ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ | ‘ಆದರ್ಶ’ ಅನುದಾನವಿಲ್ಲ: ನರೇಗಾ ಆಸರೆ

ಸೌಕರ್ಯದಿಂದ ವಂಚಿತವಾದ ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾದ ಕುರಂಕೋಟೆ
Published 22 ಸೆಪ್ಟೆಂಬರ್ 2023, 6:15 IST
Last Updated 22 ಸೆಪ್ಟೆಂಬರ್ 2023, 6:15 IST
ಅಕ್ಷರ ಗಾತ್ರ

ಕೊರಟಗೆರೆ: ಇದು ಹೆಸರಿಗಷ್ಟೇ ಸಂಸದರ ಆದರ್ಶ ಗ್ರಾಮ. ಆದರೆ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಶೂನ್ಯ. 

ತಾಲ್ಲೂಕಿನ ಚನ್ನರಾಯನದುರ್ಗಾ ಹೋಬಳಿ ವ್ಯಾಪ್ತಿಯ ಕುರಂಕೋಟೆ ಗ್ರಾಮ ಪಂಚಾಯಿತಿ ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾಗಿದ್ದರೂ ಮೂಲ ಸೌಕರ್ಯಗಳಿಂದಲೂ ವಂಚಿತವಾಗಿದೆ.

ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿ ನಾಲ್ಕು ಮುಕ್ಕಾಲು ವರ್ಷಗಳೇ ಕಳೆದರೂ ಈವರೆಗೆ ಉತ್ತಮ ಅಭಿವೃದ್ಧಿ ಕಾಮಗಾಗಿ ನಡೆದಿಲ್ಲ. ಸಂಸದರ ವಿಶೇಷ ಅನುದಾನ ಕೂಡ ಈವರೆಗೆ ಬಂದಿಲ್ಲ. ಸುಸಜ್ಜಿತ ಚರಂಡಿ, ರಸ್ತೆ ಮೊದಲಾದ ಸೌಲಭ್ಯಗಳೂ ಮರೀಚಿಕೆಯಾಗಿದೆ.

ಆದರ್ಶ ಗ್ರಾಮಕ್ಕೆ ಆಯ್ಕೆಯಾದ ಪ್ರಾರಂಭದಲ್ಲಿ ಸಭೆ ನಡೆಸಿ, ಅದ್ದೂರಿ ಕಾರ್ಯಕ್ರಮ ಮಾಡುವ ಮೂಲಕ ಉದ್ಘಾಟಿಸಲಾಗಿತ್ತು. ಆನಂತರ ದಾಖಲೆಗೆ ಸೀಮಿತವಾಯಿತು ಎನ್ನುತ್ತಾರೆ ಸ್ಥಳೀಯರು.‌

ಆದರ್ಶ ಗ್ರಾಮದ ಪರಿಕಲ್ಪನೆಯಂತೆ ಇಡೀ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಅಭಿವೃದ್ಧಿಯಾಗಲಿವೆ ಎಂಬ ಭರವಸೆ ಇತ್ತು. ಆದರೆ ಶಂಬೋನಹಳ್ಳಿ ಗ್ರಾಮದಲ್ಲಿ ಒಂದು ಚರಂಡಿ ಕೆಲಸ ಹೊರತು ಪಡಿಸಿ ಬೇರೆ ಯಾವ ಕೆಲಸವೂ ಆಗಿಲ್ಲ.

ಹೇಳಿಕೊಳ್ಳುವಂತಹ ಯಾವ ಕೆಲಸವೂ ಆಗಿಲ್ಲ. ಶಂಭೋನಹಳ್ಳಿಯಲ್ಲಿ ಕಾಟಾಚಾರಕ್ಕೆ ಒಂದು ಚರಂಡಿ ಕಾಮಗಾರಿ ನಡೆದಿದೆ. ಇನ್ನೇನು ಅವರ ಅಧಿಕಾರ ಅವಧಿ ಮುಗಿಯಲಿದ್ದು ಕೆಲಸ ಆಗುವ ನಿರೀಕ್ಷೆಯೂ ಉಳಿದಿಲ್ಲ.
–ನಟೇಶ್, ಗ್ರಾಮ ಪಂಚಾಯಿತಿ ಸದಸ್ಯ

ಕುರಂಕೋಟೆ ಪಂಚಾಯಿತಿ ವ್ಯಾಪ್ತಿಗೆ 6 ವಾರ್ಡ್, 11 ಹಳ್ಳಿಗಳು ಒಳಪಡಲಿವೆ. ಅವುಗಳಲ್ಲಿ ಬಹುತೇಕ ಗ್ರಾಮಗಳಿಗೆ ವ್ಯವಸ್ಥಿತ ರಸ್ತೆ ಸೌಲಭ್ಯಗಳಿಲ್ಲ. ಬಹುತೇಕ ಗ್ರಾಮಗಳು ಸಾರಿಗೆ ಸೌಲಭ್ಯದಿಂದ ವಂಚಿತವಾಗಿವೆ. ರಸ್ತೆ ವ್ಯವಸ್ಥೆ ಇಲ್ಲದ ಕಾರಣಕ್ಕೆ ಬಸ್ ಸೌಕರ್ಯ ಇಲ್ಲ. ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಆಟೊ, ದ್ವಿಚಕ್ರ ವಾಹನಗಗಳೇ ಆಧಾರ. ತುರ್ತು ಸಂದರ್ಭದಲ್ಲಿ ಇಲ್ಲಿನ ಜನರ ಸಂಕಷ್ಟ ಮತ್ತಷ್ಟು ಬಿಗಡಾಯಿಸುತ್ತದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರಷರ್ ಹಾವಳಿ ಹೆಚ್ಚಿದೆ. ನಿಯಮ ಮೀರಿ ಗ್ರಾಮಗಳಿಗೆ ಹೊಂದಿಕೊಂಡಂತೆ ಕ್ರಷರ್ ಇರುವುದರಿಂದ ಇಲ್ಲಿನ ಬಹುತೇಕ ಗ್ರಾಮಗಳು ಮಾಲಿನ್ಯದಿಂದ ನಲುಗಿವೆ. ಅನೇಕ ಬಾರಿ ಸ್ಥಳೀಯರು ಪ್ರತಿಭಟಿಸಿದ್ದರೂ ಪ್ರಯೋಜನವಾಗಿಲ್ಲ.

ಆದರ್ಶ ಗ್ರಾಮ ಯೋಜನೆಯಡಿ ಯಾವುದೇ ವಿಶೇಷ ಅನುದಾನ ಬಂದಿಲ್ಲ. ನರೇಗಾ ಕಾಮಗಾರಿ ಬಿಟ್ಟರೆ ಉಳಿದ ಕೆಲಸ ಆಗಿಲ್ಲ. ಈ ಹಿಂದಿನ ಸಿಇಒ ನರೇಗಾ ಯೋಜನೆಯಡಿ ಕೆಲಸ ಮಾಡಲು ಸೂಚಿಸಿದ್ದರು.
ರಂಗನಾಥ, ಪಿಡಿಒ

ಆದರ್ಶ ಗ್ರಾಮ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಸರ್ಕಾರ ನೀಡದಿದ್ದರೂ, ಸಂಸದರ ಅನುದಾನ ಬಳಸಿಕೊಳ್ಳುವ ಅವಕಾಶ ಇದೆ. ಆದರೆ ಅದನ್ನು ಈ ವ್ಯಾಪ್ತಿಯಲ್ಲಿ ಎಲ್ಲೂ ಬಳಸಿಲ್ಲ. ಈಚೆಗೆ ನಡೆದ ಸಭೆಯೊಂದರಲ್ಲಿ ಈ ಹಿಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾದಿಕಾರಿಗಳು ನರೇಗಾ ಯೋಜನೆಯ ಅನುದಾನವನ್ನೇ ಆದರ್ಶ ಗ್ರಾಮ ಅಭಿವೃದ್ಧಿ ಕಾಮಗಾರಿಗೆ ಬಳಸಲು ಅವಕಾಶ ಇದೆ. ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಮಾಡಲು ಸೂಚಿಸಿದ್ದರು ಎಂದು ಸ್ಥಳೀಯ ಜನಪ್ರತಿನಿಧಿಗಳು ಹೇಳುತ್ತಾರೆ.

ಹೇಳಲಷ್ಟೆ ಆದರ್ಶ ಗ್ರಾಮ. ಆದರೆ ಆದರ್ಶ ಗ್ರಾಮ ಅಭಿವೃದ್ಧಿಗೆ ಬರಬೇಕಾದ ಅನುದಾನ ಯಾವುದೂ ಬಂದಿಲ್ಲ. ರಸ್ತೆ ಚರಂಡಿ ಶಾಲೆ ಕಟ್ಟಡ ಇತರೆ ಅಭಿವೃದ್ಧಿ ಕೆಲಸ ನಡೆದಿಲ್ಲ. ಮೂಲ ಸೌಕರ್ಯಕ್ಕೆ ನರೇಗಾ ಅನುದಾನ ಬಳಸಲಾಗಿದೆ.
ತಿಮ್ಮಕ್ಕ, ಗ್ರಾ.ಪಂ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT