ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕೆರೆಯಲ್ಲಿ ನೀರಿಲ್ಲ; ಮುಂದೇನು ಮಾಡುವುದು?

Published 30 ಮೇ 2023, 18:29 IST
Last Updated 30 ಮೇ 2023, 18:29 IST
ಅಕ್ಷರ ಗಾತ್ರ

ತುಮಕೂರು: ನಗರ ಜನರ ನೀರಿನ ದಾಹವನ್ನು ತಣಿಸುತ್ತಿದ್ದ ಬುಗುಡನಹಳ್ಳಿ ಕೆರೆ ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಮುಂದೇನು ಮಾಡುವುದು? ಎಂಬ ಚಿಂತೆ ಮಹಾನಗರ ಪಾಲಿಕೆಯನ್ನು ಕಾಡುತ್ತಿದೆ.

ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಮಳೆಗಾಲ ಆರಂಭಕ್ಕೆ ಮುನ್ನ ಏನೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮಂಗಳವಾರ ನಡೆದ ಪಾಲಿಕೆ ತುರ್ತು ಸಭೆಯಲ್ಲಿ ಸದಸ್ಯರು ಚರ್ಚಿಸಿದರು.

ಬುಗುಡನಹಳ್ಳಿ ಕೆರೆ ಖಾಲಿಯಾದ ಸಮಯದಲ್ಲಿ ಗೊರೂರು ಜಲಾಶಯದಿಂದ (ಹೇಮಾವತಿ ನದಿ) ನೀರು ಹರಿಸಲಾಗುತ್ತದೆ. ಈ ಬಾರಿ ನೀರು ಹರಿದು ಬರುವ ಹೇಮಾವತಿ ನಾಲೆಯ ಆಧುನೀಕರಣ ಕಾಮಗಾರಿಯನ್ನು ತಡವಾಗಿ ಕೈಗೆತ್ತಿಕೊಳ್ಳಲಾಗಿದೆ. ಕೆಲಸ ಮುಗಿಸಲು ಇನ್ನು ಒಂದು ತಿಂಗಳು ಬೇಕಾಗುತ್ತದೆ ಎಂದು ಹೇಮಾವತಿ ನಾಲಾ ವಿಭಾಗದ ಎಂಜಿನಿಯರುಗಳು ಹೇಳುತ್ತಿದ್ದಾರೆ. ಒಂದು ತಿಂಗಳಲ್ಲಿ ಕೆಲಸ ಮುಗಿಸಿ, ಎಲ್ಲವೂ ಸರಿಯಾಗಿದೆ ಎಂಬುದು ಖಚಿತವಾದ ನಂತರ ನೀರು ಹರಿಸಬೇಕಾಗುತ್ತದೆ. ಅಂದರೆ ಒಂದು ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

ಕೆರೆಯಲ್ಲಿರುವ ನೀರು ಇನ್ನು ಎರಡರಿಂದ ಮೂರು ವಾರಗಳಷ್ಟೇ ಪೂರೈಸಲು ಸಾಧ್ಯವಿದೆ. ಹೇಮಾವತಿಯಿಂದ ನೀರು ಹರಿಸಲು ಒಂದೂವರೆಯಿಂದ ಎರಡು ತಿಂಗಳು ಸಮಯ ತೆಗೆದುಕೊಳ್ಳಬಹುದು. ಅಲ್ಲಿಯವರೆಗೂ ಕುಡಿಯುವ ನೀರು ಪೂರೈಕೆಗೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಿದರೂ ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಕೆರೆಯಿಂದ ನೀರು ಸರಬರಾಜು ಮಾಡುವುದನ್ನು ಕಡಿಮೆ ಮಾಡಿ, ಕೊಳವೆ ಬಾವಿಗಳಿಂದ ಹೆಚ್ಚು ನೀರು ಸರಬರಾಜು ಮಾಡುವ ಬಗ್ಗೆ ಸಲಹೆಗಳು ಕೇಳಿ ಬಂದವು.

ಕೊಳವೆ ಬಾವಿಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಪಂಪು ಮೋಟಾರ್‌ಗಳು ಸುಟ್ಟು ಹೋಗುತ್ತಿವೆ. ಮತ್ತಷ್ಟು ಹೊರೆ ಬಿದ್ದರೆ ಮೋಟಾರ್‌ಗಳು ಹಾಳಾಗುವುದು ಅಧಿಕವಾಗುತ್ತದೆ. ಇದರಿಂದ ಮತ್ತೆ ಸಮಸ್ಯೆ ಬಿಗಡಾಯಿಸಲಿದೆ ಎಂದು ಕೆಲವು ಸದಸ್ಯರು ಸಲಹೆ ಮಾಡಿದರು. ಈ ಬಗ್ಗೆ ಚರ್ಚೆಗಳು ನಡೆದವು. ಮಳೆಗಾಲ ಆರಂಭ ಆಗುವವರೆಗೂ ಹಾಗೂ ಹೇಮಾವತಿ ನೀರು ಹರಿಸಲು ಸಾಧ್ಯವಾಗುವವರೆಗೂ ಸರಿದೂಗಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಅಮಾನಿಕೆರೆಯಲ್ಲಿ ನೀರು ಇದ್ದರೂ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಳಚರಂಡಿ ಕೊಳಚೆ ನೀರು ಕೆರೆ ನೀರಿಗೆ ಸೇರಿಕೊಂಡು ಕಲುಷಿತಗೊಂಡಿದೆ. ಇದನ್ನು ತಪ್ಪಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಯಿತು.

ಅಮಾನಿಕೆರೆ ನೀರು ಬಳಕೆಗೆ ಯೋಗ್ಯವೇ, ಬಳಸುವುದಾದರೆ ಯಾವ ರೀತಿ ಶುದ್ಧೀಕರಿಸಬೇಕು ಎಂಬ ಬಗ್ಗೆ ಬೆಂಗಳೂರಿನಿಂದ ತಜ್ಞರ ತಂಡ ಬಂದು ಪರಿಶೀಲಿಸಲಿದೆ. ಈ ತಂಡದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ರಾಜಕಾಲುವೆ ತೆರವು

ಒತ್ತುವರಿಯಾಗಿರುವ ರಾಜಕಾಲುವೆ ತೆರವು ಮಾಡಿ, ಹೂಳು ತೆಗೆಸುವಂತೆ ಸದಸ್ಯರು ಪಕ್ಷ ಭೇದ ಮರೆತು ಒತ್ತಾಯಿಸಿದರು. ನಗರದ ಬಹುತೇಕ ಕಡೆಗಳಲ್ಲಿ ಮಳೆ ನೀರು ಕಾಲುವೆ ಒತ್ತುವರಿಯಾಗಿದೆ. ಇಲ್ಲವೆ ಅದರ ಮೇಲೆ ಕಟ್ಟಡ ಕಟ್ಟಲಾಗಿದೆ. ಕೆಲವು ಕಡೆಗಳಲ್ಲಿ ಕಾಲುವೆಗಳನ್ನು ಮುಚ್ಚಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಇಂತಹ ಕಡೆಗಳಲ್ಲಿ ತೆರವು ಮಾಡುವಂತೆ ಆಗ್ರಹಿಸಿದರು.

ಕಾಲುವೆಗಳಲ್ಲಿ ಹೂಳು ತುಂಬಿಕೊಂಡು ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಜೋರು ಮಳೆ ಬಂದ ಸಮಯದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಹಿಂದಿನ ವರ್ಷ ಸಾಕಷ್ಟು ಸಮಸ್ಯೆಯಾಗಿತ್ತು. ಈ ಬಾರಿ ಮಳೆಗಾಲ ಆರಂಭವಾಗುವ ಮುನ್ನ ಹೂಳು ತೆಗೆದು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸದಸ್ಯರು ಸೂಚಿಸಿದರು.

ರಾಜಕಾಲುವೆ ಒತ್ತುವರಿ ಪತ್ತೆ, ಹೂಳು ತುಂಬಿಕೊಂಡಿರುವ ಬಗ್ಗೆ ಪರಿಶೀಲಿಸಲು ತಂಡ ರಚನೆ ಮಾಡಲಾಗಿತ್ತು. ಕಾಲುವೆ ಒತ್ತುವರಿ ಆಗಿರುವುದನ್ನು ಈ ತಂಡ ಗುರುತು ಮಾಡಿದೆ. ಮುಂದಿನ ದಿನಗಳಲ್ಲಿ ಅದನ್ನು ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸಿಗದ ಅಧಿಕಾರಿಗಳು: ಪಾಲಿಕೆಯಲ್ಲಿ ಅಧಿಕಾರಿ, ನೌಕರರು ಸಾರ್ವಜನಿಕರಿಗೆ ಸಕಾಲಕ್ಕೆ ಲಭ್ಯವಾಗುತ್ತಿಲ್ಲ. ಸದಾ ಒಂದಿಲ್ಲೊಂದು ನೆಪ ಹೇಳಿ ಕಚೇರಿಯಿಂದ ಹೊರಗೆ ಇರುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಬೆಳಿಗ್ಗೆ ಹೊರಗಡೆ ಕೆಲಸ ಮುಗಿಸಿ ಮಧ್ಯಾಹ್ನ 3ರಿಂದ 5 ಗಂಟೆ ವರೆಗೆ ಕಚೇರಿಯಲ್ಲಿ ಹಾಜರಿರುವಂತೆ ಸದಸ್ಯ ಮಲ್ಲಿಕಾರ್ಜುನ್ ಆಗ್ರಹಿಸಿದರು.

ಸಾರ್ವಜನಿಕರು ಸಹಾಯ ಧನಕ್ಕೆ ಮನವಿ ಮಾಡಿ ಸಲ್ಲಿಸಿರುವ ಅರ್ಜಿಗಳಿಗೆ ಹೊಸ ಆಯುಕ್ತರು ಬಂದ ನಂತರ ಒಪ್ಪಿಗೆ ನೀಡಿಲ್ಲ. ಕಳೆದ ನಾಲ್ಕು ತಿಂಗಳಿಂದ ಸುಮಾರು 40–50 ಅರ್ಜಿಗಳು ಬಾಕಿ ಉಳಿದಿದ್ದು, ಜನರು ಪರದಾಡುತ್ತಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಜೆ.ಕುಮಾರ್ ಒತ್ತಾಯಿಸಿದರು.

‘ಆಟೊ ಖರೀದಿ ಹಗರಣದ ತನಿಖೆ ಮುಚ್ಚಿ ಹಾಕಲಾಗಿದೆ‘

ಗೌಪ್ಯ ಸಭೆ ತುರ್ತು ಸಭೆಯ ಮಾಹಿತಿಯನ್ನು ಮಾಧ್ಯಮದವರಿಗೆ ತಿಳಿಸದೆ ಗೌಪ್ಯವಾಗಿ ನಡೆಸಲಾಯಿತು. ಪಾಲಿಕೆಯಲ್ಲಿ ಒಂದಾದ ಮೇಲೆ ಒಂದು ಹಗರಣಗಳು ಬೆಳಕಿಗೆ ಬರುತ್ತಿದ್ದು ಸಭೆಯಲ್ಲಿ ಇಂತಹ ವಿಚಾರಗಳು ಚರ್ಚೆಯಾದರೆ ಸಾರ್ವಜನಿಕರಿಗೆ ಗೊತ್ತಾಗುತ್ತವೆ ಎಂಬ ಕಾರಣಕ್ಕೆ ಸಭೆಗೆ ಆಹ್ವಾನ ನೀಡಿರಲಿಲ್ಲ ಎನ್ನಲಾಗಿದೆ. ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ನಡೆದಿರುವ ಅಕ್ರಮ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಕಸ ಸಂಗ್ರಹಿಸುವ ಆಟೊ ಖರೀದಿ ಹಗರಣವನ್ನು ತನಿಖೆ ಮಾಡದೆ ಮುಚ್ಚಿ ಹಾಕಲಾಗಿದೆ. ನೂತನ ಕಟ್ಟಡದ ನಿರ್ಮಾಣ ಕಳಪೆಯಾಗಿದ್ದು ಈವರೆಗೂ ತನಿಖೆ ಮಾಡಿಲ್ಲ. ನಗರದ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ದೀಪಗಳೇ ಉರಿಯುತ್ತಿಲ್ಲ. ದೀಪ ಅಳವಡಿಸುವ ಕೆಲಸವೂ ಆಗುತ್ತಿಲ್ಲ. ಆದರೂ ಪ್ರತಿ ತಿಂಗಳು ಬಿಲ್ ಹಣ ಪಾವತಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಅಕ್ರಮಗಳ ಬಗ್ಗೆ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT