ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಬೆಲೆ ಏರಿಕೆ: ರೈತರಿಗೆ ಲಾಭವಿಲ್ಲ

Last Updated 13 ಸೆಪ್ಟೆಂಬರ್ 2021, 4:22 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲೂ ಅಡಿಕೆ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗಿದ್ದು, ಕ್ವಿಂಟಲ್ ಧಾರಣೆ ₹57 ಸಾವಿರದಿಂದ ₹58 ಸಾವಿರದ ವರೆಗೂ ಹೆಚ್ಚಳವಾಗಿದೆ. ಆದರೆ, ದರ ಹೆಚ್ಚಳದ ಲಾಭ ರೈತರಿಗೆ ಸಿಗುತ್ತಿಲ್ಲ.

ಕಳೆದ ವರ್ಷ ಇದೇ ಸಮಯದಲ್ಲಿ ಕ್ವಿಂಟಲ್ ₹36 ಸಾವಿರದಿಂದ ₹37 ಸಾವಿರ ಇತ್ತು. ಈಗ ಒಮ್ಮೆಲೆ ಬೆಲೆ ಏರಿಕೆಯಾಗಿದ್ದು, ರೈತರಿಗಿಂತ ಅಡಿಕೆ ತೋಟವನ್ನು ಚೇಣಿ (ಗುತ್ತಿಗೆ) ಪಡೆದವರ್ತಕರಿಗೆ ಹೆಚ್ಚು ಲಾಭವಾಗುತ್ತಿದೆ. ಕಡಿಮೆ ಬೆಲೆಗೆ ತೋಟವನ್ನು ಗುತ್ತಿಗೆ ನೀಡಿದ ರೈತರು ಈಗ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಬೆಲೆ ಏರುತ್ತಿರುವುದನ್ನು ನೋಡಿ ಕಣ್ಣು, ಬಾಯಿ ಬಿಡುವಂತಾಗಿದೆ.

ಕೋವಿಡ್‌ನಿಂದಾಗಿ ಅಡಿಕೆ ಆಮದು ಕಡಿಮೆಯಾಗಿದ್ದು, ಸ್ಥಳೀಯವಾಗಿ ಬೆಳೆದ ಬೆಳೆಗೆ ಬೇಡಿಕೆ ಬಂದಿದೆ. ಹೊಸ ನಿಯಮದ ಪ್ರಕಾರ ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಿಂದ ಹೊರಗೆ ಮಾರಾಟ ಮಾಡಲು ಅವಕಾಶವಿದ್ದು, ಬಹುತೇಕ ವರ್ತಕರು ಮಾರುಕಟ್ಟೆಯಿಂದ ಹೊರಗೆ ಖರೀದಿಸುತ್ತಿದ್ದಾರೆ. ಹಾಗಾಗಿ, ಆವಕದ ನಿಖರ ವಿವರ ಲಭ್ಯವಾಗುತ್ತಿಲ್ಲ. ಎಪಿಎಂಸಿಯಲ್ಲಿ ಕ್ವಿಂಟಲ್ ಬೆಲೆ ₹55,900ರ ವರೆಗೂ ಮಾರಾಟವಾಗಿದೆ. ಮಾರುಕಟ್ಟೆಯಿಂದ ಹೊರಗೆ ಕ್ವಿಂಟಲ್‌ ₹58 ಸಾವಿರದ ವರೆಗೂ ಖರೀದಿ ನಡೆದಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಚೇಣಿಯೇ ಹೊಡೆತ: ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಹೆಚ್ಚುತ್ತಲೇ ಸಾಗಿದ್ದು, ಉತ್ತಮ ಬೆಲೆಯೂ ಸಿಗುತ್ತಿದೆ. ಆದರೆ, ರೈತರು ಅಡಿಕೆ ಕಾಯಿಗಳನ್ನು ತಾವೇ ಕೊಯ್ಲು ಮಾಡಿ ಸಂಸ್ಕರಿಸಿ ಅಡಿಕೆ ಮಾಡಿ ಮಾರಾಟ ಮಾಡುವುದಿಲ್ಲ. ಸಂಸ್ಕೃರಣೆ ಮಾಡುವ ವಿಧಾನವೂ ರೈತರಿಗೆ ಸರಿಯಾಗಿ ಗೊತ್ತಿಲ್ಲ.

ಅಡಿಕೆ ಕಾಯಿ ಕೀಳಿಸಿ, ಸುಲಿದು, ಕತ್ತರಿಸಿ, ಹದವಾಗಿ ಬೇಯಿಸಿ, ಒಣಗಿಸಿ ಮಾರಾಟ ಮಾಡಬೇಕಾಗುತ್ತದೆ. ಹೆಚ್ಚಿನ ಮಂದಿ ಸಣ್ಣ ಪ್ರಮಾಣದಲ್ಲಿ ಬೆಳೆಯುವುದರಿಂದ ಒಣಗಿಸುವ ಯಂತ್ರಗಳನ್ನು ಇಟ್ಟುಕೊಂಡಿಲ್ಲ. ಕೊಯ್ಲು ಮಾಡಿದ ಅಡಿಕೆಯನ್ನು ಮನೆಗಳ ಬಳಿ ಒಣಗಿಸುವುದು
ಕಷ್ಟಕರ. ಮಳೆಗಾಲದಲ್ಲಿ ಬೆಳೆ ಬರುವುದರಿಂದ ಸಂಸ್ಕರಣೆ ಇನ್ನೂ ಕಷ್ಟಕರ. ಮಳೆಯಲ್ಲಿ ನೆನೆಸುವಂತಿಲ್ಲ. ಸಕಾಲಕ್ಕೆ ಕೆಲಸದವರು ಸಿಗದಿರುವುದರಿಂದ ಕೊಯ್ಲು ಮಾಡುವ ಕೆಲಸಕ್ಕೆ ಮುಂದಾಗುವುದಿಲ್ಲ.

ಮಧ್ಯವರ್ತಿಗಳಿಗೆ ಏಪ್ರಿಲ್, ಮೇ ತಿಂಗಳಲ್ಲೇ ತೋಟದಲ್ಲಿರುವ ಬೆಳೆಯ ಆಧಾರದ ಮೇಲೆ ಮಾರಾಟ ಮಾಡುತ್ತಾರೆ. ಕಳೆದ ಏಪ್ರಿಲ್ ಸಮಯದಲ್ಲಿ ಕ್ವಿಂಟಲ್‌ಗೆ ₹30 ಸಾವಿರ ಧಾರಣೆ ಇತ್ತು. ಈ ಬೆಲೆಯನ್ನೇ ಆಧರಿಸಿ, ಇಳುವರಿಯನ್ನು
ಗಮನದಲ್ಲಿ ಇಟ್ಟುಕೊಂಡು ಒಂದು ಅಂದಾಜಿನ ಮೇಲೆ ಚೇಣಿಗೆ ಕೊಡುತ್ತಾರೆ. ಮಾರುಕಟ್ಟೆಯಲ್ಲಿ ₹30 ಸಾವಿರ ಬೆಲೆ ಇದ್ದ ಸಮಯದಲ್ಲಿ, ಸುಮಾರು ₹20 ಸಾವಿರ ಲೆಕ್ಕಾಚಾರದಲ್ಲಿ ರೈತರಿಂದ ತೋಟ
ಖರೀದಿಸುತ್ತಾರೆ.

‘ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾದರೆ ರೈತರು ಹೆಚ್ಚು ಬೆಲೆ ಕೇಳುವಂತಿಲ್ಲ. ಬೆಲೆ ಇಳಿಕೆಯಾದರೂ ಗುತ್ತಿಗೆ ಪಡೆದವರು ರೈತರಿಗೆ ಕಡಿಮೆ ಹಣ ಕೊಡುವಂತಿಲ್ಲ’ ಎಂದು ಬಾಯಿ ಮಾತಿನಲ್ಲೇ ಒಪ್ಪಂದ ಮಾಡಿಕೊಂಡಿರುತ್ತಾರೆ. ಈಗ ಒಮ್ಮೆಲೆ ಬೆಲೆ ಗಗನ ಮುಟ್ಟಿದ್ದರೂ ರೈತರಿಗೆ ಅನುಕೂಲವಾಗುತ್ತಿಲ್ಲ. ವರ್ತಕರಿಗೆ ಲಾಭವಾಗುತ್ತಿದೆ ಎಂದು ರೈತ ಮಹೇಂದ್ರ ಹೇಳುತ್ತಾರೆ.

ಜಿಲ್ಲೆಯಲ್ಲಿ ಶೇ 5ರಷ್ಟು ಮಂದಿಯೂ ಅಡಿಕೆ ಸಂಸ್ಕರಣೆ ಮಾಡುವುದಿಲ್ಲ. ಶೇ 95ರಷ್ಟು ರೈತರು ಗುತ್ತಿಗೆಗೆ ನೀಡಿರುತ್ತಾರೆ. ಗುತ್ತಿಗೆ ಪಡೆದ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತರೇ ಸಂಸ್ಕರಣೆ ಮಾಡಿದರೆ ಮಾತ್ರ ಇಂತಹ ಸಮಯದಲ್ಲಿ ಹೆಚ್ಚು ಹಣ ಸಿಗುತ್ತದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT