ಬುಧವಾರ, ಮೇ 25, 2022
29 °C
10 ಟನ್ ಈರುಳ್ಳಿ ಕದ್ದು ಸಾಗಿಸಿದ ಆರೋಪಿಗಳ ಬಂಧನ

ಈರುಳ್ಳಿಗಾಗಿ ಅಪಘಾತದ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಲಾರಿ ಅಪಘಾತವಾಗಿದೆ ಎಂದು ಈರುಳ್ಳಿ ಮಾಲೀಕನನ್ನು ನಂಬಿಸಿ ಈರುಳ್ಳಿ ಕದ್ದು ಸಾಗಿಸಿದ್ದ ಲಾರಿ ಚಾಲಕ ಮತ್ತು ಸಹಚರರು ತಾವರೆಕೆರೆ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.

ಲಾರಿ ಚಾಲಕರಾದ ಚೇತನ್, ಸಂತೋಷಕುಮಾರ್, ಬುಡೆನ್ ಸಾಬ್, ದಾದಾಫೀರ್ ಹಾಗೂ ಶೇಖ್ ಅಲಿಖಾನ್ ಬಂಧಿತರು. ಲಾರಿ ಮಾಲೀಕ ತಲೆ ಮರೆಸಿಕೊಂಡಿದ್ದಾನೆ. 

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಉಚ್ಚವನಹಳ್ಳಿ ಗ್ರಾಮದ ಆನಂದ್ ಕುಮಾರ್ ಎನ್ನುವರು ಸುಮಾರು 10.270 ಟನ್ ಈರುಳ್ಳಿಯನ್ನು ಲಾರಿಯಲ್ಲಿ 173 ಪಾಕೆಟ್‌ಗಳಲ್ಲಿ ಚೆನ್ನೈಗೆ ಕಳುಹಿಸಿಕೊಟ್ಟಿದ್ದರು.

ಮಾರ್ಗ ಮಧ್ಯೆ ಈರುಳ್ಳಿಯನ್ನು ಕದ್ದು ಮಾರುವ ದುಸ್ಸಾಹಸಕ್ಕೆ ಆರೋಪಿಗಳು ಕೈಹಾಕಿದರು. ಲಾರಿ ಮಾಲೀಕನ ಸೂಚನೆಯಂತೆ ಹಿರಿಯೂರು ತಾಲ್ಲೂಕಿನ ಗೊರಲಡಕು ಬಳಿ ಮಾರ್ಗ ಮಧ್ಯೆಯೇ 81 ಚೀಲ ಈರುಳ್ಳಿಯನ್ನು ಇಳಿಸಿ, ಉಳಿದ 92 ಚೀಲವನ್ನು ತೆಗೆದುಕೊಂಡು ಬರುವಾಗ ಶಿರಾ ತಾಲ್ಲೂಕಿನ ಬಳಿ ಲಾರಿ ಅಪಘಾತವಾಗಿದೆ ಎನ್ನುವಂತೆ ಬಿಂಬಿಸಿದ್ದಾರೆ.

‘ಶಿರಾ ತಾಲ್ಲೂಕಿನ ಯರಗುಂಟೇಶ್ವರ ನಗರದ ಬಳಿ ಲಾರಿ ಅಪಘಾತವಾಗಿದೆ. ನಾನು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದೇನೆ. ಜನರು ಈರುಳ್ಳಿಯನ್ನು ಹೊತ್ತೊಯ್ದಿದ್ದಾರೆ’ ಎಂದು ಲಾರಿ ಚಾಲಕ ಚೇತನ್ ಮಾಲಿಕರಿಗೆ ತಿಳಿಸಿದ.

ಈರುಳ್ಳಿ ಮಾಲಿಕ ಆನಂದ್ ಕುಮಾರ್ ಸ್ಥಳಕ್ಕೆ ಬಂದು ನೋಡಿದಾಗ ಲಾರಿಯನ್ನು ಉದ್ದೇಶ ಪೂರ್ವಕವಾಗಿ ಪಲ್ಟಿ ಮಾಡಿ ವಂಚನೆ ಮಾಡಿರುವ ಸಂಶಯ ಬಂದು ಚಾಲಕ ಚೇತನ್ ಹಾಗೂ ಸಂತೋಷ ಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ಹಿರಿಯೂರು ತಾಲ್ಲೂಕಿನ ಮಾಳಗೊಂಡನಹಳ್ಳಿಯ ಬುಡೆನ್ ಸಾಬ್, ದಾದಾಫೀರ್ ಹಾಗೂ ಶೇಖ್ ಅಲಿಖಾನ್ ಅವರ ಜೊತೆ ಸೇರಿದ ಲಾರಿ ಮಾಲೀಕ ಗೊರಲಡಕು ಬಳಿ ಇಳಿಸಿದ್ದ 81 ಚೀಲ ಈರುಳ್ಳಿಯನ್ನು ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕಳುಹಿಸಿಕೊಟ್ಟಿದ್ದರು ಎಂದು ತಿಳಿದು ಬಂದಿದೆ.

ಶಿರಾ ಗ್ರಾಮಾಂತರ ಸಿಪಿಐ ಶಿವಕುಮಾರ್, ಪಿಎಸ್ಐ ಮಹಾಲಕ್ಷ್ಮಮ್ಮ, ಎಎಸ್ಐ ರಂಗನಾಥ್ ತಂಡದವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು