ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುದಾನ ವಾಪಸಾದರೆ ಅಧಿಕಾರಿಗಳೇ ಹೊಣೆ‘

Last Updated 4 ಫೆಬ್ರುವರಿ 2021, 5:15 IST
ಅಕ್ಷರ ಗಾತ್ರ

ತುಮಕೂರು: ಕಳೆದ ವರ್ಷದಂತೆ ಈ ಸಲವೂ ಅನುದಾನ ಸರ್ಕಾರಕ್ಕೆ ವಾಪಸಾದರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಎಂಜಿನಿಯರ್ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿ.ಪಂ ಸದಸ್ಯರು ಎಚ್ಚರಿಸಿದರು.

ಜಿ.ಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಬುಧವಾರ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆಂಚಮಾರಯ್ಯ, ‘ಹಿಂದಿನ ವರ್ಷ ಕೆಲಸ ಮುಗಿಸಿ ಸಕಾಲಕ್ಕೆ ಬಿಲ್ ಸಲ್ಲಿಸದೆ ಹಣ ವಾಪಸಾಯಿತು. ಈ ಬಾರಿಯೂ ಪುನರಾವರ್ತನೆಯಾದರೆ ಜಿ.ಪಂ ಹಿರಿಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಹೇಳಿದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು.

ಹಿಂದೆ ಅನುಮೋದನೆ ನೀಡಿದ್ದ ಕಾಮಗಾರಿಗಳನ್ನು ಬದಲಾವಣೆ ಮಾಡುವ ವಿಚಾರ ಚರ್ಚೆಯಾದ ಸಮಯದಲ್ಲೂ ಅನುದಾನ ವಾಪಸಾಗದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳನ್ನು ಸದಸ್ಯರು ಒತ್ತಾಯಿಸಿದರು.

ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್ ಪಾವತಿಯಾಗದಿದ್ದರೆ ಮಾರ್ಚ್ 1ರಂದು ಸಿಇಒ ಎದುರು ಧರಣಿ ಕುಳಿತುಕೊಳ್ಳುವುದಾಗಿ ವೈ.ಎಚ್.ಹುಚ್ಚಯ್ಯ ಎಚ್ಚರಿಸಿದರು.

ಕಳ್ಳ ಬಿಲ್‌ಗೆ ಕಡಿವಾಣ:

‘ಬಿಲ್ ಸಲ್ಲಿಸುವ ಉದ್ದೇಶಕ್ಕೆ ಕಾಮಗಾರಿ ಮಾಡದೆ ಬಿಲ್ ಸಿದ್ಧಪಡಿಸುವುದು, ಗುಣಮಟ್ಟ ಕಾಪಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಕೆಲಸದ ಗುಣಮಟ್ಟ ಪರಿಶೀಲಿಸಿದ ನಂತರ ಬಿಲ್ ಸಲ್ಲಿಸಬೇಕು. ಜಿಎಸ್‌ಕೆತಂತ್ರಾಂಶದಲ್ಲಿಕಾಮಗಾರಿ ವಿವರಗಳು ದಾಖಲಾಗಬೇಕು. ನಂತರವೇ ಖಜಾನೆಗೆ ಬಿಲ್ ಸಲ್ಲಿಸಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣ ಅಭಿವೃದ್ಧಿ ಇಲಾಖೆ ನಿರ್ದೇಶಕರು ಸೂಚನೆ ನೀಡಿದ್ದಾರೆ. ಅದರಂತೆ ಕ್ರಮ ಜರುಗಿಸಲಾಗುವುದು’ ಎಂದು ಸಿಇಒ ಶುಭಾ ಕಲ್ಯಾಣ್ ಎಚ್ಚರಿಕೆ ನೀಡಿದರು.

ಜಿ.ಪಂ.ಗೂ ಕುರುಡು:

ಅಂಗವಿಕಲರಿಗೆ ಸೌಲಭ್ಯ ಒದಗಿಸದಿರುವ ವಿಚಾರ ಅಧಿಕಾರಿಗಳು ಹಾಗೂ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ವಿಷಯ ಪ್ರಸ್ತಾಪಿಸಿದ ಹುಚ್ಚಯ್ಯ, ‘ಜಿ.ಪಂ.ಗೆ ಕಿವಿ ಕೇಳಿಸುತ್ತಿಲ್ಲ. ಕಣ್ಣು ಕಾಣಿಸುತ್ತಿಲ್ಲ’ ಎಂದು ಚುಚ್ಚಿಸಿದರು. ಅಂಗವಿಕಲರ ಸ್ಥಿತಿಯೇ ಜಿ.ಪಂ.ಗೂ ಬಂದಿದೆ ಎಂದು ತರಾಟೆಗೆ ತೆಗೆದುಕೊಂಡರು.

ಅಂಗವಿಕಲ ಕಲ್ಯಾಣ ಅಧಿಕಾರಿ ರಮೇಶ್ ವಿವರಣೆ ನೀಡಿ, ‘ಇಲ್ಲಿ ಇರುವುದು ನಾನೊಬ್ಬನೇ ಅಲ್ಲ. ನನ್ನನ್ನೇ ಏಕೆ ಕೇಳುತ್ತೀರಿ’ ಎಂದು ಸದಸ್ಯರನ್ನು ಪ್ರಶ್ನಿಸಿದರು. ಇದರಿಂದ ಹುಚ್ಚಯ್ಯ, ಇತರ ಸದಸ್ಯರು ಅಸಮಾಧಾನ ಹೊರಹಾಕಿದರು. ‘ಸರಿಯಾಗಿ ಮಾತನಾಡುವುದು ಕಲಿಸಬೇಕು. ಈ ರೀತಿ ಉತ್ತರ ನೀಡಿದ ಅಧಿಕಾರಿಯನ್ನು ಸಭೆಯಿಂದ ಹೊರಗೆ ಕಳುಹಿಸಿ ಕ್ರಮ ಕೈಗೊಳ್ಳಬೇಕು’ ಎಂದು ಹುಚ್ಚಯ್ಯ ಪಟ್ಟುಹಿಡಿದರು. ನಂತರ ಕ್ಷಮೆ ಕೇಳುವಂತೆ ಸಿಇಒ ಸೂಚಿಸಿದರು.

ನೋಟಿಸ್: ಸಭೆಗೆ ಗೈರಾಗಿದ್ದ ಅಂಬೇಡ್ಕರ್, ಆದಿಜಾಂಬವ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ಅಧಿಕಾರಿಗಳಿಗೆ ನೋಟಿಸ್ ಜಾರಿಗೆ ಸಿಇಒ ಸೂಚಿಸಿದರು.

‘ಹಿಂದೆಯೂ ಗೈರಾಗಿದ್ದವರಿಗೆ ನೋಟಿಸ್ ಕೊಟ್ಟಿದ್ದೀರಿ. ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲೂ ಅದೇ ಆಗುತ್ತದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜಿ.ಪಂ ಸಭೆ ಬಗ್ಗೆ ಅಧಿಕಾರಿಗಳಲ್ಲಿರುವ ತಾತ್ಸಾರ ಕಡಿಮೆಯಾಗುವುದಿಲ್ಲ’ ಎಂದು ಕೆಂಚಮಾರಯ್ಯ ಆಗ್ರಹಿಸಿದರು.

ಅಸಹಾಯಕರಾದ ಅಧ್ಯಕ್ಷೆ

‘ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ನಾನೇನು ಮಾಡಲಿ’ ಎಂದು ಜಿ.ಪಂ ಅಧ್ಯಕ್ಷೆ ಲತಾ ರವಿಕುಮಾರ್ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.

ಸದಸ್ಯ ವೈ.ಎಚ್.ಹುಚ್ಚಯ್ಯ, ‘ಒಂದು ಕಡೆ ಕೆಲಸ ಪೂರ್ಣಗೊಂಡಿದ್ದರೂ ಹಣ ಕೊಡುತ್ತಿಲ್ಲ. ಮತ್ತೊಂದು ಕಡೆ ಅನುದಾನ ಬಳಕೆಯಾಗದೆ ವಾಪಸಾಗುತ್ತಿದೆ. ಏನು ಆಡಳಿತ ನಡೆಸುತ್ತಿದ್ದೀರಿ. ಅಧ್ಯಕ್ಷರು, ಸಿಇಒಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲವಾಗಿದೆ. ಯಾವುದೇ ಕೆಲಸಗಳು ಆಗುತ್ತಿಲ್ಲ. ಅಧ್ಯಕ್ಷರು ವಿವರಣೆ ನೀಡಬೇಕು’ ಎಂದು ಆಗ್ರಹಿಸಿದ ಸಮಯದಲ್ಲಿ ಅಧ್ಯಕ್ಷರು ಅಸಹಾಯಕತೆ ತೋಡಿಕೊಂಡರು.

‘ಏನು ಈ ರೀತಿ ಉತ್ತರ ಕೊಡುತ್ತಿದ್ದೀರಿ. ಹಾಗಾದರೆ ಅಧ್ಯಕ್ಷರಾಗಿ ಏನು ಮಾಡುತ್ತಿದ್ದೀರಿ. ನಿಮ್ಮ ಕೈಯಲ್ಲಿ ಕೆಲಸ ಮಾಡಲು, ಕೆಲಸ ಮಾಡಿಸಲು ಆಗುವುದಿಲ್ಲವೆ’ ಎಂದು ಹುಚ್ಚಯ್ಯ ಪ್ರಶ್ನಿಸಿದರು.

ಅಧ್ಯಕ್ಷರು ಪದೇಪದೇ ‘ನಾನೇನು ಮಾಡಲಿ’ ಎಂದರು. ಸದಸ್ಯರಿಂದ ಆಕ್ಷೇಪ ಜೋರಾದಾಗ ‘ಅಧಿಕಾರಿಗಳೇ ಉತ್ತರ ಕೊಡಿ’ ಎಂದು ಅವರ ಕಡೆಗೆ ವಿಷಯಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT