ ನೀಡಿದ್ದರು. ಅದು ಶಿರಾ ಉಪಚುನಾವಣೆ ಸಮಯದಲ್ಲಿ ಘೋಷಣೆ ಆಯಿತು. ತಕ್ಷಣವೇ ಹಣ ಬಿಡುಗಡೆಯ ಸಾಧ್ಯತೆ ಕಡಿಮೆ ಇದೆ. ಮುಂದಿನ ಬಜೆಟ್‌ನಲ್ಲಿ ಹಣ ನೀಡಬಹುದು. ಆದರೆ ಮುಖ್ಯಮಂತ್ರಿ ಅವರು ವಿಶೇಷ ಆದ್ಯತೆ ನೀಡಿ ನಿಗಮಕ್ಕೆ ತಕ್ಷಣ ಹಣ ನೀಡಬೇಕು’ ಎಂದು ಮುಖಂಡರು ಆಗ್ರಹಿಸುವರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT